Advertisement

ಎತ್ತಿನಹೊಳೆಗಿಂತಲೂ ದುಪ್ಪಟ್ಟು ನೀರು ಮಳೆಯಿಂದಲೇ ಸಿಗುತ್ತಂತೆ

03:45 AM Jan 21, 2017 | Team Udayavani |

ಬೆಂಗಳೂರು: ನೂರಾರು ಕಿ.ಮೀ.ದೂರದ ಎತ್ತಿನಹೊಳೆಯಿಂದ ಕೋಲಾರ ಮತ್ತು ಸುತ್ತಲಿನ ಜಿಲ್ಲೆಗಳಿಗೆ 24 ಟಿಎಂಸಿ ನೀರು ಹರಿಸಲು ಹೊರಟ ಸರ್ಕಾರ, ಮನಸ್ಸು ಮಾಡಿದರೆ ಅದೇ ಕೋಲಾರದಲ್ಲಿ ದುಪ್ಪಟ್ಟು ಟಿಎಂಸಿ ನೀರು ಸಂಗ್ರಹಿಸಬಹುದಂತೆ. ಇದು  ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ವಿಜ್ಞಾನಿಗಳ ವಾದ.

Advertisement

ಕೋಲಾರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಳೆದ 116 ವರ್ಷಗಳಿಂದ ಬೀಳುತ್ತಿರುವ ಗರಿಷ್ಠ ಮತ್ತು ಕನಿಷ್ಠ ಮಳೆಯ ಪ್ರಮಾಣ, ಆ ಜಿಲ್ಲೆಯಲ್ಲಿರುವ ಕೆರೆಗಳು, ಮಣ್ಣಿನ ಗುಣಧರ್ಮ, ಅಲ್ಲಿನ ಒತ್ತುವರಿ ಆಧರಿಸಿ ಅಧ್ಯಯನ ನಡೆಸಿದ ವಿಜ್ಞಾನಿಗಳು, ಎತ್ತಿನಹೊಳೆಯಲ್ಲಿ ಸಿಗಬಹುದಾದ ನೀರಿನ ಪ್ರಮಾಣಕ್ಕಿಂತ ಎರಡು-ಮೂರುಪಟ್ಟು ಕೋಲಾರದಲ್ಲೇ ಸಿಗಲಿದೆ. ಆದರೆ, ಇದಕ್ಕೆ ಸ್ಥಳೀಯ ಪ್ರತಿನಿಧಿಗಳು, ಸರ್ಕಾರ ಮನಸ್ಸು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋಲಾರದಲ್ಲಿ ವಾರ್ಷಿಕ ಸರಾಸರಿ 690ರಿಂದ 201 ಮಿ.ಮೀ. (1901ರಿಂದ 2015ರವರೆಗೆ ಬಿದ್ದ ಮಳೆ ಪ್ರಮಾಣ ಲೆಕ್ಕ ಹಾಕಿ) ಮಳೆಯಾಗುತ್ತಿದೆ. ಶೇ. 6.5ರಷ್ಟು ಅರಣ್ಯ ಭೂಮಿ ಹಾಗೂ ಶೇ. 38ರಷ್ಟು ಬಂಜರು ಭೂಮಿ ಇದೆ. ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಪ್ರದೇಶವೂ ಆಗಿದೆ. ಇಲ್ಲಿ ಬಿದ್ದ ಮಳೆ ನೀರು ಪ್ರತಿ ವರ್ಷ ನಿರುಪಯುಕ್ತವಾಗಿ ಹರಿದುಹೋಗುತ್ತಿದೆ. ಈ ನೀರನ್ನೇ ಕೆರೆಗಳ ಸಹಾಯದಿಂದ ಸಮರ್ಪಕವಾಗಿ ಹಿಡಿದಿಟ್ಟುಕೊಂಡರೆ, ವಾರ್ಷಿಕ 63.8 ಟಿಎಂಸಿ ನೀರು ಜಿಲ್ಲೆಯ ಜನರಿಗೆ ಲಭ್ಯವಾಗಲಿದೆ.

ನೂರಾರು ಕಿ.ಮೀ. ದೂರದಲ್ಲಿರುವ ಎತ್ತಿನಹೊಳೆ ತಿರುವಿನಿಂದ ನೀರು ತರುವ ದೊಡ್ಡ ಯೋಜನೆಗಳಿಗೆ ಹೋಲಿಸಿದರೆ, ಕೋಲಾರದಲ್ಲೇ ಬೀಳುವ ಮಳೆ ನೀರನ್ನು ಹಿಡಿದಿಡುವ ಯೋಜನೆ ಸರಳ ಮತ್ತು ಕಾರ್ಯಸಾಧು ಆಗಿದೆ. ಬಿದ್ದ ಮಳೆ ನೀರನ್ನು ಜಿಲ್ಲೆಯಲ್ಲಿರುವ ಕೆರೆಗಳಿಗೆ ತಿರುಗುವಂತೆ ಮಾಡಬೇಕು ಎಂದು ಐಐಎಸ್ಸಿ ಪರಿಸರ ವಿಜ್ಞಾನಗಳ ವಿಭಾಗದ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ತಿಳಿಸಿದ್ದಾರೆ.

ಶೇ. 40ರಷ್ಟು ಭೂಮಿ ಪಾಳು
ಜಿಐಎಸ್‌ (ಗ್ಲೋಬಲ್‌ ಇನ್‌ಫಾರೆ¾àಷನ್‌ ಸಿಸ್ಟ್‌ಂ) ಆಧಾರಿತ ಭೌಗೋಳಿಕ ಸಂಪನ್ಮೂಲಗಳ ವಿಶ್ಲೇಷಣಾ ವ್ಯವಸ್ಥೆ (ಜಿಆರ್‌ಎಸ್‌ಎಸ್‌) ಮೂಲಕ 1978, 1998 ಹಾಗೂ 2002ರ ಅವಧಿಯಲ್ಲಿನ ಕೋಲಾರದ ಭೌಗೋಳಿಕ ಚಿತ್ರಣವನ್ನು ನೋಡಿದಾಗ, ಜಲಮೂಲಗಳು ಬರಿದಾಗುತ್ತಾ ಬಂದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಜಲಮೂಲಗಳು ಅನ್ಯಉದ್ದೇಶಗಳಿಗೆ ಬಳಕೆಯಾಗಿರುವುದನ್ನು ಕಾಣಬಹುದು. ಸೂಕ್ತ ನಿರ್ಧಾರಗಳ ಕೊರತೆ ಮತ್ತು ವ್ಯವಸ್ಥಿತ ಯೋಜನೆಗಳೇ ಇಲ್ಲದಿರುವುದರಿಂದ ಕೋಲಾರ ವ್ಯಾಪ್ತಿಯಲ್ಲಿರುವ ಶೇ. 40ರಷ್ಟು ಭೂಪ್ರದೇಶ ಪಾಳುಬಿದ್ದಿದೆ ಎಂದು ಅವರು ಹೇಳುತ್ತಾರೆ.

Advertisement

ಈ ಹಿನ್ನೆಲೆಯಲ್ಲಿ ಕೆರೆಗಳ ಹೂಳು ತೆಗೆದು, ಸಮಗ್ರ ಜಲಾನಯನ ಯೋಜನೆ ಮತ್ತು ನಿರ್ವಹಣೆ ಕೈಗೆತ್ತಿಕೊಳ್ಳುವ ತುರ್ತು ಅವಶ್ಯಕತೆ ಇದೆ. ಏಕರೂಪದ ಕೃಷಿ ಅಂದರೆ ಯಥೇತ್ಛವಾಗಿ ಬೆಳೆದ ನಿಲಗಿರಿಯನ್ನು ನಾಶಪಡಿಸಬೇಕು. ಅರೆ-ಒಣ ಪ್ರದೇಶದ ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡಬೇಕು. ನೀರಾವರಿ ಬೆಳೆಗಳಿಗೆ ನಿರ್ಬಂಧ ವಿಧಿಸಬೇಕು ಎಂದು  ತಿಳಿಸುತ್ತಾರೆ.

ಆದರೆ ನೀರಾವರಿ ಹೋರಾಟ ಸಮಿತಿಯ ಆಂಜನೇಯರೆಡ್ಡಿ, ಮಳೆ ನೀರು ಸಂಗ್ರಹ ಒಂದೇ ಪರಿಹಾರವಲ್ಲ. ಮಳೆ ನೀರು ಹಿಡಿದಿಡುವುದು ಒಂದೆಡೆಯಾದರೆ, ಮತ್ತೂಂದೆಡೆ ಜಲಸಂಪನ್ಮೂಲ ಹೆಚ್ಚು ಇರುವ ಪ್ರದೇಶಗಳಿಂದ ಈ ಪ್ರದೇಶಗಳಿಗೆ ನೀರು ತರುವುದು. ಎರಡರ ಬಗ್ಗೆಯೂ ಚಿಂತನೆ ಅಗತ್ಯ ಎಂದು ಪ್ರತಿಪಾದಿಸುತ್ತಾರೆ.

ಮಳೆ ನೀರು ಹಿಡಿದಿಡುವ ಯಾವುದೇ ವ್ಯವಸ್ಥೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಕಡೆಗಳಲ್ಲೂ ಇಲ್ಲ. ಪೋಷಕ ಕಾಲುವೆಗಳಿಂದ ಹರಿಯುವ ನೀರು ರಾಜುಕಾಲುವೆಗಳ ಮೂಲಕ ಹಾದು ಕೆರೆ-ಕುಂಟೆಗಳನ್ನು ಸೇರಬೇಕು. ಆದರೆ, ಆ “ಸಾಗಾಣಿಕೆ ಸಾಧನ’ಗಳೆಲ್ಲವೂ ಒತ್ತುವರಿಯಾಗಿದ್ದರಿಂದ ಸಮಸ್ಯೆ ಉದ್ಭವಿಸಿದೆ. ಹೀಗಾಗಿ, ಪರ್ಯಾಯ ಮಾರ್ಗದ ಬಗ್ಗೆಯೂ ಗಂಭೀರವಾಗಿ ಯೋಚಿಸುವುದು ಅವಶ್ಯಕ ಎಂದು ಹೇಳುತ್ತಾರೆ.

ಕೋಲಾರ ಜಿಲ್ಲೆಯ ಭೂಬಳಕೆ ವಿವರ (ಹೆಕ್ಟೇರ್‌ಗಳಲ್ಲಿ)
ವರ್ಗ    ಮೇಲುಸ್ತುವಾರಿ ಮಾಡಲ್ಪಟ್ಟ ಭೂಮಿ    ಮೇಲುಸ್ತುವಾರಿ ಇಲ್ಲದ ಭೂಮಿ
ಕೃಷಿ    2,33,519    2,22,416
ನಿರ್ಮಿತ ಪ್ರದೇಶ    1,31,468    70,970
ಅರಣ್ಯ    68,300    85,295
ಮರಗಳ ತೋಪು    70,276    84,716
ಪಾಳುಬಿದ್ದ ಭೂಮಿ    3,20,284    3,60,450    

– ವಿಜಯಕುಮಾರ್‌ ಚಂದರಗಿ
 

Advertisement

Udayavani is now on Telegram. Click here to join our channel and stay updated with the latest news.

Next