ಬಳ್ಳಾರಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿಯವರೇ ಸ್ವತಃ ಬಂದು ನಿಂತರೂ ನಾನು ಸ್ಪರ್ಧಿಸುವೆ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಸವಾಲು ಹಾಕುವ ಮೂಲಕ ಬಹಿರಂಗವಾಗಿ ರಣಕಹಳೆ ಮೊಳಗಿಸಿದರು.
ರಾಜ್ಯ ಸರ್ಕಾರ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸ್ವಲ್ಪ ತಾಳ್ಮೆ ವಹಿಸಿದ್ದರೆ ಜನಾರ್ದನ ರೆಡ್ಡಿ ಪರಿಸ್ಥಿತಿ ಈ ರೀತಿ ಆಗುತ್ತಿರಲಿಲ್ಲ. ಹೊಸ ಪಕ್ಷ ಕಟ್ಟುವ ಅವಶ್ಯಕತೆ ಇರಲಿಲ್ಲ. ಜನಾರ್ದನ ರೆಡ್ಡಿ ದುಡುಕಿದ್ದಾರೆ. ಯಾರ ಮಾತು ಕೇಳುತ್ತಿಲ್ಲ. ಈ ವಿಷಯದಲ್ಲಿ ಜನಾರ್ದನ ರೆಡ್ಡಿ ತಪ್ಪು ಮಾಡಿದ್ದಾರೆ ಎಂದು ಸಹೋದರನ ದುಡುಕಿನ ನಿರ್ಧಾರಗಳ ಬಗ್ಗೆ ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಮನವೊಲಿಸುವ ಕೆಲಸ ಸಚಿವ ಶ್ರೀರಾಮುಲು, ನಾನು ಮಾಡುತ್ತಿದ್ದೇವೆ. ಆದರೂ, ಯಾರ ಮಾತು ಕೇಳದವರಿಗೆ ಏನು ಹೇಳಬೇಕು?, ಬಳ್ಳಾರಿ ನಗರ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಪತ್ನಿ ಅಲ್ಲ, ಸ್ವತಃ ಜನಾರ್ದನ ರೆಡ್ಡಿ ಬಂದರೂ ನಾನು ಬಿಜೆಪಿಯಿಂದ ಸ್ಪರ್ಧೆ ಮಾಡುವೆ ಎಂದು ಬಹಿರಂಗವಾಗಿ ಸವಾಲು ಹಾಕಿದರು.