ಬೆಂಗಳೂರು: “ಭಾರತದ ಯೋಗ ಪದ್ಧತಿಗೆ ಈಗ ವಿಶ್ವಮಟ್ಟದಲ್ಲಿ ಮನ್ನಣೆ ದೊರೆಯುತ್ತಿದೆ. ಆದರೆ, ಭಾರತೀಯರಾದ ನಾವು ಯೋಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿಲ್ಲ ಎಂಬುದು ನೋವಿನ ಸಂಗತಿ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಆರೋಗ್ಯ ಮಂದಿರ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಭಾರತವು ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆ ಎಂದರೆ ಯೋಗ. ಈಗ ಅದು ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ, ನಾವು ಯೋಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡದೇ ಇರುವುದು ವಿಷಾದನೀಯ ಸಂಗತಿ,’ ಎಂದರು.
“ಯೋಗದಿಂದ ದೇಶದ ಹೆಮ್ಮೆ ಮತ್ತು ಕೀರ್ತಿಯೂ ಹೆಚ್ಚಾಗುತ್ತಿದೆ. ಯೋಗವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು ಯಾರೋಬ್ಬರಿಗೂ ಸೇರಿದ ಸೊತ್ತಲ್ಲ. ಯೋಗ ಮತ್ತು ಧ್ಯಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು,’ ಎಂದು ಸಲಹೆ ನೀಡಿದರು.
“ದಿನನಿತ್ಯದ ಜೀವನದಲ್ಲಿ ಯೋಗವನ್ನು ರೂಢಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡದಿಂದ ದೂರವಿರಬಹುದು. ಒತ್ತಡದ ಜೀವನದಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಒತ್ತಡ ಕಡಿಮೆ ಮಾಡಲು ಹಾಗೂ ರೋಗ ನಿವಾರಣೆಗೆ ಯೋಗ ಮತ್ತು ಧ್ಯಾನ ಅವಶ್ಯಕ. ಬಹಳಷ್ಟು ವರ್ಷ ಆರೋಗ್ಯವಾಗಿ ಬದುಕುವುದು ಬಹಳ ಅಗತ್ಯ,’ ಎಂದರು.
“ನನಗೆ ಗುರುಗಳೊಬ್ಬರು ಯೋಗ ಕಲಿಸುತ್ತಿದ್ದರು. ನಿತ್ಯ ಯೋಗ, ಪ್ರಾಣಾಯಾಮ ಮಾಡುತ್ತಿದ್ದೆ. ಈಗಿನ ಕೆಲಸದ ಒತ್ತಡದಿಂದ ಯೋಗ ಮಾಡಲು ಸಮಯವೇ ಸಿಗುತ್ತಿಲ್ಲ. ಮುಖ್ಯಮಂತ್ರಿ ಆದ ನಂತರ ಕೆಲಸದ ಜತೆಗೆ ಒತ್ತಡವೂ ಹೆಚ್ಚಾಗಿದೆ. ಇನ್ನಾದರೂ ಸಮಯ ಮಾಡಿಕೊಂಡು ಯೋಗ ಮಾಡಲು ಆರಂಭಿಸುತ್ತೇನೆ,’ ಎಂದು ತಿಳಿಸಿದರು.
ಯೋಗ ತಜ್ಞರಾದ ಜಿ.ವಿ.ವಿ.ಶಾಸಿ, ಡಾ.ಕೆ.ಚಂದ್ರಶೇಖರನ್, ಡಾ.ಕೆ.ವೆಂಕಟಾಚಲಪತಿ ಮತ್ತು ಎನ್.ಪುರುಷೋತ್ತಮ ಅವರಿಗೆ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಶಾಸಕ ಕೆ.ಗೋಪಾಲಯ್ಯ, ಬಿಬಿಎಂಪಿ ಸದಸ್ಯ ಬಿ.ಭದ್ರೇಗೌಡ, ಆರೋಗ್ಯ ಮಂದಿರ ಟ್ರಸ್ಟ್‌ನ ವ್ಯವಸ್ಥಾಪಕ ಧರ್ಮದರ್ಶಿಗಳಾದ ಬಿ.ಎನ್.ಬ್ರಹ್ಮಾಚಾರ್ಯ, ಬಿ.ಸಿ.ಭಾಗ್ಯ ಉಪಸ್ಥಿತರಿದ್ದರು.