ರೊಹ್ಟಕ್: ನಮಗೆ ಸವಾಲು ಎದುರಿಸುವುದು ಹೇಗೆಂದು ಗೊತ್ತು. ಕಳೆದ 100 ದಿನಗಳಲ್ಲಿ ಭಾರತವು ಪ್ರತಿ ಸವಾಲಿಗೂ ಪ್ರತಿ ಸವಾಲೆಸೆದಿದೆ. ಜಮ್ಮು-ಕಾಶ್ಮೀರವೇ ಆಗಲಿ, ನೀರಿನ ಸಮಸ್ಯೆಯೇ ಆಗಲಿ, ದೇಶದ 130 ಕೋಟಿ ಜನರು ಹೊಸ ಹೊಸ ಪರಿಹಾರಗಳನ್ನು ಕಾಣುತ್ತಿದ್ದಾರೆ. ಅಭಿವೃದ್ಧಿ, ವಿಶ್ವಾಸ ಹಾಗೂ ಬೃಹತ್ ಬದಲಾವಣೆಗಳೇ ಈ 100 ದಿನಗಳ ಯಶಸ್ಸು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರಕಾರದ ನೂರು ದಿನಗಳ ಸಾಧನೆಯನ್ನು ಬಣ್ಣಿಸಿದರು.
ಎರಡನೇ ಅವಧಿಗೆ ಅಭೂತಪೂರ್ವ ಬಹುಮತ ಪಡೆದು ಅಧಿಕಾರಕ್ಕೇರಿದ ಎನ್‌ಡಿಎ ಸರಕಾರ ಕಳೆದ ನೂರು ದಿನಗಳಲ್ಲಿ ಕೈಗೊಂಡ ಕ್ರಮಗಳ ಕುರಿತು ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಮಧ್ಯೆಯೇ ಹರ್ಯಾಣದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರವನ್ನು ಆರಂಭಿಸಿದ ಪ್ರಧಾನಿ ಮೋದಿ, ಸರಕಾರದ ಸಾಧನೆಯನ್ನು ವಿವರಿಸಿದರು.
ಕಳೆದ 100 ದಿನಗಳಲ್ಲಿ ತೆಗೆದುಕೊಂಡ ಎಲ್ಲ ಕ್ರಮಗಳಿಗೂ 130 ಕೋಟಿ ಜನರೇ ಸ್ಫೂರ್ತಿ. ನಿಮ್ಮ ಅಭೂತಪೂರ್ವ ಬೆಂಬಲದಿಂದಾಗಿ ಕೃಷಿ ವಲಯದಿಂದ ಆರಂಭಿಸಿ ರಾಷ್ಟ್ರೀಯ ಭದ್ರತೆಯವರೆಗೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಇದು ಆರಂಭವಷ್ಟೇ. ಇದರ ಅನುಕೂಲವು ಮುಂದಿನ ದಿನಗಳಲ್ಲಿ ಜನರಿಗೆ ಅನುಭವಕ್ಕೆ ಬರಲಿದೆ. ಹಿಂದೆಂದೂ ಕಂಡಿರದಂಥ ಯೋಜನೆಯನ್ನು ಆರೋಗ್ಯ ವಲಯಕ್ಕೆ ತರಲಾಗಿದೆ. ಇದರಿಂದಾಗಿ ಆರೋಗ್ಯ ಸೇವೆ ಕೈಗೆಟಕುವಂತಾಗಿದೆ. 2024ರ ವೇಳೆಗೆ ಪ್ರತಿ ಮನೆಗೂ ನಲ್ಲಿ ನೀರು ವ್ಯವಸ್ಥೆ ಮಾಡುವ ಯೋಜನೆಯನ್ನೂ ಸರಕಾರ ಹಮ್ಮಿಕೊಂಡಿದೆ. ಈ ಯೋಜನೆ ಕುರಿತ ಕೆಲಸ ಈಗಾಗಲೇ ಆರಂಭವೂ ಆಗಿದೆ ಎಂದು ಮೋದಿ ಹೇಳಿದರು.
ಆರ್ಥಿಕತೆ ಸುಸ್ಥಿರವಾಗಿದೆ: ಜಾಬ್ಡೇಕರ್
ದೇಶದ ಆರ್ಥಿಕತೆಯ ಮೂಲಭೂತ ಅಂಶಗಳು ಸುಸ್ಥಿರವಾಗಿವೆ. ದೇಶದಲ್ಲಿ ಸದ್ಯ ಆತಂಕದ ಪರಿಸ್ಥಿತಿ ಇಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್ ಹೇಳಿದರು. ಕೆಲವು ಬಾರಿ ಆರ್ಥಿಕತೆ ಹಿಂಜರಿಕೆಯಾಗುತ್ತದೆ. ಆದರೆ ಇಂತಹ ಹಿಂಜರಿಕೆಯು ದೇಶದ ಪ್ರಗತಿಯ ದರದ ಮೇಲೆ ಪರಿಣಾಮ ಉಂಟುಮಾಡುವುದಿಲ್ಲ ಎಂದು ಅವರು ತಿಳಿಸಿದರು. ಇದೇ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾಬ್ಡೇಕರ್, 100ರ ಪೈಕಿ 90ರಲ್ಲೂ ಕಾಣಿಸಿಕೊಳ್ಳದ ವ್ಯಕ್ತಿಗಳ ಬಗ್ಗೆ ನಾನು ಏನೂ ಹೇಳಲಾಗದು. ಸರಕಾರ ಕೆಲಸ ಮಾಡಿದೆಯೇ ಎಂಬುದನ್ನು ಇಡೀ ವಿಶ್ವವೇ ನೋಡಿದೆ. ಈ ವೇಗವನ್ನು ಕಾಂಗ್ರೆಸ್ ಎಂದೂ ಕಂಡಿರಲಿಲ್ಲ. ಹೀಗಾಗಿ ಅವರ ಹೇಳಿಕೆಯ ಬಗ್ಗೆ ನಾನೇನೂ ಹೇಳಲಾರೆ ಎಂದರು.
ನಾಯಕತ್ವ, ದಿಕ್ಕು, ಯೋಜನೆ ಬೇಕಿದೆ
ಸರಕಾರದ 100 ದಿನವನ್ನು ಅಭಿವೃದ್ಧಿ ರಹಿತ ದಿನಗಳು ಎಂದು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ 100 ದಿನಗಳಲ್ಲಿ ದೇಶದ ಕುಸಿದಿರುವ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ನಾಯಕತ್ವ, ದಿಕ್ಕು ಹಾಗೂ ಯೋಜನೆ ಕೊರತೆ ಕಾಣಿಸುತ್ತಿದೆ ಎಂದಿದ್ದಾರೆ. ದುರಹಂಕಾರ, ಅನಿಶ್ಚಿತತೆ ಮತ್ತು ಸೇಡಿನ ರಾಜಕೀಯವೇ ಈ ನೂರು ದಿನಗಳಲ್ಲಿ ಕಂಡುಬಂದಿದೆ. ಕಾಶ್ಮೀರ ವಿಷಯವನ್ನು ನಿರ್ವಹಿಸಿರುವುದು, ದೇಶದ ಆರ್ಥಿಕ ಸ್ಥಿತಿ, ಅಸ್ಸಾಂನಲ್ಲಿ ಎನ್‌ಆರ್‌ಸಿ ಹಾಗೂ ವಿಪಕ್ಷ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳು ನಡೆಸುತ್ತಿರುವ ದಾಳಿ ಇದನ್ನು ಸಾಬೀತುಪಡಿಸುತ್ತಿವೆ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
100 ದಿನಗಳಲ್ಲಿ ಪ್ರಧಾನಿ ಮೋದಿ ಹಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಕಳೆದ 70 ವರ್ಷಗಳಿಂದಲೂ ಇಂತಹ ನಿರ್ಧಾರಗಳಿಗಾಗಿ ಜನರು ನಿರೀಕ್ಷಿಸುತ್ತಿದ್ದರು. ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕೆ ಸರಕಾರ ಬದ್ಧವಾಗಿದೆ.
-ಅಮಿತ್ ಶಾ, ಗೃಹ ಸಚಿವ