ದಾವಣಗೆರೆ: ನನ್ನ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಷ್ಟೇ ಅಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಬೇಕಾದರೂ ಸ್ಪರ್ಧಿಸಲಿ ನಾನೇ ಗೆಲ್ಲುತ್ತೇನೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.
ಸೋಮವಾರ ಶಾಮನೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಯಾರೂ ಬೇಕಾದರೂ ನನ್ನ ವಿರುದ್ಧ ಸ್ಪರ್ಧಿಸಲಿ, ಬೇಡ ಅನ್ನುವುದಿಲ್ಲ. ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲಿ ಸ್ವಲ್ಪ ಜಾಸ್ತಿ ಹುಮ್ಮಸಿನಲ್ಲಿದ್ದ ಹಿನ್ನೆಲೆ ಸೋಲಾಗಿದೆ. ಈ ಸಲ ಹಾಗೇ ಆಗಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ನವರು ತಂದ ಕಾಮಗಾರಿಗಳೇ ಈಗ ನಡೆಯುತ್ತಿವೆ. ರಾಜ್ಯದಲ್ಲಿ ಹೇಗೆ 40 ಪರ್ಸೆಂಟ್ ಸರ್ಕಾರ ಇದೆಯೋ ದಾವಣಗೆರೆಯಲ್ಲಿ ಸಹ ಇದೆ. ಅದರಿಂದ ಜನ ಬೇಸತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಹಿಟ್ಲರ್ ರೀತಿ ಆಡಳಿತ ನಡೆಸಲಾಗುತ್ತಿದೆ ಎಂದು ದೂರಿದರು.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಬಿಜೆಪಿ ಶೇ.೪೦ರಷ್ಟು ಕಮಿಷನ್ ಸರ್ಕಾರ ಎಂದು ಜನರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಯಾವ ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನಿಸಿದ ಅವರು ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ. ಎಲ್ಲೆಡೆ ನಮ್ಮ ಪಕ್ಷದ ಪರ ಅಲೆ ಈಗಾಗಲೇ ಎದ್ದಿದ್ದು, ನಮಗೂ ಹುಮ್ಮಸ್ಸು ತಂದಿದೆ ಎಂದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಜನರೇ ಈ ಬಾರಿ ಒತ್ತಾಯ ಮಾಡಿದ್ದರು. ಆ ಕಾರಣಕ್ಕಾಗಿಯೇ ನಾನು ಸ್ಪರ್ಧಿಸುತ್ತಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವೇ ಜನರ ಒಲವು ಇದೆ. ಈ ಬಾರಿ ನನ್ನ ಎದುರು ಯಾರೇ ನಿಂತರೂ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕುಕ್ಕರ್ ಹಂಚಲಾಗುತ್ತಿದೆ ಎಂದು ಕೇಸ್ ಹಾಕಿದ್ದಾರೆ. ಕೇಂದ್ರ, ರಾಜ್ಯ ಮತ್ತು ಜಿಲ್ಲೆಯಲ್ಲಿ ಅವರದ್ದೇ ಸರ್ಕಾರ ಇದೆ. ಹಾಗಾಗಿ ಏನೇನೋ ಕೇಸ್ ಹಾಕಿಸುತ್ತಿದ್ದಾರೆ. ಅದು ಯಾವುದೋ ಪ್ರಾಣಿಯ ಕೇಸ್ ಹಾಕಿಸಿದರು. ಅದು ಕೋರ್ಟ್ ನಲ್ಲಿದೆ. ಹಾಗಾಗಿ ಅದರ ಬಗ್ಗೆ ಮಾತನಾಡಲಿಕ್ಕೆ ಹೋಗುವುದಿಲ್ಲ. ಎಲ್ಲ ಬಗೆಹರಿದ ನಂತರ ಮಾತನಾಡುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ಹಿಟ್ಲರ್ ರೀತಿಯ ಸರ್ಕಾರ ಇದೆ. ಒಂದು ಭಾಗ ಹಿಟ್ಲರ್, ಇನ್ನೊಂದು ಭಾಗ ಯಾರದ್ದು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.