Advertisement
ಧ್ರುವ ಸರ್ಜಾ ನಟನೆಯ “ಮಾರ್ಟಿನ್’ ಕೆಲವು ತಿಂಗಳ ಹಿಂದೆ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಕುರಿತು ಏನಾದರೂ ಬೇಸರವಿದೆಯೇ ಎಂಬ ಪ್ರಶ್ನೆ ಧ್ರುವ ಮುಂದೆ ಇಟ್ಟಾಗ ಅವರ ಕಡೆಯಿಂದ ಬಂದ ಉತ್ತರವಿದು. “ಮೊದಲಿನಿಂದಲೂ ವಿಭಿನ್ನವಾಗಿ ಏನಾದರೂ ಪ್ರಯತ್ನ ಮಾಡಬೇಕು ಎಂಬ ಆಸೆ ನನ್ನದು. ಅದೇ ಕಾರಣಕ್ಕೆ ಮಾರ್ಟಿನ್ ಮಾಡಿದ್ದು. ಪ್ರತಿ ಚಿತ್ರದಲ್ಲೂ ಕಲಿಯುವುದಿರುತ್ತದೆ. ಅದೇ ರೀತಿ ಮಾರ್ಟಿನ್ನಲ್ಲಿ ಜನರಿಗೆ ಏನು ಇಷ್ಟವಾಯಿತು? ಏನು ಇಷ್ಟವಾಗಲಿಲ್ಲ? ಎರಡನ್ನೂ ಹೇಳಿದ್ದಾರೆ’ ಎಂದರು ಧ್ರುವ.
Related Articles
Advertisement
ಸಿನಿಮಾದ ಕಥೆ ಚೆನ್ನಾಗಿದ್ದರೆ ಮಿಕ್ಕಿದ್ದೆಲ್ಲವೂ ಕೂಡಿ ಬರುತ್ತದೆ ಎನ್ನುವುದು ಸಿನಿಮಾದವರ ನಂಬಿಕೆ. ಅದೇ ಕಾರಣದಿಂದ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಕಥೆ ಆಯ್ಕೆ ಮಾಡುತ್ತಾರೆ. ಈ ವಿಚಾರದಲ್ಲಿ ಧ್ರುವ ಕೂಡಾ ತುಂಬಾ ಚೂಸಿ. ಈ ಕುರಿತು ಮಾತನಾಡುವ ಧ್ರುವ ಸರ್ಜಾ, “ಪಾತ್ರಕ್ಕಿಂತ ಕಥೆ ಮುಖ್ಯ. 50ರಿಂದ 60 ಕಥೆಗಳನ್ನು ಕೇಳಿದ್ದೇನೆ. ನಿರ್ದೇಶಕರು ಹಳಬರಾಗಲಿ, ಹೊಸಬರಾಗಲಿ ಕಥೆ ಇಷ್ಟವಾದರೆ ಸಿನಿಮಾ ಮಾಡುತ್ತೇನೆ. ನನಗೆ ಕಥೆಯಷ್ಟೇ ಮುಖ್ಯ’ ಎನ್ನುತ್ತಾರೆ.
“ಮಾರ್ಟಿನ್’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಈಗ ಧ್ರುವ ಸರ್ಜಾ ಅದೇ ನಿರ್ಮಾಪಕರಿಗೆ ಮತ್ತೂಂದು ಕಾಲ್ಶೀಟ್ ಕೊಟ್ಟಿದ್ದು, ಉದಯ್ ಮೆಹ್ತಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರಕ್ಕೆ ರೈನೋ ಎಂಬ ಟೈಟಲ್ ಇಡುವ ಸಾಧ್ಯತೆ ಇದೆ. “ಸದ್ಯ ಒಪ್ಪಿಕೊಂಡಿರುವ ಕೆಲ ಚಿತ್ರಗಳನ್ನು ಪೂರ್ಣಗೊಳಿಸಿ ನಂತರ “ರೈನೋ’ ಪ್ರಾರಂಭಿಸಲಿದ್ದೇವೆ. ಸ್ವಲ್ಪ ತಡವಾಗಬಹುದಷ್ಟೇ’ ಎನ್ನುತ್ತಾರೆ.
ರವಿಪ್ರಕಾಶ್ ರೈ