Advertisement
ಅಜೆಕಾರು: ಕೃಷಿಗೆ ಪೂರಕವಾಗಿ ಹೈನುಗಾರಿಕೆ ಇತ್ತೀಚಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದೆ. ಕೃಷಿಯ ಜತೆಗೆ ಹೈನುಗಾರಿಕೆ ಮಾಡುವುದರಿಂದ ಕೃಷಿಗೆ ಸಾವಯವ ಗೊಬ್ಬರ ದೊರಕುವುದಲ್ಲದೆ ಹಾಲಿನಿಂದ ಉತ್ತಮ ಲಾಭವನ್ನು ಪಡೆಯಬಹುದಾಗಿದೆ ಎಂಬುದನ್ನು 2 ದಶಕಗಳ ಹಿಂದೆಯೇ ಮನವರಿಕೆ ಮಾಡಿಕೊಂಡ ಕಣಜಾರುವಿನ ಅಂತೋನಿ ನಜರತ್ ಅವರು ಹೈನುಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಪ್ರಗತಿಪರ ಕೃಷಿಕರಾಗಿ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.
ಎಕರೆಗೆ ಸುಮಾರು 25 ಕ್ವಿಂಟಾಲ್ ಭತ್ತದ ಫಸಲು ಪಡೆಯುವ ಇವರು ಭತ್ತದ ಕೃಷಿಯಿಂದಲೂ ಸಾಕಷ್ಟು ಲಾಭ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
Related Articles
Advertisement
ಹಟ್ಟಿ ಗೊಬ್ಬರವನ್ನು ಕೃಷಿಗೆ ಉಪಯೋಗಿಸುತ್ತಿದ್ದು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
ವಿನೂತನ ಕೃಷಿ ಪದ್ಧತಿತಂದೆ ಲೂಯಿಸ್ ನಜರತ್ ಕಾಲದಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು ಅನಂತರದ ದಿನಗಳಲ್ಲಿ ವಿದೇಶದಲ್ಲಿ ದುಡಿದು 2 ದಶಕಗಳಿಂದ ತಮ್ಮ ಕೃಷಿ ಭೂಮಿಯಲ್ಲಿ ವಿನೂತನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಸಾವಯವ ಕೃಷಿ ಉತ್ತಮ
ಅವರು ಹೆಚ್ಚಾಗಿ ಕೃಷಿಗೆ ಹಸುರೆಲೆ, ಹಟ್ಟಿ ಗೊಬ್ಬರ, ಸುಡುಮಣ್ಣುಗಳನ್ನೇ ಹೆಚ್ಚಾಗಿ ಬಳಸುತ್ತಿದ್ದು ಸಾವಯವ ಕೃಷಿ ಉತ್ತಮ ಎಂದು ಹೇಳುತ್ತಾರೆ. ಪ್ರತಿಯೋರ್ವ ಕೃಷಿಕರು ಮಿಶ್ರಬೆಳೆ ಜತೆಗೆ ಹೈನುಗಾರಿಕೆ, ಆಡು, ಕೋಳಿ ಸಾಕಣೆ ಮಾಡಿದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದ್ದು, ಒಂದೇ ಕೃಷಿಯನ್ನು ಅವಲಂಬಿಸಿದರೆ ನಷ್ಟ ಸಂಭವಿಸಲಿದೆ ಎಂಬುದು ಅವರ ಅಭಿಪ್ರಾಯ. ಪತ್ನಿ, ಮಕ್ಕಳ ಸಹಕಾರ
ಪತ್ನಿ ಸೆಲೇನಾ ನಜರತ್ ಹಾಗೂ ಇಬ್ಬರು ಮಕ್ಕಳು ಇವರ ಕೃಷಿ ಕಾರ್ಯಕ್ಕೆ ನಿರಂತರ ಸಹಕಾರ ನೀಡುತ್ತಿದ್ದಾರೆ. ಇವರಿಗೆ ಜಿಲ್ಲಾ ಉತ್ತಮ ಕೃಷಿಕ ಪ್ರಶಸ್ತಿಯ ಜತೆಗೆ ವಿವಿಧ ಸಂಘ, ಸಂಸ್ಥೆಗಳ ಸಮ್ಮಾನ ಸಂದಿವೆ. ದಿನವೊಂದಕ್ಕೆ ಸರಾಸರಿ 200 ಲೀ. ಹಾಲು
ಜರ್ಸಿ, ಎಚ್‌ಎಫ್ ತಳಿಯ ಸುಮಾರು 25 ದನಗಳನ್ನು ಸಾಕುವ ಇವರು ದಿನವೊಂದಕ್ಕೆ ಸರಾಸರಿ 200 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಿದ್ದಾರೆ. ಅತ್ಯಾಧುನಿಕ ದನದ ಹಟ್ಟಿಯನ್ನು ಹೊಂದಿರುವ ಇವರು ದನಗಳಿಗೆ ಹಸುರು ಮೇವನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ತಮ್ಮ ಕೃಷಿ ಭೂಮಿಯಲ್ಲಿ ದನಗಳ ಮೇವಿಗಾಗಿಯೇ ಜಾಗವನ್ನು ಮೀಸಲಿಟ್ಟಿದ್ದು ಅಲ್ಲಿ ಹುಲ್ಲು ಬೆಳೆಸುತ್ತಾರೆ. ದನಗಳ ಜತೆಗೆ ಆಡು ಸಾಕಣೆ, ನಾಟಿಕೋಳಿ ಸಾಕಣೆ, ಮೊಲ ಸಾಕಣೆಯನ್ನು ಮಾಡುತ್ತಿದ್ದಾರೆ. ಕೃಷಿ ಬಿಡುವುದು ಸರಿಯಲ್ಲ
ಕೃಷಿ ಭೂಮಿಯನ್ನು ಹಡಿಲು ಬಿಟ್ಟು ನಗರ ಪ್ರದೇಶದತ್ತ ವಲಸೆ ಹೋಗುವುದು ಸರಿಯಲ್ಲ. ಗ್ರಾಮೀಣ ಭಾಗದಲ್ಲಿರುವ ಫಲವತ್ತಾದ ಕೃಷಿ ಭೂಮಿಯಲ್ಲಿ ಯುವ ಸಮುದಾಯ ಭತ್ತ ಸಹಿತ ವಿವಿಧ ಕೃಷಿಯನ್ನು ಮಾಡಿ ಜತೆಗೆ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಾಗ ಭವಿಷ್ಯದಲ್ಲಿ ಕಾಡಬಹುದಾದ ಆಹಾರದ ಕೊರತೆಯನ್ನು ನೀಗಿಸಬಹುದಾಗಿದೆ. ಕೃಷಿಕರು ಮಾರುಕಟ್ಟೆ ಸಮಸ್ಯೆಯನ್ನು ಹೊಂದಿದ್ದು, ಮಧ್ಯವರ್ತಿರಹಿತ ಮಾರುಕಟ್ಟೆ ದೊರೆತಲ್ಲಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ.
-ಅಂತೋನಿ ನಜರತ್,
ಪ್ರಗತಿಪರ ಕೃಷಿಕ ಹೆಸರು:ಅಂತೋನಿ ನಜರತ್
ಏನೇನು ಕೃಷಿ:ಭತ್ತ, ಅಡಿಕೆ, ತೆಂಗು, ಮಲ್ಲಿಗೆ, ತರಕಾರಿ, ಹಸುರು ಹುಲ್ಲು
ಎಷ್ಟು ವರ್ಷ 72
ಕೃಷಿ ಪ್ರದೇಶ ಸುಮಾರು 5 ಎಕ್ರೆ -ಜಗದೀಶ ಅಜೆಕಾರು