Advertisement

ಮಹಿಳೆಯನ್ನು ದೇವರಿಗೆ ಹೋಲಿಸಿದರೂ ದೌರ್ಜನ್ಯ ನಿಂತಿಲ್ಲ-ನಾಗಲಕ್ಷ್ಮೀ ಚೌಧರಿ

05:50 PM Aug 21, 2024 | Team Udayavani |

■ ಉದಯವಾಣಿ ಸಮಾಚಾರ
ಸವದತ್ತಿ: ಮಹಿಳೆಯನ್ನು ದೇವರಿಗೆ ಹೋಲಿಸಿದರೂ ದೌರ್ಜನ್ಯಗಳು ನಿಂತಿಲ್ಲ. ಮಹಿಳೆಯರು ಕಾನೂನು ಅರಿತು ದೌರ್ಜನ್ಯದ ವಿರುದ್ಧ ಹೋರಾಡುವ ಮನಸ್ಥಿತಿ ಹೊಂದಬೇಕಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.

Advertisement

ಇಲ್ಲಿನ ಗುರುಭವನದಲ್ಲಿ ಮಹಿಳಾ ಆಯೋಗ, ಸಿಡಿಪಿಒ ಆಯೋಜಿಸಿದ್ದ ಮಹಿಳೆಯರಿಗೆ ಕಾನೂನು ಅರಿವು ಮತ್ತು ಹಕ್ಕುಗಳ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಹಿಳೆ ಶಿಕ್ಷಣ ಪಡೆದಲ್ಲಿ ಆ ಕುಟುಂಬವೇ ಸುಶಿಕ್ಷಿತವಾಗುತ್ತದೆ. ನೆಪ ಹೇಳದೇ ಎಲ್ಲರಿಗೂ ಶಿಕ್ಷಣ ಕೊಡಿಸುವ ಜವಾಬ್ದಾರಿ ಮಹಿಳೆಯ ಮೇಲಿದೆ. ಆಯೋಗ ರಕ್ಷಣೆಗೆ ಮಾತ್ರವಲ್ಲದೇ ಮಹಿಳೆಯನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಸಹಕಾರಿಯಾಗಿದೆ. ತಮ್ಮಲ್ಲಿರುವ ಶಕ್ತಿ ಅರಿತು ದೌರ್ಜನ್ಯಗಳನ್ನು ವಿರೋಧಿಸುವ ಮನೋಭಾವನೆ
ಹೊಂದುವುದು ಅಗತ್ಯ ಎಂದರು.

6 ಕೋಟಿಗೂ ಅಧಿಕ ಭ್ರೂಣ ಹತ್ಯೆ ಪ್ರಕರಣ ವರದಿಯಾಗಿವೆ. ಪುಸ್ತಕ, ಭಾಷಣಗಳಲ್ಲಿ ಮಾತ್ರ ಹೆಣ್ಣಿನ ಕುರಿತು ಮೃದು ಧೋರಣೆ ಬೇಡ. ವಾಸ್ತವದಲ್ಲಿಯೂ ಹೆಣ್ಣಿನ ಕುರಿತು ಸಹಾನುಭೂತಿ ಇರಲಿ. ಮಹಿಳೆಯರು, ಮಕ್ಕಳಿಗೆ ಮೌಲ್ಯಗಳ ಕುರಿತು ಅರಿವು ನೀಡಬೇಕು.

ಜಾಲತಾಣಗಳನ್ನು ಸಮಯ ವ್ಯರ್ಥ ಮಾಡಲು ಬಳಸದೇ ಜ್ಞಾನ ಸಂಪಾದನೆಗೆ ಉಪಯೋಗಿಸಿರಿ ಎಂದರು. ಉಪನ್ಯಾಸಕಿ ಶಕುಂತಲಾ ಅಜ್ಜನ್ನವರ ಮಾತನಾಡಿ, ಪುರುಷರ ಸಮಾನವಾಗಿ ಬದುಕು ಕಲ್ಪಿಸಿದ ಸಂವಿಧಾನವನ್ನು ತಿಳಿಯುವುದು ಅಗತ್ಯ. ಪ್ರಾಚೀನದಿಂದಲೂ ಪುರುಷರ ದೌರ್ಜನ್ಯಕ್ಕೆ ಮಹಿಳೆ ಬಲಿಯಾಗುತ್ತಲೇ ಇದ್ದಾಳೆ. ಹಸುಗೂಸನ್ನು ಸಹ ಬಿಡದಂತಹ ವಿಕೃತ ಮನಸ್ಥಿತಿಯವರು ಸಮಾಜಕ್ಕೆ ಮಾರಕ ಎಂದರು.

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಬಲೀಕರಣ ಅಗತ್ಯ. ದೇವದಾಸಿ, ಬಾಲ್ಯವಿವಾಹ, ವರದಕ್ಷಿಣೆಗಳಂತ ಅನಿಷ್ಠ ಪದ್ದತಿಗಳ ನಿರ್ಮೂಲನೆಗೆ ಶಿಕ್ಷಣವೇ ಅಸ್ತ್ರ. ಶಿಕ್ಷಣದ ಜೊತೆಗೆ ಗೌರವ ನೀಡುವುದೂ ಅವಶ್ಯವೆಂದರು.

Advertisement

ಕಾರ್ಯಕ್ರಮದಲ್ಲಿ ಆಹಾರ, ಗೃಹ ಬಳಕೆ ವಸ್ತುಗಳ ಪ್ರದರ್ಶನ ಜರುಗಿತು. ತಾಪಂ ಇಒ ಯಶವಂತಕುಮಾರ, ವಕೀಲರ ಸಂಘದ ಅಧ್ಯಕ್ಷ ಎಮ್‌.ಎನ್‌. ಮುತ್ತಿನ, ಅಣ್ಣಪ್ಪ ಹೆಗ್ಗಡೆ, ಬಿಇಓ ಮೋಹನ ದಂಡಿನ, ಆರ್‌.ಆರ್‌. ಕುಲಕರ್ಣಿ, ಸಿಡಿಪಿಒ ಸುನಿತಾ ಪಾಟೀಲ, ಆರ್‌.ಪಿ. ತೋಟಗಿ, ಮೈತ್ರಾದೇವಿ ವಸ್ತ್ರದ ಹಾಗೂ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next