Advertisement

ಪ್ರತೀ ವರ್ಷ ಹತ್ತು ಯಕ್ಷಗಾನಕ್ಕೆ ಆರ್ಥಿಕ ನೆರವು‌ : ಉಪೇಂದ್ರ ಪೈ

01:15 PM Jun 20, 2022 | Team Udayavani |

ಶಿರಸಿ: ಮುಂದಿನ ವರ್ಷಗಳಲ್ಲೂ ಪ್ರತೀ ವರ್ಷ ಹತ್ತು ಯಕ್ಷಗಾನಕ್ಕೆ ಆರ್ಥಿಕ ನೆರವು‌ ನೀಡಲಿದ್ದೇವೆ ಎಂದು ಶಿರಸಿ‌ ಜಿಲ್ಲಾ ಹೋರಾಟ‌ ಸಮಿತಿ ಹಾಗೂ ಉಪೇಂದ್ರ ಪೈ‌ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.

Advertisement

ಶನಿವಾರ ರಾತ್ರಿ ಕಡಬಾಳದಲ್ಲಿ ಶಬರ ಸಂಸ್ಥೆ, ಉಪೇಂದ್ರ ‌ಪೈ ಸೇವಾ ಟ್ರಸ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡ ಯಕ್ಷಗಾನ ಪ್ರದರ್ಶನ ಹಾಗೂ ಸನ್ಮಾನ ಸಮಾರಂಭದಲ್ಲಿ‌ ಪಾಲ್ಗೊಂಡು ಮಾತನಾಡಿದರು.

ಕಳೆದ ಕೋವಿಡ್ ಅವಧಿಯಲ್ಲಿ ಸಂಕಷ್ಟದಲ್ಲಿ ಇದ್ದ‌ ಕಲಾವಿದರಿಗೆ ನೆರವಾಗಿದ್ದೆವು. ಅದೇ ವೇಳೆ ಕಲಾವಿದರಿಗೆ ನೆರವಾಗುವ ಕಾರಣದಿಂದ ಯಕ್ಷದಶ ಎಂದು ಯಕ್ಷಗಾನ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೆವು. ಈಗಾಗಲೇ ಹಲವಡೆ ಏಳು ಯಕ್ಷಗಾನ ನಡೆಸಿದ್ದೇವೆ. ಇನ್ನು ‌ಮುಂದೆಯೂ ಪ್ರತೀ ವರ್ಷ ಒಂದು ಯಕ್ಷಗಾನಕ್ಕೆ 30 ಸಾವಿರದಂತೆ ಮೂರು ಲಕ್ಷ ರೂ. ಟ್ರಸ್ಟ್ ತೆಗೆದಿರಿಸಲಿದೆ‌ ಎಂದರು.

ಕಳೆದ 19 ವರ್ಷದಿಂದ15 ಸಾವಿರ ವಿದ್ಯಾರ್ಥಿಗಳಿಗೆ 60 ಸಾವಿರ ಪಟ್ಟಿಗಳನ್ನು ವಿತರಿಸಲಾಗಿದೆ. ಪ್ರಸಕ್ತ 800 ವಿದ್ಯಾರ್ಥಿಗಳಿಗೆ 12 ಲ.ರೂ.ಪ್ರತಿಭಾ ಪುರಸ್ಕಾರ‌ ನೀಡಲಾಗಿದೆ.‌ ಈ ವರ್ಷ ಕೂಡ ಪಟ್ಟಿ ವಿತರಿಸುತ್ತೇವೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂದರು.

ಕೆಡಿಸಿಸಿ‌ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ‌ ಕೆಶಿನ್ಮನೆ,ಯಕ್ಷಗಾನದ ‌ಮೇಲಿನ ಪ್ರೀತಿ ಉಳಿಯಲು ಧಾರ್ಮಿಕ ಹಿನ್ನಲೆಯಲ್ಲಿ ಕೂಡ ಇದೆ.‌ ಕಲಾವಿದರು ತಲೆ ಮೇಲೆ ಇಟ್ಟುಕೊಂಡು ಕುಣಿಯುವ ಕಿರೀಟಕ್ಕೆ ಪೂಜೆ ಸಲ್ಲಿಸುತ್ತಾರೆ. ಕಿರೀಟವನ್ನು ಗಣಪತಿ‌ ಎಂದು ಪೂಜೆ ಮಾಡಿ‌ ರಂಗಸ್ಥಳಕೆ ಅಪ್ಪಣೆ ಪಡೆಯುತ್ತಾರೆ. ಇಂಥ‌ ಕಲೆಗೆ ಪ್ರೋತ್ಸಾಹ ಆಗಬೇಕು ಎಂದರು.

Advertisement

ತುಳಸಿ ಈಗಿನ ಮಕ್ಕಳಿಗೆ ಮಾದರಿ

ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕ ಪ್ರದರ್ಶಿಸುವ ಈಚೆಗಷ್ಟೇ ಇಂಡಿಯಾ ಬುಕ್ ಆಫ್ ರೆಕಾರ್ಡ ನಲ್ಲಿ‌ ದಾಖಲಾದ ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಯನ್ನು ಆತ್ಮೀಯವಾಗಿ ಗೌರವಿಸಲಾಯಿತು.

ಅತಿ ಸಣ್ಣ ವಯಸ್ಸಿನಲ್ಲೇ ಯಕ್ಷಗಾನದ ಮೂಲಕ ವಿಶ್ವಶಾಂತಿ ಸಂದೇಶ ಸಾರುವ ತುಳಸಿ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿರುವದು ಹೆಮ್ಮೆ. ಈಕೆ ಆಕಳ‌ ಮೈ ತೊಳೆದು, ಗೋಮಯ ಬಾಚಿ, ಹಾಲು ಕರೆಯುವುದು ಈಗಿನ ಮಕ್ಕಳಿಗೆ ಮಾದರಿ ಎಂದು ಸನ್ಮಾನದ ಬಳಿಕ ಹಾಲು‌ಒಕ್ಕೂಟ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪ್ರತಿಭಾ ಸಂಪನ್ನೆಯನ್ನು ಹಾಡಿ ಹೊಗಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಾಲಕಣಿ ಗ್ರಾ.ಪಂ.ಅಧ್ಯಕ್ಷ ತಿಮ್ಮಯ್ಯ ಮ ಹೆಗಡೆ ವಹಿಸಿಕೊಂಡಿದ್ದರು. ಶಾಲಾಭಿವೃದ್ದಿ‌ ಸಮಿತಿ ಅಧ್ಯಕ್ಷ ಗುರುಮೂರ್ತಿ ಹೆಗಡೆ, ನಿವೃತ್ತ ಅಧಿಕಾರಿ ಸುಂದರೇಶ ಮೈಸೂರು ಇದ್ದರು‌. ನಾಗರಾಜ್ ಜೋಶಿ ಸೋಂದಾ ನಿರ್ವಹಿಸಿ ವಂದಿಸಿದರು.

ಗಮನ ಸೆಳೆದ ಯಕ್ಷಗಾನ

ಬಳಿಕ ನಡೆದ ಭೌಮಾಸುರ ಕಾಳಗ ಯಕ್ಷಗಾನ ಪ್ರೇಕ್ಷಕರ ಗಮನ ಸೆಳೆಯಿತು. ಪ್ರಸಿದ್ಧ‌ ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಲೆ ವಾದಕ ಅನಿರುದ್ಧ ಬೆಣ್ಣೆಮನೆ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ ಸಹಕಾರ ನೀಡಿದರು.

ಅಶೋಕ ಭಟ್ಟ ಸಿದ್ದಾಪುರ ದೇವೇಂದ್ರನಾಗಿ, ಉದಯ‌ ಕಡಬಾಳ ಕೃಷ್ಣನಾಗಿ, ಶ್ರೀಧರ ಚಪ್ಪರಮನೆ ಧೂತನಾಗಿ, ನಾಗರಾಜ ಕುಂಕಿಪಾಲ ಸತ್ಯಭಾಮೆಯಾಗಿ, ನಿರಂಜನ ಜಾಗನಳ್ಳಿ ಭೌಮಾಸುರನಾಗಿ, ಸಂತೋಷ ಕಡಕಿನಬೈಲು ಮುರಾಸುರನಾಗಿ, ಅರ್ಪಿತಾ ಹೆಗಡೆ ಬಲನಾಗಿ ಪಾಲ್ಗೊಂಡು ಆಖ್ಯಾನಕ್ಕೆ ಮೆರುಗು ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next