ಆಳಂದ: ಸಾಕ್ಷರ ಭಾರತ ಕಾರ್ಯಕ್ರಮದ 3ನೇ ಹಂತದಲ್ಲಿ 22500 ಮೂಲ ಸಾಕ್ಷರರ ಮೌಲ್ಯ ಮಾಪನ ಮಾರ್ಚ್ 19ರಂದು ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸಂಜಯ ರಡ್ಡಿ ಹೇಳಿದರು. ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಮಾ. 19 ರಂದು ನಡೆಯುವ ಮೂಲ ಸಾಕ್ಷರತೆಯ ಮೌಲ್ಯ ಮಾಪನದ ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2011ರಲ್ಲಿ ಪ್ರಾರಂಭಗೊಂಡ ಸಾಕ್ಷರ ಭಾರತ ಕಾರ್ಯಕ್ರಮದಲ್ಲಿ 2011 ರ ಜನಗಣತಿ ಆಧಾರದಂತೆ 88358 ಅನಕ್ಷರಸ್ಥರನ್ನು ಸರ್ವೇ ಮಾಡಲಾಗಿತ್ತು ಎಂದು ವಿವರಿಸಿದರು. ಈ ಕಾರ್ಯಕ್ರಮದ ಮೊದಲು ಮತ್ತು ಎರಡನೇ ಹಂತದ ಮೂಲ ಸಾಕ್ಷರರ ಮೌಲ್ಯ ಮಾಪನದಲ್ಲಿ 62142 ನವ ಸಾಕ್ಷರಾಗಿ ಗುರುತಿಸಿಕೊಂಡಿದ್ದಾರೆ.
ಇದು 3ನೇ ಹಂತದ ಮೂಲ ಸಾಕ್ಷರರ ಮೌಲ್ಯ ಮಾಪನದಲ್ಲಿ 22500 ಗುರಿ ಹೊಂದಲಾಗಿದೆ. ಪ್ರೇರಕರು ಹಾಗೂ ಸ್ವಯಂ ಸೇವಕರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಅರ್ಚನಾ ಮಾಡಿಯಾಳಕರ ಮಾತನಾಡಿ, ಕಾರ್ಯಕ್ರಮ ಕೊನೆಯ ಹಂತದಲ್ಲಿ ಎಫ್.ಎ.ಎಂ.ಎಸ್ ಹಾಗೂ ಸ್ವಯಂ ಸೇವಕರ ವಿವರವಾದ ಯಾದಿ ಕೂಡಲೇ ಸಲ್ಲಿಸಬೇಕು. ಮಾರ್ಚ್‌ನಲ್ಲಿ ನಡೆಯುವ ಮೂಲ ಸಾಕ್ಷರರ ಮೌಲ್ಯ ಮಾಪನ ಪಾರದರ್ಶಕತೆಯಿಂದ ನಡೆಯಬೇಕು.
ಇದರಲ್ಲಿ ಪ್ರೇರಕರ ಸ್ವಯಂ ಸೇವಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು. ಜಿಲ್ಲಾ ಸಾಕ್ಷರ ಸಮಿತಿಯ ಲೆಕ್ಕ ಪರಿಶೋಧಕ ಬಂಡಯ್ಯ ಹಿರೇಮಠ, ತಾಪಂ ಲೋಕ ಶಿಕ್ಷಣ ಸಮಿತಿ ಸಂಯೋಜಕ ಗಣಪತಿ ಪ್ರಚಂಡೆ, ಪ್ರೇರಕರ ಒಕ್ಕೂಟ ಅಧ್ಯಕ್ಷ ಶಿವಲಿಂಗ್ ತೇಲ್ಕರ, ಪ್ರಧಾನ ಕಾರ್ಯದರ್ಶಿ ಗುಂಡಪ್ಪ ರಾಮನ್, ಉಪಾಧ್ಯಕ್ಷ ಚಂದ್ರಕಾಂತ ನರೋಣೆ ಹಾಗೂ ಪ್ರೇರಕರು ಸೇರಿದಂತೆ 39 ಗ್ರಾ.ಪಂ ಲೋಕ ಶಿಕ್ಷಣ ಸಮಿತಿಯ ಪ್ರೇರಕರು ಹಾಜರಿದ್ದರು.