Advertisement

ಎತ್ತಿನಹೊಳೆ: ಶೀಘ್ರ ಪ್ರಧಾನಿ ಬಳಿ ನಿಯೋಗ

09:46 PM Jun 21, 2019 | Team Udayavani |

ಚಿಕ್ಕಬಳ್ಳಾಪುರ: ಕಳೆದ ಹತ್ತು ವರ್ಷಗಳಿಂದ ಎತ್ತಿನಹೊಳೆ ನೀರು ಹರಿಸುತ್ತೇನೆಂದು ಈ ಭಾಗದ ಜನತೆಗೆ ಸುಳ್ಳು ಹೇಳಿಕೊಂಡ ಬಂದ ಎಂ.ವೀರಪ್ಪ ಮೊಯ್ಲಿ ಮನೆ ಸೇರಿಕೊಂಡರು. ನಾವು ಸದ್ಯದಲೇ ಕೇಂದ್ರ ಸಚಿವ ಡಿ.ವಿ.ಸದಾದನಂಗೌಡ ನೇತೃತ್ವದಲ್ಲಿ ಈ ಭಾಗದ ಸಂಸದರ, ಶಾಸಕರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕಾಮಗಾರಿ ತ್ವರಿತಗತಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸುವಂತೆ ಒತ್ತಡ ತರುತ್ತೇವೆ ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

Advertisement

ಜಿಲ್ಲಾ ಕೇಂದ್ರದ ವಿವಿಧ ಶಾಲಾ, ಕಾಲೇಜುಗಳಿಗೆ ಶುಕ್ರವಾರ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದ ಬಳಿಕ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಭಾಗಕ್ಕೆ ಎತ್ತಿನಹೊಳೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಕಾಳಜಿ ಕೇಂದ್ರಕ್ಕಿದೆ. ಆದರೆ ಮೈತ್ರಿ ಸರ್ಕಾರಕ್ಕಿಲ್ಲ ಎಂದು ಟೀಕಿಸಿದರು.

ಶ್ವೇತಪತ್ರ ಬಿಡುಗಡೆ ಮಾಡಲಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದೆ, 105 ಮಂದಿ ಇರುವ ಬಿಜೆಪಿ ಶಾಸಕರಿಗೆ ಎಷ್ಟು ಅನುದಾನ ಅವರ ಕ್ಷೇತ್ರಗಳಿಗೆ ಅಭಿವೃದ್ಧಿಗಾಗಿ ಕೊಟ್ಟಿದ್ದಾರೆ ಎಂಬುದನ್ನು ಸಿಎಂ ಶ್ವೇತ ಪತ್ರ ಹೊರಡಿಸಲಿ.

ಅವರ ಕಣ್ಣಿಗೆ ಮಂಡ್ಯ, ಹಾಸನ, ರಾಮನಗರ, ತುಮಕೂರು ಬಿಟ್ಟರೆ ಬಯಲು ಸೀಮೆ ಜಿಲ್ಲೆಗಳು ಅವರ ಕಣ್ಣಿಗೆ ಕಾಣಲ್ಲ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಶಾಸಕರನ್ನು ಖುಷಿಪಡಿಸುವ ವಿಚಾರದಲ್ಲಿ ಮೈತ್ರಿ ನಾಯಕರು ರಾಜ್ಯದ ಜನರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ದೂರಿದರು.

ಖಾತೆ ಹಂಚಿಕೆ ಮಾಡಿಲ್ಲ: ಇಬ್ಬರು ಪಕ್ಷೇತರ ಶಾಸಕರನ್ನು ಮಂತ್ರಿ ಮಾಡಿದರೂ ಇದುವರೆಗೂ ಅವರಿಗೆ ಖಾತೆ ಹಂಚಿಕೆ ಮಾಡಿಲ್ಲ. ಅವರು ಖಾತೆ ರಹಿತ ಸಚಿವರೇ ಎಂದು ಪ್ರಶ್ನಿಸಿದರು. ಯಾವ ಖಾತೆ ನೀಡಬೇಕೆಂದು ಲಾಭ, ನಷ್ಟದ ಲೆಕ್ಕಾಚಾರ ಮಾಡುತ್ತಿದ್ದಾರೆ ಎಂದು ಗೇಲಿ ಮಾಡಿದರು.

Advertisement

ಒಬ್ಬ ಮಂತ್ರಿ ಬಳಿ ಮೂರ್ನಾಲ್ಕು ಖಾತೆಗಳಿದ್ದರೂ ಇದುವರೆಗೂ ಪಕ್ಷೇತರ ಸಚಿವರಿಗೆ ಖಾತೆ ಕೊಡಲು ಆಗಿಲ್ಲ. ರಾಜ್ಯ ಸರ್ಕಾರ ಎಲ್ಲಾ ರಂಗದಲ್ಲಿ ವಿಫ‌ಲವಾಗಿದೆ. ಮೈತ್ರಿ ಪಕ್ಷಗಳ ನಾಯಕರಿಗೆ ರಾಜ್ಯದ ಹಿತಾಸಕ್ತಿಗಿಂತ ಸರ್ಕಾರ ಉಳಿಸಿಕೊಂಡು ಹೋಗುವುದೇ ಮುಖ್ಯ ಗುರಿಯಾಗಿದೆ ಎಂದರು.

ರೈತರಿಗೆ ಮೋಸ: ಬರ ನಿಭಾಯಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಜಿಲ್ಲೆಯ ಜನತೆಗೆ ನರೇಗಾ ಕೂಲಿ ಹಣ, ರೇಷ್ಮೆ, ಡ್ರಿಪ್‌, ಹಾಲಿನ ಪ್ರೋತ್ಸಾಹ ಧನ ಕೂಡ ಬಾಕಿ ಇಟ್ಟುಕೊಂಡಿದೆ. ಬೇರೆ ರಾಜ್ಯಗಳಲ್ಲಿ ರೈತರಿಗೆ ಹಾಲು ಕೊಡುವ ಹಣಕ್ಕೆ ಹಾಗೂ ನಮ್ಮಲ್ಲಿ ರೈತರ ಹಾಲಿಗೆ ಕೊಡುವ ಹಣದಲ್ಲಿ 10 ರೂ. ವ್ಯತ್ಯಾಸ ಇದೆ. ರಾಜ್ಯದ ಹಾಲು ಒಕ್ಕೂಟಗಳು ರೈತರಿಗೆ ಮೋಸ ಮಾಡುವ ಕೆಲಸದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ರೈತರ ಸಾಲ ಮನ್ನಾ ರದ್ದಾಗಬಹುದು: ಲೋಕಸಭಾ ಚುನಾವಣೆಯ ಫ‌ಲಿತಾಂಶ ಕಾಂಗ್ರೆಸ್‌, ಜೆಡಿಎಸ್‌ ನಾಯಕರಿಗೆ ತೀವ್ರ ಮುಖಭಂಗ ಉಂಟು ಮಾಡಿದೆ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಯೋಜನೆಯನ್ನು ಸ್ಥಗಿತಗೊಳಿಸಿದರೂ ಆಶ್ಚರ್ಯ ಪಡಬೇಕಿಲ್ಲ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್‌, ಮುಖಂಡರಾದ ಹನುಮಂತಪ್ಪ, ಎ.ವಿ.ಭೈರೇಗೌಡ, ಲಕ್ಷ್ಮೀಪತಿ, ಲಕ್ಷ್ಮೀನಾರಾಯಣ ಗುಪ್ತ, ಬಿಜೆಪಿ ನಗರ ಘಟಕ ಅಧ್ಯಕ್ಷ ಮಂಜುನಾಥ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸಿ.ಬಿ.ಕಿರಣ್‌, ಎಬಿವಿಪಿ ಮುಖಂಡ ಎನ್‌.ಮಂಜುನಾಥರೆಡ್ಡಿ ಉಪಸ್ಥಿತರಿದ್ದರು.

ರಾಜ್ಯ ಸರ್ಕಾರ ಕೋಮಾದಲ್ಲಿ: ರಾಜ್ಯದ ಮೈತ್ರಿ ಸರ್ಕಾರ ಕೋಮಾದಲ್ಲಿದೆ. ಯಾವಾಗ ಶವಾಗಾರಕ್ಕೆ ಸ್ಥಳಾಂತರಗೊಳ್ಳುತ್ತದೆ ಎಂಬುದು ಹೇಳಕ್ಕೆ ಆಗುವುದಿಲ್ಲ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ತಮಟೆ ಬಾರಿಸಲು, ಮಾಜಿ ಸಿಎಂ ಸಿದ್ದರಾಮಯ್ಯ ಉರುಗೋಲು ಹಿಡಿಯಲು ಸಿದ್ಧರಾಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಲೇವಡಿ ಮಾಡಿದರು.

ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್‌, ಸಚಿವರಾದ ಹೆಚ್‌.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್‌ ಮತ್ತಿತರರು ಸರ್ಕಾರದ ಶವವನ್ನು ಹೊರಲು ತಯಾರಾಗಿದ್ದಾರೆ. ಮಾನ ಮರ್ಯದೆ ಇದ್ದರೆ ಕುಮಾರಸ್ವಾಮಿ ಗೌರವಯುತವಾಗಿ ಸರ್ಕಾರ ನಡೆಸಲಿ. ಇಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next