Advertisement

ಇನ್ನಷ್ಟು ಶಕ್ತವಾಗಲಿ ಜಿ-20

06:00 AM Dec 03, 2018 | |

ಜಗತ್ತಿನ ಆರ್ಥಿಕತೆ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗಿನ್ನೂ ಸಮರ್ಪಕ ಪರಿಹಾರ ದೊರೆತಿಲ್ಲ. ಈ ನಿಟ್ಟಿನಲ್ಲೂ ಜಿ-20 ಮಾಡಬಹುದಾದದ್ದು ಸಾಕಷ್ಟಿದೆ. 

Advertisement

ಅರ್ಜೆಂಟಿನಾದ ಬ್ಯುನಸ್‌ ಐರಿಸ್‌ ನಗರದಲ್ಲಿ ನಡೆದ ಜಿ-20ಯ 13ನೇ ಸಭೆ ಹಲವು ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿದೆ. ಜಾಗತಿಕ ಆರ್ಥಿಕತೆ ಕವಲು ದಾರಿಯಲ್ಲಿರುವ ಈ ನಿರ್ಣಾಯಕ ಕಾಲಘಟ್ಟದಲ್ಲಿ ಜಗತ್ತಿನ 20 ಶಕ್ತರಾಷ್ಟ್ರಗಳು ಭವಿಷ್ಯದ ಕಾರ್ಯಯೋಜನೆಯೊಂದನ್ನು ಹಮ್ಮಿಕೊಳ್ಳಲು ನೆರವಾದ ಈ ಶೃಂಗದಲ್ಲಿ ಭಾರತವೂ ಮಹತ್ವದ ಪಾತ್ರ ವಹಿಸಿದೆ. ಹತ್ತು ವರ್ಷದ ಹಿಂದೆ ಅಮೆರಿಕದ ವಾಲ್‌ಸ್ಟ್ರೀಟ್‌ನಲ್ಲಿ ಆರಂಭವಾದ ಆರ್ಥಿಕ ಹಿಂಜರಿತ ಕ್ರಮೇಣ ಇಡೀ ಜಗತ್ತಿಗೆ ವ್ಯಾಪಿಸಿ ಜಾಗತಿಕ ಆರ್ಥಿಕತೆ ಕಂಗಾಲಾದ ಸಂದರ್ಭದಲ್ಲಿ ಹುಟ್ಟಿಕೊಂಡ 20 ಶಕ್ತ ದೇಶಗಳ ಒಕ್ಕೂಟ ಜಿ-20. ಜಾಗತಿಕ ಆರ್ಥಿಕತೆಯೇ ಜಿ-20ಯ ಮುಖ್ಯ ಕಾರ್ಯಸೂಚಿ ಆಗಿದ್ದರೂ ಈಗ ಆರ್ಥಿಕತೆಗೆ ಪೂರಕವಾಗಿರುವ ಇತರ ವಿಷಯಗಳತ್ತಲೂ ಅದು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವದು ಸ್ವಾಗತಾರ್ಹ ಬೆಳವಣಿಗೆ. ಜಿ-20ಗೆ ಅಮೆರಿಕದ್ದೇ ಹಿರಿತನವಾಗಿದ್ದರೂ ಜಾಗತಿಕ ಉತ್ಪಾದಕತೆಗೆ ಶೇ. 80ರಷ್ಟು ಕೊಡುಗೆಯನ್ನು ನೀಡುತ್ತಿರುವ ಇತರ 19 ರಾಷ್ಟ್ರಗಳು ಇದರಲ್ಲಿ ಸಹಭಾಗಗಳಾಗಿವೆ ಎನ್ನುವುದೇ ಜಾಗತಿಕ ಆರ್ಥಿಕಯ ದಿಕ್ಕುದೆಸೆಯನ್ನು ನಿರ್ಧರಿಸುವಲ್ಲಿ ಅದು ವಹಿಸುತ್ತಿರುವ ಮುಖ್ಯ ಪಾತ್ರವನ್ನು ತಿಳಿಸುತ್ತದೆ.  

2008ರಲ್ಲಿ ಆರಂಭವಾದ ಹಿಂಜರಿತದಿಂದ ಜಾಗತಿಕ ಆರ್ಥಿಕತೆಯನ್ನು ಮೇಲೆತ್ತುವಲ್ಲಿ ಜಿ-20 ಮುಖ್ಯ ಪಾತ್ರವಹಿಸಿತ್ತು. ಸಂವಾದ ಮತ್ತು ಸಮನ್ವಯದ ಕಾರ್ಯಸೂಚಿಯ ಮೂಲಕ ಪಾತಾಳಕ್ಕೆ ಕುಸಿಯುತ್ತಿದ್ದ ಆರ್ಥಿಕತೆಗೆ ಮರು ಚೈತನ್ಯ ನೀಡಿದ ಹಿರಿಮೆಗೆ ಈ ಒಕ್ಕೂಟಕ್ಕೆ ಸಲ್ಲುತ್ತದೆ. ಹೀಗಾಗಿ ಅಂದಿನಷ್ಟೇ ಪ್ರಸ್ತುತತೆ ಇಂದೂ ಈ ಒಕ್ಕೂಟಕ್ಕಿದೆ. ಆದರೆ ಇದೇ ವೇಳೆ ಜಿ-20ಯ ಉದ್ದೇಶ ಈಡೇರಿರುವು ದರಿಂದ ಇನ್ನೂ ಅದನ್ನು ಮುಂದುವರಿ ಸುವ ಅಗತ್ಯ ಇದೆಯೇ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆರ್ಥಿಕ ಆಘಾತಗಳು ಈಗಲೂ ಆಗಾಗ ಜಾಗತಿಕ ಆರ್ಥಿಕತೆಗೆ ಅಪ್ಪಳಿಸುತ್ತಿರು ತ್ತದೆ. ಎಲ್ಲ ದೇಶಗಳು ರಕ್ಷಣಾತ್ಮಕ ಆರ್ಥಿಕ ನೀತಿಯನ್ನು ಅನುಸರಿಸುತ್ತಿ ರುವ ಈ ಸಂದರ್ಭದಲ್ಲಿ ಜಾಗತಿಕ ಆರ್ಥಿಕತೆಗೆ ಸ್ಪಷ್ಟವಾದ ದಿಕ್ಕುದೆಸೆ ಯೊಂದನ್ನು ನೀಡಲು ಜಿ-20ಯಂಥ ಬಲಿಷ್ಠ ಸಂಘಟನೆಯೊಂದರ ಆಗತ್ಯ ಸದಾ ಇರುತ್ತದೆ ಎನ್ನುವದೇ ಇದಕ್ಕಿರುವ ಉತ್ತರ. ಹೀಗಾಗಿ ಎಂದಿಗೂ ಜಿ-20 ಅಪ್ರಸ್ತುತವಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಆರ್ಥಿಕತೆ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗಿನ್ನೂ ಸಮರ್ಪಕ ಪರಿಹಾರ ದೊರೆತಿಲ್ಲ. ಈ ನಿಟ್ಟಿನಲ್ಲೂ ಜಿ-20 ಮಾಡಬಹುದಾದದ್ದು ಸಾಕಷ್ಟಿದೆ. 

ಜಿ-20 ವೇದಿಕೆಯನ್ನು ಪ್ರಧಾನಿ ಮೋದಿ ಆರ್ಥಿಕ ಅಪರಾಧಿಗಳನ್ನು ಬಗ್ಗುಬಡಿಯುವ ಸೂತ್ರವೊಂದನ್ನು ರಚಿಸಲು ಬಳಸಿಕೊಂಡಿರುವುದು ಸಮರ್ಪಕವಾಗಿಯೇ ಇದೆ. ಭಾರತದಂತೆ ಇನ್ನೂ ಅನೇಕ ದೇಶಗಳು ಈ ಮಾದರಿಯ ವೈಟ್‌ಕಾಲರ್‌ ಅಪರಾಧಿಗಳ ಕಾಟದಿಂದ ಹೈರಾಣಾಗಿವೆ. ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿಯವಂಥವರು ಎಲ್ಲ ದೇಶಗಳಲ್ಲೂ ಇರುತ್ತಾರೆ. ಇಂಥವರನ್ನು ಅವರ ಮೂಲದೇಶಕ್ಕೆ ಕರೆತರಲು ಸುಲಭಶಾಗುವಂತೆ ಮೋದಿ ಒಂಭತ್ತು ಅಂಶಗಳಿರುವ ನವ ಸೂತ್ರವನ್ನು ಮಂಡಿಸಿದ್ದಾರೆ. 

ಈ ಸೂತ್ರದಲ್ಲಿರುವ ಅಂಶಗಳನ್ನು ಎಲ್ಲ ದೇಶಗಳು ಪಾಲಿಸಿದ್ದೇ ಆದಲ್ಲಿ ಆರ್ಥಿಕ ಅಪರಾಧಿಗಳಿಗೆ ಅಡಗಿಕೊಳ್ಳಲು ಸ್ಥಳವಿಲ್ಲದಂತಾಗುತ್ತದೆ. ಹೀಗಾಗಿ ಜಿ-20 ದೇಶಗಳು ಮೋದಿ ಸೂತ್ರದ ಕುರಿತು ಗಂಭೀರವಾದ ಚಿಂತನ ಮಂಥನ ನಡೆಸಿ ಕ್ಷಿಪ್ರವಾಗಿ ಅನುಷ್ಠಾನಿಸುವತ್ತ ಗಮನಹರಿಸಬೇಕು. ಕೆಲವು ಹೊಸ ತಂತ್ರಜ್ಞಾನಗಳು ಜಾಗತಿಕ ಆರ್ಥಿಕತೆಯ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳನ್ನು ಬೀರುತ್ತಿರುವುದು ಈಗ ಕಂಡು ಬರುತ್ತಿದೆ. ಉದಾಹರಣೆಗೆ ಹೇಳುವುದಾದರೆ ಯಾವುದೋ ದೇಶದ ಮೂಲೆಯೊಂದರಲ್ಲಿ ಕುಳಿತು ಇನ್ನೆಲ್ಲೋ ಇರುವ ಖಾತೆಯನ್ನು ಹ್ಯಾಕ್‌ ಮಾಡಿ ಹಣ ಲಪಟಾಯಿಸುವಂಥ ಕೃತ್ಯಗಳು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚುತ್ತಿದ್ದು ಜಿ-20 ದೇಶಗಳು ಇಂಥ ವಿಷಯಗಳತ್ತಲೂ ಗಮನ ಹರಿಸುವುದು ಈ ಸಂದರ್ಭದಲ್ಲಿ ಹೆಚ್ಚು ಅಪೇಕ್ಷಣೀಯವಾಗುತ್ತದೆ. 

Advertisement

ಭ್ರಷ್ಟಾಚಾರ ನಿಗ್ರಹ, ಕಪ್ಪು ಹಣ ನಿವಾರಣೆ, ಉದ್ಯೋಗ ಸೃಷ್ಟಿ, ವಿದೇಶಿ ಹೂಡಿಕೆ ಮುಂತಾದ ಆರ್ಥಿಕತೆಯ ಅಂಗವಾಗಿರುವ ಕ್ಷೇತ್ರಗಳಿಗೆ ಸಂಬಂದಿಸಿದಂತೆ ಜಿ-20 ನಾಯಕರು ಇನ್ನಷ್ಟು ಹೆಚ್ಚು ಗಮನ ಹರಿಸಿ ನಿರ್ಣಯಗಳನ್ನು ಕ್ಷಿಪ್ರವಾಗಿ ಅನುಷ್ಠಾನಿಸಿದರೆ ಜಾಗತಿಕ ಆರ್ಥಿಕತೆಯಲ್ಲಿ ಜಿ-20 ದೇಶಗಳು ಇನ್ನೂ ಮಹತ್ವದ ಪಾತ್ರ ನಿಭಾಯಿಸಬಹುದು.ಇದೆಲ್ಲದರ ಜತೆಗೆ, 2022ರಲ್ಲಿ ಭಾರತ 75ನೇ ಸ್ವಾತಂತ್ರೊéàತ್ಸವ ಆಚರಿಸಿಕೊಳ್ಳಲಿದೆ. ಅದೇ ವರ್ಷದ ಶೃಂಗಸಭೆ ಭಾರತದಲ್ಲೇ ಆಯೋಜನೆಯಾಗುತ್ತಿರುವುದು ಮಹತ್ವದ ವಿಚಾರ.  ಹೀಗಾಗಿ, ಆ ಅವಕಾಶವನ್ನು ಭಾರತ ಸದ್ಬಳಕೆ ಮಾಡಿಕೊಳ್ಳುವುದು ಅತಿ ಮುಖ್ಯ.  

Advertisement

Udayavani is now on Telegram. Click here to join our channel and stay updated with the latest news.

Next