Advertisement

ಮೌಲ್ಯಮಾಪನವೆಂಬ ಮೋಜು –ಗೋಜು

10:11 AM Mar 18, 2020 | mahesh |

ಮೌಲ್ಯಮಾಪನ ಮಾಡುವಾಗ ನವರಸ ಪ್ರಸಂಗಗಳು ನಡೆಯುತ್ತವೆ. ಕೆಲವು ಸಲ ನಗಬೇಕು, ಕೆಲವು ಸಲ ಅಳಬೇಕು ಅನಿಸುತ್ತದೆ. ಇನ್ನೂ ಕೆಲ ಬಾರಿ ಸಿಟ್ಟು ಬಂದು, ಇವರಿಗೆಲ್ಲ ಹೇಗೆ ಅಂಕ ಕೊಡಬೇಕು ಅಂತ ಹಿರಿಯರನ್ನು ಕೇಳಬೇಕಾಗಿ ಬರುತ್ತದೆ. ಹೀಗೆ, ಮೌಲ್ಯಮಾಪನ ಎಂಬ ಜಗತ್ತಿನಲ್ಲಿ ನಡೆಯುವ ಒಂದಷ್ಟು ರಂಜನೀಯ ಪ್ರಸಂಗಗಳ ಸ್ಯಾಂಪಲ್‌ಗ‌ಳು ಇಲ್ಲಿವೆ.

Advertisement

ಪರೀಕ್ಷೆ ಮತ್ತು ಫ‌ಲಿತಾಂಶದ ನಡುವಿನ ಬಹುಮುಖ್ಯ ಪ್ರಕ್ರಿಯೆ ಮೌಲ್ಯಮಾಪನ. ಸಾವಿರಾರು ಜನ ನುರಿತ ಅಧ್ಯಾಪಕರಿಂದ ನಡೆಯುವ ಈ ಕಾರ್ಯ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ವ್ಯಾಲುಯೇಶನ್‌ ಎಂಬ ಕೆಲಸ ಎಷ್ಟು ಮೌಲಿಕವೋ ಅಷ್ಟೇ ಸವಾಲಿನದ್ದು. ಕಡಿಮೆ ಅಂಕಗಳಿಸುವ ವಿದ್ಯಾರ್ಥಿಯಿಂದ ಹಿಡಿದು, ನೂರಕ್ಕೆ ನೂರು ಅಂಕ ಪಡೆಯುವ ವಿದ್ಯಾರ್ಥಿಗಳೂ ಇರುತ್ತಾರೆ. ಅವರು ಬರೆದ ಉತ್ತರಗಳು, ಚಿತ್ರಗಳು, ವಿಮರ್ಶೆಗಳು, ಹೊಸ ರೀತಿಯ ನಿರೂಪಣೆಗಳು ಮೌಲ್ಯಮಾಪಕರ ಮೆಚ್ಚುಗೆಗಳಿಸುತ್ತವೆ. ಕೆಲವೊಮ್ಮೆ ತಾಳ್ಮೆ ಪರೀಕ್ಷಿಸುತ್ತವೆ. ಇವರ ಜೊತೆ ವಿನೂತನ ಉತ್ತರ ಬರೆಯುವ ವಿಶೇಷ ವಿದ್ಯಾರ್ಥಿಗಳೂ ಇರುತ್ತಾರೆ. ಇವರು ಹಲವಾರು ರೋಚಕ, ತಮಾಷಯ, ವಿಷಾದದ‌ ಅನುಭವ – ಪ್ರಸಂಗಗಳನ್ನು ಉಪನ್ಯಾಸಕರಿಗೆ ಪುಕ್ಕಟೆಯಾಗಿ ಒದಗಿಸುತ್ತಾರೆ. ರಾಜ್ಯದ ಅನೇಕ ಕೇಂದ್ರಗಳಲ್ಲಿ ಮೌಲ್ಯಮಾಪನ ಕೆಲಸಕ್ಕೆ ಹಾಜರಾಗಿ ಕೆಲಸ ಮಾಡುವ ಶಿಕ್ಷಕರು, ವಿದ್ಯಾರ್ಥಿಗಳು ಉತ್ತರಗಳ ಬದಲಾಗಿ ಬರೆಯುವ ವಿಚಿತ್ರ ಸತ್ಯಗಳನ್ನು ಕಂಡು, ಏನು ಮಾಡಬೇಕೆಂದು ತೋಚದೆ ಹಿರಿಯ ಸಹೋದ್ಯೋಗಿಗಳ ಸಲಹೆ ಪಡೆಯುವ ಸಂದರ್ಭಗಳು ವ್ಯಾಲುಯೇಶನ್‌ ಸೆಂಟರ್‌ಗಳಲ್ಲಿ ಸಾಮಾನ್ಯ.

ನಗು ಬರಿಸುವ, ಆತಂಕ ಹುಟ್ಟಿಸುವ, ವಿಷಾದಕ್ಕೆ ದೂಡುವ, ಅಂಗಲಾಚುವ, ಉಪದೇಶಿಸುವ ಮತ್ತು ಛೇಡಿಸುವ ಅನೇಕ ಉತ್ತರಗಳು ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ಕಾಣಿಸುತ್ತವೆ. ಕನ್ನಡ ಮೀಡಿಯಂನಲ್ಲಿ ಉತ್ತರಿಸುವ ವಿದ್ಯಾರ್ಥಿಗಳ ಉತ್ತರಗಳಿಂದ ಅವರ ಪ್ರಾದೇಶಿಕತೆಯ ಬಗೆಗೂ ಸುಳಿವು ದೊರೆಯುತ್ತದೆ. ಉತ್ತರ ಪತ್ರಿಕೆಗಳಲ್ಲಿ ಅಡಗಿಸಿಟ್ಟ ನೂರು-ಐದುನೂರರ ನೋಟುಗಳಿಂದ ಚಹಾ-ಬೊಂಡಾ ತಿಂದು ವಿದ್ಯಾರ್ಥಿಗೆ ಕೃತಜ್ಞತೆ ಹೇಳಿದ ಉದಾಹರಣೆಗಳೂ ನಮ್ಮಲ್ಲಿವೆ.

1 ಗ್ಯಾಪ್‌ ಆನ್ಸರ್‌
ಬಹಳ ಹಿಂದೆ. ಪಿಯುಸಿ ಗಣಿತದ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯುತ್ತಿತ್ತು. ಸಹ ಅಧ್ಯಾಪಕರೊಬ್ಬರು ಒಂದೇ ಉತ್ತರ ಪತ್ರಿಕೆಯನ್ನು ಬಹಳ ಹೊತ್ತು ಹಿಡಿದು ಕೂತಿದ್ದರು. “ಏನ್‌ ಸಮಾಚಾರ?’ ಎಂದಾಗ, “ನೋಡಿ, ಈ ವಿದ್ಯಾರ್ಥಿ ಸರಿಯಾದ ಉತ್ತರ ಬರೆಯಲು ಪ್ರಯತ್ನಿಸಿದ್ದಾನೆ. ವಾಕ್ಯ, ಹಂತಗಳ ನಡುವೆ ತುಂಬಾ ಗ್ಯಾಪ್‌ ಇದೆ. ಪೂರ್ತಿ ಮಾರ್ಕ್ಸ್ ಕೊಡೋ ಹಾಗೂ ಇಲ್ಲ, ಬಿಡೋ ಹಾಗೂ ಇಲ್ಲ’ ಎಂದರು. ನಾನೂ ಸಹ ಕಣ್ಣು ಹಾಯಿಸಿದೆ. ಕೊನೆಯ ಪುಟದ ಕೆಳತುದಿಯಲ್ಲೊಂದು ವಿಶೇಷ ಸೂಚನೆ ಎಂದು ತೀರಾ ಸಣ್ಣ ಅಕ್ಷರಗಳಲ್ಲಿ ಇಂಗ್ಲಿಷ್‌ನಲ್ಲಿ ಹೀಗೆ ಬರೆದಿದ್ದ. ಪ್ರಶ್ನೆಗಳಿಗೆ ಬೇಕಾದ ಉತ್ತರಗಳನ್ನು ಕರ್ಚಿಫ್ನಲ್ಲಿ ಬರೆದು ತಂದಿದ್ದೆ. ಅದು ಒದ್ದೆಯಾಗಿ, ಕೆಲ ಅಕ್ಷರಗಳು ಮಾಸಿ ಹೋಗಿ, ಉತ್ತರ ಪೂರ್ತಿ ಕಾಣದಾಗಿದ್ದರಿಂದ, ನಡುನಡುವೆ ಖಾಲಿ ಇದ್ದವು. ಹೀಗಾಗಿ, ಪೂರ್ತಿ ಬರೆಯಲಾಗಿಲ್ಲ’    - ಹೀಗೆ ಬರೆದಿದ್ದ. ಅಂತೂ ವಿದ್ಯಾರ್ಥಿ ಆ ಕಾಲಕ್ಕೆ ಕಾಪಿ ಹೊಡೆಯುವ ಹೊಸ ತಂತ್ರವನ್ನು ತೋರಿಸಿಕೊಟ್ಟಿದ್ದಲ್ಲದೇ ಅದನ್ನು ನಮಗೂ ತಿಳಿಸಿಕೊಟ್ಟಿದ್ದ.

2 ನಾವು ತ್ರೀ ಈಡಿಯೆಟ್ಸ್‌
“ಸರ್‌ / ಮ್ಯಾಡಂ, ನಾನು ಮತ್ತು ಇನ್ನಿಬ್ಬರು ಜೀವದ ಗೆಳೆಯರು ಒಂದೇ ಕಾಲೇಜಿನ, ಒಂದೇ ಕಾಂಬಿನೇಶನ್‌ನಲ್ಲಿ ಓದಿ ಪರೀಕ್ಷೆಗೆ ಕುಳಿತಿದ್ದೇವೆ. ನಾವು ನಡೆದುಕೊಳ್ಳುತ್ತಿದ್ದ ರೀತಿಯಿಂದ ನಮ್ಮನ್ನು ಕಾಲೇಜಿನ ತುಂಬೆಲ್ಲ ತ್ರೀ ಈಡಿಯೆಟ್ಸ್‌ ಎಂದೇ ಕರೆಯುತ್ತಾರೆ. ನಾವುಗಳು ಬೆಂಗಳೂರಿನ ಆರ್‌.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದಬೇಕೆಂದು ತೀರ್ಮಾನಿಸಿದ್ದೇವೆ. ಮನೆಯಲ್ಲೂ ಒಪ್ಪಿಗೆಯಿದೆ. ನೀವು ಧಾರಾಳವಾಗಿ ಅಂಕ ನೀಡಿದರಷ್ಟೇ ಇದು ಸಾಧ್ಯ. ಅವರಿಬ್ಬರ ರಿಜಿಸ್ಟರ್‌ ನಂಬರನ್ನೂ ಕೊನೆಯಲ್ಲಿ ಬರೆದಿದ್ದೇನೆ. ಸಾಧ್ಯವಾದರೆ, ಆ ಪತ್ರಿಕೆಗಳು ನಿಮಗೆ ಅಥವಾ ನಿಮ್ಮ ಸ್ನೇಹಿತರಿಗೆ ಸಿಕ್ಕರೆ, ಅವರಿಗೂ ಹೆಚ್ಚಿನ ಅಂಕ ಕೊಡುವಂತೆ ಹೇಳಿ. ಫೋನ್‌ ನಂಬರ್‌ ಸಹ ನಮೂದಿಸಿದ್ದೇನೆ. ಅನುಮಾನವಿದ್ದರೆ ಸಂಪರ್ಕಿಸಿ!’ ಎಂದೂ ಒಬ್ಬ ಬರೆದಿದ್ದ ! ಇದಕ್ಕೆ ಏನು ಹೇಳ್ತೀರ?

Advertisement

3 ಇನ್ವಿಜಿಲೇಟರ್‌ ಎಂಬ ಶನಿ
ಇನ್ನೊಂದು ಪ್ರಸಂಗದಲ್ಲಿ ಒಬ್ಬ ವಿದ್ಯಾರ್ಥಿ  “ಸರ್‌ / ಮೇಡಂ, ಉತ್ತರಗಳನ್ನು ಬೇಕಾಬಿಟ್ಟಿ ಬರೆದಿದ್ದೇನೆ. ದಯಮಾಡಿ ಬೇಜಾರು ಮಾಡಿಕೊಳ್ಳಬೇಡಿ. ಆ ಇನ್ವಿಜಿಲೇಟರ್‌ ಎಂಬ ಶನಿ, ನನ್ನ ಬಳಿಯೇ ಸುತ್ತಾಡುತ್ತಿದ್ದ, ನಾನು ಬರೆಯುವುದನ್ನೇ ನೋಡುತ್ತಿದ್ದ. ಅದಕ್ಕೇ ಹೀಗಾಗಿದೆ’ ಎಂದು ಬರೆದಿದ್ದ. ಆತುರದಲ್ಲಿ ನಮಗೆ ಸಿಕ್ಕಿದ್ದು ಒಂದು ಭಾವನಾತ್ಮಕ ಪತ್ರ. ಅದರ ಕರ್ತೃ “ಸಾರ್‌, ನನ್ನ ತಾಯಿಗೆ ನಾನು ಒಬ್ಬನೇ ಮಗ. ಅವಳು ಹೃದ್ರೋಗಿ. ಇದು ನನ್ನ ಮೂರನೆಯ ಪ್ರಯತ್ನ. ಇದರಲ್ಲಿ ಪಾಸಾಗುತ್ತೇನೆ ಎಂದು ನಮ್ಮಮ್ಮನಿಗೆ ಮಾತು ನೀಡಿದ್ದೇನೆ. ನಾನು ಪಾಸಾಗದಿದ್ದರೆ ಅವಳು ಉಳಿಯುವುದಿಲ್ಲ, ದಯಮಾಡಿ ಪಾಸ್‌ ಮಾಡಿ’ ಎಂದು ವಿನಂತಿಸಿಕೊಂಡಿದ್ದ.

4 ದೊಡ್ಡವರೆಲ್ಲಾ ಜಾಣರಲ್ಲ
ಹತ್ತು ವರ್ಷಗಳ ಹಿಂದೆ ಗಣಿತದ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯದಲ್ಲಿದ್ದಾಗ ನಡೆದ ಇನ್ನೊಂದು ಪ್ರಸಂಗ ಸ್ವಾರಸ್ಯಕರ. ” ಇಲ್ಲಿಯವರೆಗೂ ನೀವು ನೋಡಿದ್ದು ಟ್ರೇಲರ್‌ ಮಾತ್ರ, ಅಸಲಿ ಪಿಚ್ಚರ್‌ ಬಾಕಿ ಇದೆ ! ಎಂದು ಬರೆದಿದ್ದ. ಅದನ್ನೇ ಮುಂದುವರಿಸಿ, “ನೀವೆಲ್ಲೂ ವಿದ್ಯಾರ್ಥಿಗಳೂ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತಿದ್ದೀರಿ. ಅದನ್ನು ನಾನು ತುಂಬಾ ಗೌರವಿಸುತ್ತೇನೆ. ಆದರೆ, ಸಿನಿಮಾ ಗೀತೆ ಬರೆಯುವ ಕವಿಯೊಬ್ಬರು ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ ಎಂದು ಬರೆದು ನಮ್ಮನ್ನು ಹೊಗಳಿ ನಿಮ್ಮನ್ನು ತೆಗಳಿ ಅವಮಾನಿಸಿದ್ದಾರೆ. ಇದು ಸರಿಯಲ್ಲವೆಂದೇ ನನ್ನ ನಂಬಿಕೆ. ಆದರೆ, ನನ್ನ ನಂಬಿಕೆಯೊಂದರಿಂದ ಏನೂ ಆಗುವುದಿಲ್ಲ. ನೀವು ಜಾಣರು ಎಂದು ಪೂ›ವ್‌ ಮಾಡಲೇಬೇಕಿದೆ. ನಾನು ಬರೆದ ಅಷ್ಟಿಷ್ಟು ಉತ್ತರಗಳು ಸರಿ ಇಲ್ಲ ಎಂದು ನನಗೂ ಗೊತ್ತಿದೆ. ಆದರೂ, ನಿಮ್ಮ ಚುರುಕು ಬುದ್ಧಿಯನ್ನುಪಯೋಗಿಸಿ, ನನ್ನ ಉತ್ತರಗಳಿಗೆ ಅಂಕ ನೀಡಿ ನಿಮ್ಮನ್ನು ಜಾಣ ಎಂದು ಸಾಬೀತು ಪಡಿಸಿ ಎಂದು ವಿನಂತಿಸುತ್ತೇನೆ ಎಂದು ಸೇರಿಸಿದ್ದ.

5 ಹೈದ್ರಾಬಾದ್‌ ಕರ್ನಾಟಕ
ಭೌತ ವಿಜ್ಞಾನ ವಿಷಯದ ಶಬ್ಧದ ವೇಗವನ್ನಾಧರಿಸಿದ ಪ್ರಶ್ನೆಯೊಂದಕ್ಕೆ ಉತ್ತರ ಬರೆದಿದ್ದ ವಿದ್ಯಾರ್ಥಿ, ನಾನು – ಹೈದ್ರಾಬಾದ್‌ ಕರ್ನಾಟಕ ಪ್ರದೇಶದವನು. ನಮ್ಮಲ್ಲಿ ಕೊಠಡಿ ಉಷ್ಣಾಂಶ, ಊರಿನ ಉಷ್ಣಾಂಶದಷ್ಟೇ ಇರುತ್ತದೆ. ಅಲ್ಲದೆ ಉಷ್ಣಾಂಶ ಏರಿದಂತೆ, ಶಬ್ದದ ವೇಗವೂ ಏರುತ್ತದೆ ಎಂಬ ನಿಯಮವಿರುವುದರಿಂದ ನಮ್ಮಲ್ಲಿ ಯಾವಾಗಲೂ 50 ಡಿಗ್ರಿಗಿಂತ ಜಾಸ್ತಿ ಇರುತ್ತದೆ. ಆದ್ದರಿಂದ ಶಬ್ದದ ವೇಗವನ್ನು ಪ್ರತೀ ಸೆಕೆಂಡಿಗೆ 333 ಕಿ.ಮೀ ಎಂಬುದರ ಬದಲಿಗೆ 400 ಎಂದು ಬದಲಾಯಿಸಿ ಲೆಕ್ಕ ಮಾಡಿದ್ದೇನೆ. ನೀವು ಇದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ಸಣ್ಣ ಪುಟ್ಟ ತಪ್ಪುಗಳಿದ್ದರೆ ಮನ್ನಿಸಿ ಪ್ರಶ್ನೆಗೆ ನಿಗದಿಯಾಗಿರುವ ಪೂರ್ಣ ಅಂಕ ನೀಡಿರಿ. ಇಷ್ಟು ಹೇಳಿಯೂ ಅನುಮಾನವಿದ್ದರೆ, ವ್ಯಾಲುವೇಶನ್‌ ಮಾಡಲು ನಮ್ಮ ಭಾಗದಿಂದ ಬಂದಿರುವ ಭೌತವಿಜ್ಞಾನ ಉಪನ್ಯಾಸಕರನ್ನಾದರೂ ಕೇಳಿ’ ಎಂದು ಸಲಹೆಯನ್ನೂ ನೀಡಿದ್ದ.

ಗುರುರಾಜ್‌ ಎಸ್‌. ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next