Advertisement

ಪ್ರತಿಯೊಬ್ಬರೂ ಕೋವಿಡ್‌ ಬಗ್ಗೆ ಜಾಗೃತರಾಗಿ

10:00 AM Jul 19, 2020 | Suhan S |

ಮಂಡ್ಯ: ಜಿಲ್ಲೆಯ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಾಗ ಕೋವಿಡ್‌ ನಿಯಂತ್ರಣ ಮಾಡಿಕೊಳ್ಳಬಹುದು. ಮಾರಣಾಂತಿಕವಾಗಿ ಆಗುವ ದುಷ್ಪರಿಣಾಮ ತಡೆ ಸಾಧ್ಯವಿದೆ. ಇದರ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಹಾನಂದಿ ಗೋಶಾಲೆ ವತಿಯಿಂದ ನಡೆದ ಕೋವಿಡ್‌-19 ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾನಂದಿ ಗೋಶಾಲೆ ವತಿಯಿಂದ ಕೋವಿಡ್‌ -19 ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಲು ವಾಹನದ ಮುಖಾಂತರ ಜಾಗೃತಿ ಹೋರಾಟ ಮಾಡುತ್ತಿದ್ದಾರೆ. ಪ್ರಸ್ತುತ ಈ ಸೋಂಕು ವಿಶ್ವ ವ್ಯಾಪಿಯಾಗಿ ಹಬ್ಬಿದ್ದು, ಮಂಡ್ಯದಲ್ಲೂ ಈಗಾಗಲೇ ನೂರಾರು ಪ್ರಕರಣಗಳು ಕಂಡು ಬಂದಿವೆ. ಪ್ರತಿಯೊಬ್ಬ ವ್ಯಕ್ತಿಯು ಕೂಡ ಕೋವಿಡ್‌ ಬಗ್ಗೆ ಜಾಗೃತಿಯಾಗಿರುವುದು ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.

ನಮ್ಮ ಪ್ರಾಣ ನಮ್ಮ ಕೈಯಲ್ಲಿದೆ. ಈ ಕೋವಿಡ್‌-19 ಬಂದು ಮರಣ ಹೊಂದಿದರೆ ಬೇರೆಯವರನ್ನು ದೂರಬಾರದು. ಏಕೆಂದರೆ ನಮ್ಮ ರಕ್ಷಣೆ ನಾವು ಮಾಡಿಕೊಳ್ಳಲಿಲ್ಲವೆಂದರೆ ಅದರಿಂದ ಬಂದ ಸಾವಿಗೆ ನಾವೇ ಕಾರಣಕರ್ತರಾಗಿರುತ್ತೇವೆ. ಸ್ಯಾನಿಟೈಸರ್‌ ಬಳಸಬೇಕು. ಅವಶ್ಯಕತೆಯಿದ್ದಾಗ ಮಾತ್ರ ಮನೆಯಿಂದ ಹೊರಗಡೆ ಬರಬೇಕು. 6ರಿಂದ 8 ವಾರಗಳ ಕಾಲ ಮನೆಯಲ್ಲಿಯೇ ಇರಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್‌ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿಗಳಾದ ಟಿ.ಕೆ.ಹರೀಶ್‌, ಅನುಪಮ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next