Advertisement
ಯಾವುದೋ ಪುಸ್ತಕ ಓದುವುದರಲ್ಲಿ ಮೈಮರೆತಿದ್ದವಳಿಗೆ, “ಮಲ್ಲಿಗೆ, ಸೇವಂತಿಗೆ… ಹೂವು…’ ಎಂದು ಕೂಗಿದ ಧ್ವನಿಯೊಂದು ಕಿವಿಗೆ ಅಪ್ಪಳಿಸಿದ್ದೇ ತಡ ಎಚ್ಚರವಾಗಿಬಿಟ್ಟಿತ್ತು. ಅತಿ ಸುಮಧುರ ಧ್ವನಿ ಅದು. ಆಕೆ ಒಂದೇ ಬಾರಿ ಕೂಗುತ್ತಿದ್ದದ್ದು, ಗೇಟಿನಾಚೆಗೆ ಬಂದು ನೋಡುವಷ್ಟರಲ್ಲಿ ಅದೆಲ್ಲಿ ಮಾಯವಾಗಿಬಿಡುತ್ತಿದ್ದಳ್ಳೋ ಅವಳಿಗೆ ಗೊತ್ತು. ಅದೆಷ್ಟೋ ದಿನ ಅವಳ ಧ್ವನಿಯ ಬೆನ್ನಟ್ಟಿ ಹೋಗಿ ಅವಳು ಸಿಗದೇ, ಮುಖ ಸಣ್ಣಗೆ ಮಾಡಿಕೊಂಡು ವಾಪಸು ಬಂದಿದ್ದೆ.
Related Articles
Advertisement
ಆ ಬೆರಗನ್ನು ಕಂಡು ಮೂಕಳಾಗಿ ನಿಂತ ನನ್ನನ್ನು ಅವಳೇ ಎಚ್ಚರಿಸಿ, “ಅಕ್ಕಾ, ಎಷ್ಟು ಮೊಳ ಕೊಡಲಿ?’ ಎನ್ನುತ್ತಾ ತನ್ನ ಹೂವಿನ ಬುಟ್ಟಿಗೆ ಕೈ ಹಾಕಿದಳು. ಅವಳ ಮಾತಿಗೆ ಎಚ್ಚರಗೊಂಡ ನಾನು ತಡವರಿಸುತ್ತಲೇ, “ಎರಡು ಮೊಳ ಕೊಡು ಸಾಕು, ಆದರೆ ದುಡ್ಡು ನಾಳೆ ತಗೋ’ ಎನ್ನುತ್ತಾ ನನ್ನ ಮನೆಯ ಕಡೆಗೆ ಕೈ ತೋರಿಸಿದೆ. “ಸರಿ ಅಕ್ಕ’ ಎನ್ನುತ್ತಾ ಆ ಮುದ್ದಾದ ಕೈಗಳಲ್ಲಿ ಹೂವನ್ನು ಅಳತೆ ಮಾಡಿ ನನ್ನ ಕೈಗಿಟ್ಟು ಒಂದೆರೆಡು ಕ್ಷಣಗಳಲ್ಲಿ ಮಾಯವಾಗಿಬಿಟ್ಟಿದ್ದಳು.
ಅದೊಂದು ಶುಕ್ರವಾರ ಬೆಳಗ್ಗೇನೆ ಕಿವಿಗೆ ಬಿತ್ತು ನೋಡಿ ಅವಳ ಧ್ವನಿ. ಹಾಸಿಗೆಯಿಂದ ಎದ್ದವಳೇ, ಛಂಗನೆ ಹಾರಿ ಕಾಂಪೌಂಡಿನ ಗೇಟಿಗೆ ಬಂದು ನಿಂತೆ. ಎದುರುಗಡೆ ನಾಲ್ಕಂತಸ್ತಿನಲ್ಲಿದ್ದ ಮನೆಯ ಮೆಟ್ಟಿಲುಗಳಿಂದ ಇಳಿದುಬರುತ್ತಿದ್ದಳು. ಆಹಾ!! ಅದೆಂಥ ದೃಶ್ಯ ಅಂತೀರಿ, ಚಂದಿರನ ತುಂಡೊಂದು ಖುದ್ದಾಗಿ ಹೂ ಮಾರಲು ಭೂಮಿಗಿಳಿದು ಬರುತ್ತಿರುವಂತಿತ್ತು.
ಆಕೆ ಅಲ್ಲಿಂದ ಇಳಿದು ಬರುತ್ತಿದ್ದಂತೆ “ಏನಮ್ಮ, ಬಾ ಇಲ್ಲಿ…’ ಎನ್ನುತ್ತಾ ಆಕೆಯ ಗಮನ ಸೆಳೆದಿದ್ದೆ. ಆಕೆ ಬಹುಶಃ ನಾನವಳಿಗೆ ಕೊಡಬೇಕಾದ ಹಣವನ್ನು ಮರೆತಿದ್ದಳೇನೊ! “ಏನಕ್ಕ?’ ಎನ್ನುತ್ತಾ ಅಚ್ಚರಿಯಿಂದಲೇ ನನ್ನ ಮುಂದೆ ಬಂದು ನಿಂತಳು. ನಾನು ಮಾತು ಮುಂದುವರಿಸಿ, “ನಾನು ನಿನ್ಹತ್ರ ಹೂ ತಗಂಡಿದ್ದೆ, ಆದ್ರೆ ಅವತ್ತು ದುಡ್ಡು ಕೊಟ್ಟಿರಲಿಲ್ಲ’ ಎಂದೆ. ಅವಳು ಸಣ್ಣಗೆ ನಗುತ್ತಾ, “ಅಯ್ಯೋ ಅಷ್ಟೇನಾ? ಇನ್ಯಾವಾಗಲಾದ್ರೂ ಕೊಡುವಿರಂತೆ ಬಿಡಿ’ ಎನ್ನುತ್ತಾ ಖಾಲಿಯಾಗಿದ್ದ ತನ್ನ ಹೂಬುಟ್ಟಿಯನ್ನು ಅಲ್ಲೇ ಪಕ್ಕದಲ್ಲಿ ಕೊಡವಿ ಹೊರಡಲಣಿಯಾದಳು. ನಾನವಳನ್ನು ಮಾತಿಗೆಳೆಯಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಾನೇ ಹಠ ಮಾಡಿ ಒಂದು ಲೋಟ ಚಹಾ ತಂದು ಅವಳ ಮುಂದಿಟ್ಟೆ. ಚಹಾ ಕುಡಿದು ಲೋಟ ಕೆಳಗಿಟ್ಟವಳೇ, “ಅಕ್ಕಾ, ಎಷ್ಟು ತಿಂಗ್ಳು?’ ಎಂದಿದ್ದಳು ನಸುನಗುತ್ತಾ. ನಾನವಳ ಮಾತಿಗೆ ನಾಚುತ್ತಾ, “ಐದು ತಿಂಗಳು’ ಎನ್ನುತ್ತಾ ಕೈಸನ್ನೆ ಮಾಡಿದೆ. “ನೋಡ್ತಿರಿ, ನಿಮ್ಗೆ ಹೆಣ್ಣುಮಗುನೇ ಆಗುತ್ತೆ’ ಅಂತ ಭವಿಷ್ಯ ಬೇರೆ ನುಡಿದಿದ್ದಳು. ನಾನು “ಆಗ್ಲಿ ಬಿಡು, ನಿಂಥರಾನೆ ಮು¨ªಾಗಿರೋ ಹೆಣ್ಮಗು ಹುಟ್ಟಿದ್ರೆ ಯಾರ್ ಬೇಡ ಅಂತಾರೆ?’ ಎಂದಿದ್ದೇ ತಡ ನಾಚಿ ನೀರಾಗಿದ್ದಳು.
ನಾನೇ ಮಾತು ಮುಂದುವರಿಸಿ, “ನನಗೆ ಅಣ್ಣಾನೋ ತಮ್ಮಾನೋ ಇದ್ದಿದ್ರೆ ನಿನ್ನವನಿಗೆ ಗಂಟಾಕ್ತಿದ್ದೆ, ಏನ್ಮಾಡೋದು ದೇವ್ರು ಅದಕ್ಕೂ ಕಲ್ಲುಹಾಕಿ ಕೂತಿದ್ದಾನೆ’ ಎನ್ನುತ್ತಾ ನಿಟ್ಟುಸಿರುಬಿಟ್ಟೆ. ಅವಳ ಮನದಾಳದಲ್ಲಿದ್ದ ಮಾತುಗಳು ನಿಜವಾಗಿಯೂ ಶುರುವಾಗಿದ್ದು ಆಗಲೇ. “ಅಯ್ಯೋ ಬಿಡಕ್ಕಾ… ನನ್ನಂಥ ನತದೃಷ್ಟೆಯ ಹಣೆಬರಹದಲ್ಲಿ ಮದುವೆ-ಗಿದುವೆ ಬರ್ದಿಲ್ಲ ದೇವ್ರು’ ಎಂಬ ಅವಳ ಮಾತಿನಲ್ಲಿ ಬೇಸರವಿತ್ತು. ನಾನವಳ ಮಾತನ್ನು ಅಲ್ಲಿಯೇ ತಡೆದು, “ಅದ್ಯಾಕ್ ಹಂಗೆಲ್ಲಾ ಮಾತಾಡ್ತಿದ್ಯಾ?’ ಅಂತ ಮೆಲ್ಲಗೆ ಗದರಿದೆ. ನನ್ನ ಮಾತು ಅವಳ ಮನಸ್ಸಿಗೆ ತಲುಪಿರಲಿಲ್ಲ ಎಂಬುದು ಆಕೆಯ ಮೊಗದಲ್ಲೇ ಎದ್ದು ಕಾಣುತ್ತಿತ್ತು. ಸ್ವಲ್ಪ ಹೊತ್ತು ಸುಮ್ಮನಿದ್ದು, “ಅಕ್ಕಾ… ಹೆಣ್ಣಾಗಿ ಹುಟ್ಟಿದ್ಮೇಲೆ ಆಸೆ ಕನಸುಗಳನ್ನೆಲ್ಲ ಮೂಟೆ ಕಟ್ಟಿ ಮೂಲೆಗಾಕೆಕು, ಕನಸು ಕಾಣೋದಿರ್ಲಿ, ಕನಸು ಕಾಣಬೇಕು ಅಂದ್ಕೋಳ್ಳೋದೇ ಮಹಾಪರಾಧ ನೋಡು’ ಎಂದುಬಿಟ್ಟಿದ್ದಳು. ಅವಳ ಪ್ರತಿ ಮಾತು ಆಕೆಯ ನೋವಿನ ತೀವ್ರತೆಯನ್ನು ತೆರೆದಿಡುತ್ತಿದ್ದವು. ನಾನವಳ ಮಾತಿಗಷ್ಟೇ ಕಿವಿಯಾಗಿದ್ದೆ.
“ಅಮ್ಮ ಸತ್ತ ಮೇಲೆ ನನ್ನನ್ನು ನೆಪವಾಗಿಟ್ಕೊಂಡು, ಅಪ್ಪ ಇನ್ನೊಂದು ಮದುವೆಯಾದ್ರು. ಚಿಕ್ಕಮ್ಮ, ಪಾಪ ಅಮ್ಮನಿಗಿಂತ ಹೆಚ್ಚಾಗಿಯೇ ಅಕ್ಕರೆಯಿಂದ ನೋಡಿಕೊಳ್ತಾಳೆ. ಚಿಕ್ಕಮ್ಮನಿಗೆ ಇಬ್ಬರು ಅವಳಿ ಮಕ್ಳು. ತಮ್ಮ ಚೆನ್ನಾಗಿದ್ದಾನೆ, ತಂಗಿಗೆ ಮಾತು ಬರಲ್ಲ. ಅಪ್ಪ ಇರೋವರೆಗೂ ಚಿಕ್ಕಮ್ಮನ ಹೊಡೆದು ಬಡಿದು ಮಾಡ್ತಿದ್ರು. ಈಗ ಅಪ್ಪಾನೂ ಇಲ್ಲ, ಚಿಕ್ಕಮ್ಮ ಒಂದೆರೆಡು ಮನೆ ಕೆಲಸ ಮಾಡ್ತಾರೆ, ತಮ್ಮ ಐದನೇ ಕ್ಲಾಸ್ ಓದ್ತಾ ಇದಾನೆ, ತಂಗಿಗೆ ಮಾತು ಬರ್ತಿಲ್ಲ ಅಂತ ಶಾಲೆ ಬಿಡ್ತಿದೀವಿ. ಇನ್ನು ನಾನು ಹೇಗೋ ಎಸ್ಸೆಸ್ಸೆಲ್ಸಿ ವರೆಗೂ ಓದಿದೆ; ಅದೂ ಅಜ್ಜಿಮನೆಯಲ್ಲಿ ಅಂದ್ರೆ ಹಳ್ಳಿಯಲ್ಲಿ. ಅಪ್ಪ ಹೋದ್ಮೇಲೆ ಚಿಕ್ಕಮ್ಮನ್ನ ಒಂಟಿಯಾಗಿ ಈ ಸಿಟಿಯಲ್ಲಿ ಬಿಡೋಕೆ ಮನಸ್ಸಾಗಲಿಲ್ಲ ಕಣಕ್ಕಾ… ಅದ್ಕೆ ಅಮ್ಮ ಕಲಿಸಿದ ಹೂ ಕಟ್ಟೋ ಕಲೆಯನ್ನೇ ಬಂಡವಾಳ ಮಾಡ್ಕೊಂಡು ವ್ಯಾಪಾರ ಮಾಡ್ತಿದೀನಿ…’ – ಒಂದು ಸಣ್ಣ ನೋವು ತುಂಬಿದ ನಗುವಿನೊಂದಿಗೆ ಅವಳ ಮಾತು ಮುಕ್ತಾಯವಾಗಿತ್ತು. ಅಂದಹಾಗೆ ಆಕೆಯ ಹೆಸರು ನಯನ. ನಾ ಕಂಡ ಅದೆಷ್ಟೋ ಹೆಣ್ಣುಮಕ್ಕಳಲ್ಲಿ ಇವಳೊಂದು ಅದ್ಭುತ. ಸತ್ಯ ಗಿರೀಶ್