Advertisement

ಕೊರಗುಗಳಿಗೆ ಚೂರಿ ಇರಿದಾಗಲೇ ನಿಜವಾದ ಗೆಲುವು ಕಾಣಲು ಸಾಧ್ಯ..!

10:06 AM Jun 11, 2021 | ಶ್ರೀರಾಜ್ ವಕ್ವಾಡಿ |

ನಾವು ಎಂದಿಗೂ ಸಕ್ಸಸ್ ಬಗ್ಗೆ ತುಂಬಾ ಯೋಚನೆ ಮಾಡುತ್ತೇವೆ. ಆದರೇ, ಸಕ್ಸಸ್ ಆಗುವುದು ಹೇಗೆ ಎನ್ನುವುದರ ಬಗ್ಗೆ ಯೋಚನೆ ಮಾಡುವುದೇ ಇಲ್ಲ.

Advertisement

‘ಸಕ್ಸಸ್ ಫುಲ್’ ಆಗಬೇಕೆಂದಿರುವ ಒಬ್ಬ ವ್ಯಕ್ತಿ ಯಾವಾಗಲೂ ಸೃಜನಾತ್ಮಕವಾಗಿ ಬದುಕನ್ನು ಕಂಡುಕೊಳ್ಳುತ್ತಾನೆ. ಹಾಗೂ ಆ ಮುಖವಾಗಿ ಬದುಕನ್ನು ಕಂಡುಕೊಳ್ಳುವುದಕ್ಕೆ ಆತ ಮುಂದಾಗುತ್ತಾನೆ.

ಸಕ್ಸಸ್ ಬಗ್ಗೆ ಬಹಳ ಯೋಚನೆ ಮಾಡುವ ಬಹಳ ಮಂದಿ ನಿಸ್ಪೃಹವನ್ನು, ನಿರಾಸೆಯನ್ನು ಹೆಚ್ಚಾಗಿ ಎದುರಿಸುತ್ತಾರೆ.

ಮನುಷ್ಯನ ಬದುಕೆಂಬುವುದು ಸುಖವೆಂಬ ಮರೀಚಿಕೆಯ ಬೆನ್ನು ಹಿಡಿಯುವ ಗೊತ್ತಿಲ್ಲದ ಪ್ರಯಾಣ. ಈ ಪ್ರಯಾಣದಲ್ಲಿ ಕಷ್ಟಗಳ ಸರಮಾಲೆ ಸುತ್ತಿಕೊಳ್ಳುತ್ತಲೇ ಇರುತ್ತದೆ. ಒಮ್ಮೊಮ್ಮೆ ದೊರೆತ ಯಶಸ್ಸು ಮುಂದೊಂದು ದಿನ ಕಷ್ಟಗಳ ಬೇಡಿಯನ್ನು ತೊಡಿಸುತ್ತದೆ. ಇನ್ನು ಕೆಲವೊಮ್ಮೆ ನಾವು ಸೋತ ಸೋಲುಗಳೇ ನಮ್ಮ ಬದುಕಿಗೆ ಹೊಸ ಮೆರಗು ನೀಡುತ್ತವೆ.

ಬದುಕಿನ ಕೊರಗುಗಳಿಗೆ, ಕೊರತೆಗಳಿಗೆ ಚೂರಿ ಇರಿದು ಕೊಂದುಕೊಂಡಾಗಲೇ  ನಿಜವಾದ ಗೆಲುವು ಕಾಣುವುದಕ್ಕೆ ಸಾಧ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಗೆಲ್ಲುವುದಕ್ಕಿಂತ ಸೋಲದಿರುವುದೇ ಮುಖ್ಯ.

Advertisement

ಬಹಳ ಮಂದಿಗೆ ಗೆಲ್ಲವುದೆಂದರೇ ಸುಖದ ಸುಪ್ಪತ್ತಿಗೆಯಲ್ಲಿ ಬದುಕನ್ನು ಅನುಭವಿಸುವುದೆಂದಷ್ಟೇ ಗೊತ್ತು. ಆದರೇ, ಬದುಕಿನಲ್ಲಿ ಎಂತಹ ಕಷ್ಟದ ಕಾಲದಲ್ಲಿಯೂ ಸೋಲಿಗೆ ಎದುರಾಗಿ ಗಟ್ಟಿಯಾಗಿ ನಿಲ್ಲುವುದೇ ದೊಡ್ಡ ಗೆಲುವು ಎಂದು ಯಾರಿಗೂ ಗೊತ್ತಿಲ್ಲ.

‘ಸೆಲ್ಫ್ ಇಮೇಜ್’ ನನ್ನು ಆಯ್ಕೆ ಮಾಡಿಕೊಳ್ಳದೇ ತಮ್ಮ ಜೀವನದ ಎಷ್ಟೋ ಸುಂದರ ಸಮಯಯನ್ನು ಕಳೆದುಕೊಳ್ಳುವುದುಂಟು. ನಿಮ್ಮ ಬದುಕು ಹಸನಾಗಬೇಕೆಂದಿದ್ದಲ್ಲಿ ಅದನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುವುದನ್ನು ಕಲಿತುಕೊಂಡಿರದೇ ಬದುಕುವುದು, ಮತ್ತು ಆ ಬದುಕಿನಲ್ಲೇ ಗೆಲುವು ಕಾಣುವುದಕ್ಕೆ ಬಯಸುವುದು ದೊಡ್ಡ ದುರಂತ.

ನಮ್ಮ ಅಂತರ್ಗತ ಶಕ್ತಿಯ ಬಗ್ಗೆ ನಮಗೆ ನಂಬಿಕೆಯೇ ಇಲ್ಲದಿರುವಾಗ ನಾವು ‘ಸಕ್ಸಸ್ ಫುಲ್’ ಬದುಕನ್ನು ಕನಸಿನಲ್ಲಿಯೂ ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ನಮ್ಮ ಬದುಕಿನ ಗೆಲುವಿನ ಮೊದಲ ಹೆಜ್ಜೆ ಯಾವುದೆಂದರೇ, ನಮ್ಮ ಮನಸ್ಸಿನ ಒಳಗಿರುವ ಅಂತರ್ಗತ ಶಕ್ತಿ. ನಾವು ಆ ಶಕ್ತಿಯ ಮೇಲೆ ಅಪಾರವಾಗಿ ಇಡುವ ಗೌರವ ಹಾಗೂ ನಂಬಿಕೆ ನಮಗೆ ಹೊಸ ದಾರಿಗೆ ಅನುವು ಮಾಡಿಕೊಡುತ್ತದೆ ಎನ್ನುವುದರಲ್ಲಿ ಅನುಮಾನ ಇಲ್ಲ.

ನಿಮ್ಮ ಮನಸ್ಸು ಕಳಂಕವಿಲ್ಲದ್ದು. ಆ ಮನಸ್ಸಿನಲ್ಲಿ ಇರುವ ಸ್ವಯಂ ನಿಂದನೆಗಳನ್ನು ಹಾಗೂ ಪರ ನಿಂದನೆಗಳನ್ನು ತೊಲಗಿಸಕೊಳ್ಳುವುದು ಕೂಡ ವೈಯಕ್ತಿಕ ಏಳ್ಗೆಗೆ ರಹದಾರಿಯನ್ನು ಒದಗಿಸಿಕೊಡುತ್ತದೆ. ಹಾಗಾಗಿ ನಮ್ಮ ಬಗ್ಗೆ ನಾವೇ ನಿಂದಿಸಿಕೊಳ್ಳುವುದು ಹಾಗೂ ಇನ್ನೊಬ್ಬರನ್ನು ನಿಂದಿಸುವುದನ್ನು ಕಡಿಮೆ ಮಾಡಿದಷ್ಟು ನಾವು ಅತಿ ಬೇಗ ಬದುಕಿನಲ್ಲಿ ಗೆಲುವನ್ನು ಕಾಣುತ್ತೇವೆ.

‘ಬಿ ಹ್ಯಾಪಿ ಆ್ಯಂಡ್ ಕೀಪ್ ಅದರ್ಸ್ ಟು ಹ್ಯಾಪಿ’ ಎಂಬ ನಗುವಿನ ಮಂತ್ರ ನಿಮ್ಮನ್ನು ಗೆಲುವಿನ ಅರ್ಧ ದಾರಿಯ ತನಕ ಯಾವುದೇ ಪರಿಶ್ರಮವಿಲ್ಲದೇ, ಉಚಿತವಾಗಿ ಕೊಂಡ್ಹೋಗಿ ಬಿಡುತ್ತದೆ. ಹಾಗಾಗಿ ಬದುಕನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವ ಬದಲಾಗಿ, ಬದುಕನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ, ನಗು ನಗುತ್ತಾ ನಡೆಯುವುದು ಅಥವಾ ಬದುಕುವುದು ಬಹಳ ಮುಖ್ಯ ಆಗುತ್ತದೆ.

ಬದುಕಿನಲ್ಲಿ ಏರು ಪೇರುಗಳಿಲ್ಲದೇ ನಿಜವಾದ ಗೆಲುವನ್ನು ಕಾಣುವುದಕ್ಕೆ ನಿಮಗೆ ಸಾಧ್ಯವೇ ಇಲ್ಲ. ಏರು ಪೇರುಗಳಿಲ್ಲದೇ ಕಾಣುವ ಗೆಲುವು ಅದು ಕ್ಷಣಿಕ ಸುಖವಷ್ಟೇ.

ಇನ್ನು, ಒಬ್ಬ ವ್ಯಕ್ತಿ ಎಷ್ಟೇ ಧನಾತ್ಮಕತೆಯಿಂದ ಬದುಕನ್ನು ಕಾಣುವುದಕ್ಕೆ ಪ್ರಯತ್ನ ಪಟ್ಟರೂ ಕೂಡ ಸಣ್ಣ ಋಣಾತ್ಮಕತೆ ಆತನಲ್ಲಿ ಇದ್ದೇ ಇರುತ್ತದೆ. ಆದರೇ, ಧನಾತ್ಮಕತೆಗೆ ಋಣಾತ್ಮಕತೆಯನ್ನು ತಿರುಗಿಸಿಕೊಳ್ಳುವ ಹೇಗೆ ಎನ್ನುವುದರ ಬಗ್ಗೆ ತಿಳಿದಿರಬೇಕು. ಅಂದರೇ, ಅವಲಕ್ಷಣಗಳನ್ನು ಸುಲಕ್ಷಣಗಳನ್ನಾಗಿ ಪರಿವರ್ತಿಸಿಕೊಳ್ಳುವುದು ಎಂದರ್ಥ.

ಗೆಲುವು ಎನ್ನುವುದು ಸುಮ್ಮನೆ ಬರುವುದಿಲ್ಲ. ಅದು ಜೀವನದಲ್ಲಿ ಪರಿಶ್ರಮ ಹೆಚ್ಚಾದ ಹಾಗೆ ಅನುಭವಪೂರ್ವಕವಾಗಿ ಬರುವ ಅನುಭೂತಿ. ಎಲ್ಲರೂ ಗೆಲ್ಲಬಹುದು ಆದರೇ, ಅವರೊಳಗಿನ ಚಿಂತೆಗಳನ್ನು ಚಿತೆಯ ಮೇಲೆ ಸುಟ್ಟುಕೊಂಡಾಗ ಮಾತ್ರ. ಬದುಕು ಚೆನ್ನಾಗಿದೆ. ನೀವಂದುಕೊಂಡದ್ದಕ್ಕಿಂತ ದುಪ್ಪಟ್ಟು ಚೆನ್ನಾಗಿದೆ.

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ : ಪಾಸಿಟಿವ್ ಗೆದ್ದೇ ಗೆಲ್ಲುತ್ತದೆ : ಓದುಗರೊಬ್ಬರಿಂದ ಪಿಡಿಎಫ್ ಆದ ಉದಯವಾಣಿ ಸುದ್ದಿಗಳು ವೈರಲ್

Advertisement

Udayavani is now on Telegram. Click here to join our channel and stay updated with the latest news.

Next