Advertisement

ಗೆಲುವಿಗೆ ಒಂದೊಂದು ಮತವೂ ನಿರ್ಣಾಯಕ

11:59 PM May 12, 2023 | Team Udayavani |

ಬೆಂಗಳೂರು: ಕೇವಲ ಒಂದು ಓಟಿನಿಂದ ಗೆದ್ದಿರುವ ರೋಚಕ ಇತಿಹಾಸ ರಾಜ್ಯ ಹಾಗೂ ದೇಶದಲ್ಲಿದೆ. ಕೇವಲ ಒಂದು ಮತದಿಂದ ಸೋತವರು, ಅತಿ ಕಡಿಮೆ ಅಂತರದಿಂದ ಗೆದ್ದವರ ಕಥೆ ಮತ್ತು ವ್ಯಥೆಗೆ ಸುದೀರ್ಘ‌ ಇತಿಹಾಸವಿದೆ.

Advertisement

ಪ್ರಜಾಪ್ರಭುತ್ವ ಎಂಬ ಭವ್ಯ ಬಂಗಲೆಗೆ ಮತಗಳೇ ಅಡಿಪಾಯ. ಕಟ್ಟಡ ಗಟ್ಟಿಯಾಗಿರಲು ಒಂದೊಂದು ಇಟ್ಟಿಗೆಯೂ ಮುಖ್ಯ. ಅದರಂತೆ   ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಒಂದೊಂದು ಮತವೂ ನಿರ್ಣಾಯಕವಾಗುತ್ತದೆ. ಜನತಂತ್ರ ವ್ಯವಸ್ಥೆಯಲ್ಲಿ ಒಂದೊಂದು ಮತಕ್ಕೂ ಮೌಲ್ಯವಿದೆ. ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧರಿಸುವುದು ಕೂಡ ಈ ಮತಗಳೇ. ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿ ಆಘಾತದ ಫ‌ಲಿತಾಂಶ ನೀಡುವ ಶಕ್ತಿ ಇರುವುದು ಈ ಮತಗಳಿಗೆ.

ಒಂದು ಮತದ ಮಹತ್ವ ರಾಜ್ಯದಲ್ಲಿ ಮೊದಲ ಬಾರಿಗೆ ಅನುಭವಕ್ಕೆ ಬಂದದ್ದು 2004ರಲ್ಲಿ. ಆಗ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌. ಧ್ರುವನಾರಾಯಣ ಒಂದು ಮತ(40,752)ದಿಂದ ಗೆದ್ದು ರಾಜ್ಯದ ಚುನಾವಣ ಇತಿಹಾಸದಲ್ಲೇ ದಾಖಲೆ ಬರೆದರು. ಇವರೆದುರು ಜೆಡಿಎಸ್‌ನ ಎ.ಆರ್‌.ಕೃಷ್ಣಮೂರ್ತಿ ಸೋತಿದ್ದರು. ಅದಾದ ಬಳಿಕ ಎ.ಆರ್‌. ಕೃಷ್ಣಮೂರ್ತಿ ಚುನಾ ವಣ ರಾಜಕೀಯದಲ್ಲಿ ಗೆಲುವೇ ಕಂಡಿಲ್ಲ. ವಿಪರ್ಯಾಸವೆಂದರೆ ಆ ದಿನ ಅವರ ವಾಹನ ಚಾಲಕ ಮತ ಚಲಾಯಿಸಿರಲಿಲ್ಲ ಎಂದು ಹೇಳಲಾಗುತ್ತದೆ.

2008ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದ ಸಿ.ಪಿ.ಜೋಷಿ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಭ್ಯರ್ಥಿ ಯಾಗಿದ್ದರು. ಆದರೆ ದುರದೃಷ್ಟವಶಾತ್‌ ಜೋಷಿಯವರು ಕೇವಲ ಒಂದು ಮತದಿಂದ ಬಿಜೆಪಿ ಅಭ್ಯರ್ಥಿ ಕಲ್ಯಾಣ ಸಿಂಗ್‌ ಚೌವ್ಹಾಣ್‌ ವಿರುದ್ಧ ಸೋತಿದ್ದರು. ಮತದಾನದ ಸಮಯದಲ್ಲಿ ಜೋಷಿಯವರ ಪತ್ನಿ, ಮಗಳು ಹಾಗೂ ವಾಹನ ಚಾಲಕ ಜೋಷಿ ಗೆಲುವಿಗಾಗಿ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಹೋಗಿದ್ದರು ಎನ್ನಲಾಗಿದೆ.

ಕಡಿಮೆ ಅಂತರದಿಂದ ಸೋತವರ ಇತಿಹಾಸ
1978ರಿಂದ 2018ರ ವರೆಗಿನ ವಿಧಾನಸಭಾ ಚುನಾ ವಣೆಗಳಲ್ಲಿ 1ರಿಂದ 100ರೊಳಗಿನ ಅಂತರದಲ್ಲಿ 15 ಮಂದಿ ಗೆದ್ದಿದ್ದಾರೆ. 1967ರಿಂದ 2019ರ ವರೆಗಿನ ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದಲ್ಲಿ ಸಾವಿರ ಮತಗಳ ಅಂತರದಿಂದ ಐವರು ಗೆದ್ದಿದ್ದಾರೆ. ಇಲ್ಲಿ ಗೆದ್ದವರು ಮತ್ತು ಸೋತವರಿಗೆ ಒಂದೊಂದು ಮತದ ಮಹತ್ವ ಚೆನ್ನಾಗಿ ಮನವರಿಕೆಯಾಗಿದೆ. 2004ರಲ್ಲಿ ಒಂದು ಮತದಿಂದ ಗೆದ್ದಿದ್ದ ಆರ್‌. ಧ್ರುವನಾರಾಯಣ 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 1,817 ಮತಗಳಿಂದ ಸೋತಿದ್ದರು.

Advertisement

ಪ್ರಮುಖರ ಸೋಲು-ಗೆಲುವು
ಸತತ ಏಳು ಬಾರಿ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಮಾಜಿ ಸಿಎಂ ದಿ| ಧರಂ ಸಿಂಗ್‌ 8 ನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ಗೆಲುವಿನ ನಾಗಲೋಟಕ್ಕೆ ತಡೆ ಹಾಕಿದ್ದು ಕೇವಲ 70 ಮತಗಳಷ್ಟೇ. ಅದೇ ರೀತಿ 2006ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದದ್ದು ಕೇವಲ 257 ಮತಗಳ ಅಂತರದಿಂದ.

1 ಮತದ ಅಂತರದಿಂದ ಸೋಲು
ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಕೇಂದ್ರ ಸರಕಾರ 1999ರಲ್ಲಿ ಕೇವಲ 1 ಮತದ ಅಂತರದಿಂದ ವಿಶ್ವಾಸಮತ ಕಳೆದುಕೊಂಡಿದ್ದು, ಸಂಸದೀಯ ವ್ಯವಸ್ಥೆಯಲ್ಲಿ ಸಾಕ್ಷಿಯಾಗಿ ಉಳಿದಿದೆ.

 ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next