Advertisement

ವರುಣಾ ಸ್ಪರ್ಧೆ ಖಚಿತವಾದರೂ ನಿಲ್ಲದ ಸಿದ್ದರಾಮಯ್ಯ ತಳಮಳ

11:46 PM Mar 28, 2023 | Team Udayavani |

ಮೈಸೂರು: ಕಳೆದ ಚುನಾವಣೆಯಲ್ಲಿಯೂ ಅವರು ಎರಡು ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ಅದು ಅವರ ನಿರ್ಧಾರವಾಗಿತ್ತು. ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯಬೇಕೆಂಬುದು ಅವರ ಇಚ್ಛೆ. ಆದರೆ ಹೈಕಮಾಂಡ್‌ ಒಪ್ಪಿಗೆಗಾಗಿ ಕಾಯುವಂತಾಗಿದೆ.

Advertisement

ಇದು ರಾಜ್ಯ ರಾಜಕಾರಣದ ಮಾಸ್‌ ಲೀಡರ್‌, ಮಾಜಿ ಮುಖ್ಯಮಂತ್ರಿ ಕಾಂಗ್ರೆಸಿನ  ಸಿದ್ದರಾಮಯ್ಯ ಅವರ ಪರಿಸ್ಥಿತಿ. ಸಿದ್ದರಾಮಯ್ಯ ತಮ್ಮ ಸ್ಪರ್ಧೆಯ ಬಗ್ಗೆ ಈ ಹಿಂದೆಂದೂ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ.

ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ವರುಣಾ ಕ್ಷೇತ್ರದಿಂದ ಟಿಕೆಟ್‌ ಘೋಷಿಸಿದೆ. ಅಷ್ಟಕ್ಕೆ ಸಿದ್ದರಾಮಯ್ಯ ಸುಮ್ಮನಾಗಿದ್ದರೆ ಗೊಂದಲ ಆಗುತ್ತಿರಲಿಲ್ಲ. ಆದರೆ ಅವರು ಕೋಲಾರದಿಂದ ಕಣಕ್ಕಿಳಿಯುವ ಬಯಕೆಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಅವರ ಸ್ಪರ್ಧೆಯ ಗೊಂದಲ ಇನ್ನೂ ಮುಗಿದಿಲ್ಲ. ಹೈಕಮಾಂಡ್‌ ವರುಣಾದಿಂದ ಟಿಕೆಟ್‌ ಘೋಷಿಸಿದ ಅನಂತರವೂ  ಸ್ವತಃ ಸಿದ್ದರಾಮಯ್ಯ  ಕೋಲಾರದಿಂದಲೂ ಸ್ಪರ್ಧೆಗೆ ನಿರ್ಧರಿಸಿರುವ ಮಾತನ್ನು ಆಡಿದ್ದಾರೆ. ಅಂದರೆ ಅಲ್ಲಿಗೆ ಸಿದ್ದರಾಮಯ್ಯ ಅವರಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಚ್ಛೆ. ಆದರೆ  ಹೈಕಮಾಂಡ್‌ ಒಪ್ಪಿಗೆಗೆ ಕಾಯುತ್ತಿದ್ದಾರೆ. ಚೆಂಡು ಹೈಕಮಾಂಡ್‌ ಅಂಗಳದಲ್ಲಿದೆ. ಸಿದ್ದರಾಮಯ್ಯ ತಳಮಳ ಮುಂದುವರಿದಿದೆ.

ಸಿದ್ದರಾಮಯ್ಯ 2018ರ ಅಸೆಂಬ್ಲಿ ಚುನಾವಣೆಯಲ್ಲಿ ತವರು ಕ್ಷೇತ್ರ ವರುಣವನ್ನು ಪುತ್ರ ಡಾ| ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು ತಾವು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು. ಅನಂತರದ ದಿನಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಬಹುದೆಂಬ ಸುಳಿವು ಸಿಕ್ಕ ಕೂಡಲೇ ಬಾದಾಮಿಗೆ ದೌಡಾಯಿಸಿ  ಅಲ್ಲಿಯೂ ನಾಮಪತ್ರ ಸಲ್ಲಿಸಿದರು. ಈ ಎರಡೂ ಕ್ಷೇತ್ರಗಳ ಆಯ್ಕೆ ಹಾಗೂ ಸ್ಪರ್ಧೆ ಸಿದ್ದರಾಮಯ್ಯ ಅವರದ್ದೇ  ನಿರ್ಧಾರವಾಗಿತ್ತು. ಆದರೆ  ಈಗ ಹೈಕಮಾಂಡ್‌ ವರುಣಾದಲ್ಲಿ ಮಾತ್ರ ಟಿಕೆಟ್‌ ನೀಡಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಕೋಲಾರವೂ ಬೇಕಿದೆ. ಇದಕ್ಕೆ ಹೈಕಮಾಂಡ್‌ ಅಸ್ತು ಎನ್ನಬೇಕು. ಅದರಲ್ಲೂ ಈಗ ಕನ್ನಡಿಗರೇ ಆದ ಹಿರಿಯ ರಾಜಕೀಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ಅವರು ಅಖೀಲ ಭಾರತ ಕಾಂಗ್ರೆಸ್‌ ಅಧ್ಯಕ್ಷರಾಗಿರುವಾಗ ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆ ಬಗ್ಗೆ ಗ್ರೀನ್‌ ಸಿಗ್ನಲ್‌ ಸಿಗುವುದು ಅಷ್ಟು ಸುಲಭದ ಮಾತಲ್ಲ.

ಸಿದ್ದರಾಮಯ್ಯ ಅವರು ಈ ಬಾರಿ ತಾವು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಅನಗತ್ಯವಾಗಿ ಗೊಂದಲ ಮಾಡಿಕೊಂಡರೆಂಬ  ಮಾತು ಕಾಂಗ್ರೆಸ್‌ನಲ್ಲೇ ಇದೆ. ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಸಿದ್ದರಾಮಯ್ಯ ಅವರಿಗಾಗಿ ತಮ್ಮ ಕ್ಷೇತ್ರ ಬಿಟ್ಟು ಕೊಡಲು ಮುಂದಾದರು. ಸಿದ್ದರಾಮಯ್ಯ ಅವರಿಗೆ  ವರುಣಾದಲ್ಲಿ ಸ್ಪರ್ಧಿಸುವ ಇರಾದೆ ಇರಲಿಲ್ಲ. ಏಕೆಂದರೆ ವರುಣ ಕ್ಷೇತ್ರದಲ್ಲಿ ಅವರ ಪುತ್ರ ಡಾ| ಯತೀಂದ್ರ ಸಿದ್ದರಾಮಯ್ಯ ಹಾಲಿ ಶಾಸಕರು. ಹೀಗಾಗಿ ವರುಣಾಕ್ಕೆ ತಾವು ವಾಪಸ್‌ ಬಂದರೆ ಪುತ್ರ ಡಾ| ಯತೀಂದ್ರ ಅವರ ರಾಜಕೀಯ ಭವಿಷ್ಯದ ಚಿಂತೆ ಸಿದ್ದರಾಮಯ್ಯ ಅವರನ್ನು ಕಾಡಿತ್ತು. ಹೀಗಾಗಿ ಕೋಲಾರ ಆಯ್ಕೆ ಮಾಡಿಕೊಂಡಿದ್ದರು. ಆದರೆ ಸಮೀಕ್ಷಾ ವರದಿಗಳು ಹಾಗೂ ಕೋಲಾರ ಜಿಲ್ಲಾ ಕಾಂಗ್ರೆಸಿನ ಒಳಜಗಳಗಳು ಸಿದ್ದರಾಮಯ್ಯ ಅವರ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಆತಂಕ ಹೈಕಮಾಂಡ್‌ ಅನ್ನು ಕಾಡಿತು. ಹೀಗಾಗಿ ಸಿದ್ದರಾಮಯ್ಯ ಅವರನ್ನು ತವರು ಕ್ಷೇತ್ರಕ್ಕೆ ತಂದು ನಿಲ್ಲಿಸಿದೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ತವರು ಕ್ಷೇತ್ರದ ಜತೆಗೆ ಕೋಲಾರವೂ ಬೇಕೆಂದು ಬಯಸಿದ್ದಾರೆ. ಇದರ ಹಿಂದೆ ಪುತ್ರ ಡಾ| ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಚಿಂತೆ ಅವರಲ್ಲಿದೆ.

Advertisement

ವಿಜಯೇಂದ್ರ ಬರುತ್ತಾರಾ?
ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ಅವರು ಪ್ರಚಾರಕ್ಕಾಗಿ ರಾಜ್ಯದ ಇತರ ಭಾಗಗಳಿಗೆ ಹೆಚ್ಚು ತೆರಳದಂತೆ ಕ್ಷೇತ್ರದಲ್ಲಿಯೇ ಕಟ್ಟಿ ಹಾಕಲು ಬಿಜೆಪಿ ತಂತ್ರಗಳನ್ನು ಹೆಣೆಯುತ್ತಿದೆ. ಬಿಜೆಪಿಗೆ ಇಲ್ಲಿ ಮತದಾರರಿದ್ದಾರೆ. ಆದರೆ ಕ್ಷೇತ್ರ ವ್ಯಾಪ್ತಿ ಪ್ರಭಾವವಿರುವ ವರ್ಚಸ್ಸುಳ್ಳ ಸಮರ್ಥ ಅಭ್ಯರ್ಥಿಗಳಿಲ್ಲ. ಹೀಗಾಗಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ವರುಣಾದಲ್ಲಿ ಕಣಕ್ಕಿಳಿಸುವ ಚರ್ಚೆ ಬಿಜೆಪಿ ಹೈಕಮಾಂಡ್‌ನಲ್ಲೂ ನಡೆದಿದೆ. ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವಾಗಲೇ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಟಿಕೆಟ್‌ ಘೋಷಣೆಯಾದ ಅನಂತರ ಬಿಜೆಪಿಯಲ್ಲಿ ವಿಜಯೇಂದ್ರ ಅವರನ್ನು ವರುಣಾದಿಂದ ಕಣಕ್ಕಿಳಿಸುವ ಕಸರತ್ತಿಗೆ ಮತ್ತೆ ಚಾಲನೆ ದೊರೆತಿದೆ. ಕಳೆದ ಬಾರಿಯೇ ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಅಖಾಡ ಸಿದ್ಧವಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್‌ ಒಪ್ಪಲಿಲ್ಲ. ಆಗ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಅಸಮಾಧಾನಗೊಂಡಿದ್ದು ನಿಜ. ಈ ಬಾರಿ ಬಿಜೆಪಿ ಹೈಕಮಾಂಡ್‌ ವರುಣಾದಿಂದ ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡಿದರೂ ಕಳೆದ ಬಾರಿ ಅವರಿಗಿದ್ದ ಅನುಕೂಲಕರ ಪರಿಸ್ಥಿತಿ ಈಗಿಲ್ಲ ಎಂಬುದು ಅಷ್ಟೇ ವಾಸ್ತವ.

-ಕೂಡ್ಲಿ ಗುರುರಾಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next