Advertisement

ಪ್ರತಿ ಬುಧವಾರ ಇನ್‌ಸ್ಪೆಕ್ಷನ್‌ ಡೇ: ಎ. 7ರಿಂದಲೇ ಜಾರಿ

10:29 PM Apr 01, 2021 | Team Udayavani |

ಉಡುಪಿ:  ರಾಜ್ಯ ಆರೋಗ್ಯ ಇಲಾಖೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲವರ್ಧಿಸುವ ಉದ್ದೇಶದಿಂದ ಇಲಾಖೆಯ ಅಧಿಕಾರಿಗಳಿಗೆ ಪ್ರತೀ ಬುಧವಾರ ಆರೋಗ್ಯ ಕೇಂದ್ರಗಳ ಇನ್‌ಸ್ಪೆಕ್ಷನ್‌(ಪರಿಶೀಲನೆ)ಗೆ ರಾಜ್ಯ ಸರಕಾರ ಆದೇಶಿಸಿದೆ. ಎ. 7 ರಿಂದಲೇ ಇದು ರಾಜ್ಯಾದ್ಯಂತ ಜಾರಿಗೆ ಬರಲಿದೆ.

Advertisement

ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ವೈದ್ಯರ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಈ ಪರಿಶೀಲನೆ ನಡೆಯಲಿದ್ದು ಎಲ್ಲ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಆಯಾ ತಾಲೂಕು ಆರೋಗ್ಯಾಧಿಕಾರಿಗಳು ಭೇಟಿ ನೀಡಲಿದ್ದಾರೆ.

ಕಾರ್ಯಕ್ಷಮತೆಯಿಂದ ಪದೋನ್ನತಿ :

ಪ್ರತಿದಿನ ಡೈರಿ ಮೂಲಕ ಆ ದಿನ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಉಲ್ಲೇಖೀಸುವುದನ್ನು ಕಡ್ಡಾಯ ಗೊಳಿಸಲಾಗಿದೆ. ಪದೋನ್ನತಿ ಸಂದರ್ಭ ಇದನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಟಿಎ, ಡಿಎ ಸಹಿತ ಆ ದಿನದ ಎಲ್ಲ ವಿವರಗಳನ್ನು ಆ ಡೈರಿಯಲ್ಲಿ ನಮೂದಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಎಲ್ಲ ಅಧಿಕಾರ ವೃಂದದವರು ಸದಾಕಾಲ ಕಾರ್ಯ ಪ್ರವೃತ್ತ ರಾಗುವಂತೆ ಮಾಡುವ ಉದ್ದೇಶ ಸರಕಾರದ್ದು.

ಯಾವುದೇ ಸಂದರ್ಭದಲ್ಲಿ  ಡೈರಿ ಪರಿಶೀಲನೆ :

Advertisement

ಪ್ರಗತಿ ಪರಿಶೀಲನೆ ಸಭೆ ಸಹಿತ ಸಚಿವರು ಭೇಟಿ ನೀಡುವ ಸಂದರ್ಭ ಆರೋಗ್ಯ ಇಲಾಖೆ ಅಧಿಕಾರಿಗಳ ಉತ್ತರಗಳು ಸಮರ್ಪಕವಾಗಿಲ್ಲದಿದ್ದರೆ ತಮ್ಮ ಡೈರಿಯನ್ನು ಅವರು ಪರಿಶೀಲಿಸಬಹುದಾಗಿದೆ.

ಭೇಟಿ ಸಂದರ್ಭ ಕಟ್ಟಡಗಳ ನ್ಯೂನತೆ, ಕಾಂಪೌಂಡ್‌ ವಾಲ್‌, ಅಲ್ಲಿನ ಸಿಬಂದಿಯ ಅಗತ್ಯತೆ, ಒಪಿಡಿ ಸರಿಯಾಗಿ ಕಾರ್ಯ ನಿರ್ವಹಿಸು ತ್ತಿದೆಯೇ, ಸಿಬಂದಿಯ ಹಾಜರಾತಿ ಪರಿಶೀಲನೆ, ಆಡಳಿತಾತ್ಮಕ ವಾಗಿರುವ ವೈಫ‌ಲ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಲು ಮುಂದಿನ ಕ್ರಮ ತೆಗೆದುಕೊಳ್ಳಲು ಆದ್ಯತೆ ನೀಡಬೇಕು.

ಕಾರ್ಯಕ್ರಮಗಳ ಅನುಷ್ಠಾನ :

ಆರೋಗ್ಯ ಇಲಾಖೆ ಸಂದರ್ಭಕ್ಕನುಸಾರ ಜಾರಿಗೆ ತರುವ ನಿಯಮಾವಳಿಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನ ವಾಗುತ್ತಿರುವ ಬಗ್ಗೆಯೂ ಮಾಹಿತಿ ಪಡೆದು ಕೊಳ್ಳಬೇಕು. ರೋಗ-ರುಜಿನಗಳು ಅಧಿಕವಾಗಿರುವ ಬಗ್ಗೆಯೂ ಸೂಕ್ತ ಮಾಹಿತಿ ಪಡೆದುಕೊಂಡು ಅದರ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ಆರೋಗ್ಯ ಪರಿಕರಗಳು ಸಮರ್ಪಕವಾಗಿ ತಲುಪಿರುವ ಬಗ್ಗೆ ಮಾಹಿತಿ ತೆಗೆದುಕೊಳ್ಳಬೇಕು.

ಪರಿಶೀಲನೆ : 

ಪ್ರತೀ ದಿನ ಅಧಿಕಾರಿಗಳು ಆಯಾ ಆರೋಗ್ಯ ಕೇಂದ್ರಗಳಿಗೆ ಹೋಗಿ ಪರಿಶೀಲನೆ ನಡೆಸ ಬಹುದು. ಆದರೆ ಕೆಲವು ಮಂದಿ ಈ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಈ ಕಾರಣಕ್ಕಾಗಿ ವಾರದಲ್ಲಿ ಒಂದು ದಿನವಾದರೂ ಕಡ್ಡಾಯವಾಗಿ ತೆರಳುವಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಆರೋಗ್ಯ ಕೇಂದ್ರಗಳ ಪ್ರಗತಿ, ರೋಗಿಗಳ ಬಗ್ಗೆ ಕಾಳಜಿ ಜತೆಗೆ ಅಧಿಕಾರಿ ಗಳ ಪದೋನ್ನತಿಗೂ ಸಹಕಾರ ಸಿಗಲಿದೆ.

06 : ಸಮುದಾಯ ಆರೋಗ್ಯ ಕೇಂದ್ರ

02 : ಸಮುದಾಯ ಆರೋಗ್ಯ ಕೇಂದ್ರ

01 : ಜಿಲ್ಲಾಸ್ಪತ್ರೆ

01 : ತಾಯಿ ಮತ್ತು ಮಕ್ಕಳ ಆಸ್ಪತ್ರೆ

61 : ಪ್ರಾಥಮಿಕ ಆರೋಗ್ಯ ಕೇಂದ್ರ

02 : ಅರ್ಬನ್‌ ಪ್ರೈಮರಿ ಸೆಂಟರ್‌

01 : ಎಫ್ಪಿಎಐ ಸಂಸ್ಥೆ

74 : ಒಟ್ಟು ಆರೋಗ್ಯ ಕೇಂದ್ರ

ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಬಲವರ್ಧನೆಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸುಮಾರು 2 ಸಾವಿರ ವೈದ್ಯರ ನೇರ ನೇಮಕಾತಿ ಮಾಡಿದ್ದು, ಮುಂದಿನ 45 ದಿನಗಳೊಳಗೆ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಸರಕಾರಿ ಆಸ್ಪತ್ರೆಗಳ ವೈದ್ಯರ ಕೊರತೆ ನೀಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತೀ ಬುಧವಾರ ಕಡ್ಡಾಯವಾಗಿ ಆರೋಗ್ಯಾಧಿಕಾರಿಗಳು ಇನ್‌ಸ್ಪೆಕ್ಷನ್‌ಗೆ ತೆರಳುವಂತೆ ಸೂಚಿಸಲಾಗಿದೆ. ಪ್ರಾಥಮಿಕ, ದ್ವಿತೀಯ, ತೃತೀಯ ಹಂತದ ಚಿಕಿತ್ಸೆಯನ್ನು ಉತ್ತಮಗೊಳಿಸುವುದು ಇದರ ಉದ್ದೇಶವಾಗಿದೆ. -ಡಾ| ಕೆ. ಸುಧಾಕರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ  

Advertisement

Udayavani is now on Telegram. Click here to join our channel and stay updated with the latest news.

Next