Advertisement

ನಿತ್ಯ 40 ಸಿಗರೆಟ್‌ ಸೇದುತ್ತಿದ್ದೆ, 87ರಲ್ಲಿ ಬಿಟ್ಟೆ: ಸಿದ್ದು

06:00 AM Oct 01, 2018 | Team Udayavani |

ಮೈಸೂರು: “ದಿನಕ್ಕೆ ನಾನು 40 ಸಿಗರೆಟ್‌ ಸೇದುತ್ತಿದ್ದೆ. ಇಷ್ಟೊಂದು ಸಿಗರೆಟ್‌ ಸೇದಿದರೆ ಹೆಚ್ಚು ದಿನ ಬದುಕುವುದಿಲ್ಲ ಎಂಬ ಅರಿವಾಗಿ 1987ರಲ್ಲಿ ಸಿಗರೆಟ್‌ ಸೇದುವುದನ್ನು ಸಂಪೂರ್ಣವಾಗಿ ಬಿಟ್ಟೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ಮೈಸೂರಿನ ಮಾನಸಗಂಗೋತ್ರಿ ಸೆನೆಟ್‌ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ನಾನು ಕಾಲೇಜು ದಿನದಲ್ಲಿ, ವಕೀಲನಾಗಿದ್ದಾಗ ವಿಪರೀತವಾಗಿ ಸಿಗರೆಟ್‌ ಸೇದುತ್ತಿದ್ದೆ. ನನ್ನ ಸಿಗರೆಟ್‌ ಸೇವನೆ ಚಟ ನೋಡಿದ್ದ ನನ್ನ ಸ್ನೇತರು, ವಿದೇಶಕ್ಕೆ ಹೋಗಿ, ವಾಪಸ್‌ ಬಂದಾಗ, ನನಗೆ ದೊಡ್ಡ ಬಾಕ್ಸ್‌ವೊಂದನ್ನು ಗಿಫ್ಟ್ ಆಗಿ ನೀಡಿದ್ದರು. ಬಾಕ್ಸ್‌ ತೆಗೆದು ನೋಡಿದರೆ, ಎಲ್ಲಾ ಬ್ರಾಂಡ್‌ ಸಿಗರೆಟ್‌ಗಳು ತುಂಬಿದ್ದವು. ಒಂದು ತಿಂಗಳ ಕಾಲ ಅವನ್ನೆಲ್ಲಾ ಸೇದಿ ಮುಗಿಸಿದೆ. ನಂತರ ರಾತ್ರಿ ಮಲಗಿದ್ದಾಗ ನಾನು ಇಷ್ಟೊಂದು ಸಿಗರೆಟ್‌ ಸೇದಿದರೆ ಹೆಚ್ಚು ದಿನ ಬದುಕುವುದಿಲ್ಲ ಎಂಬ ಅರಿವಾಯಿತು ಎಂದರು.

ಸ್ನೇಹಿತರು ನನಗೆ ಸಿಗರೆಟ್‌ನ್ನು ಗಿಫ್ಟ್ ಆಗಿ ತಂದುಕೊಡುವಂತಹ ಸ್ಥಿತಿಯನ್ನು ಮಾಡಿಕೊಂಡೆನಲ್ಲ ಎಂದು ಚಿಂತಿಸುವಂತಾಯಿತು. ಬಳಿಕ, ಸಿಗರೆಟ್‌ ಸೇವನೆ ಮಾಡಬಾರದು ಎಂದು ತೀರ್ಮಾನಿಸಿ 1987ರ ಆಗಸ್ಟ್‌ 17ರಂದು ಸಿಗರೆಟ್‌ ಸೇದುವುದನ್ನು ಸಂಪೂರ್ಣವಾಗಿ ಬಿಟ್ಟೆ. ಈಗ ಅದರ ವಾಸನೆಯೇ ನನಗೆ ಆಗುವುದಿಲ್ಲ. ಕೆಟ್ಟ ಚಟಗಳನ್ನು ಬಿಡುವುದಕ್ಕೆ  ಟೈಂ, ಗಳಿಗೆ, ದಿನ ನಿಗದಿಪಡಿಸಬಾರದು, ಬಿಡಬೇಕು ಅಂದ ತಕ್ಷಣವೇ ಅದನ್ನು ಬಿಟ್ಟು ಬಿಡಬೇಕು ಎಂದು ಅವರು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next