ಬೆಂಗಳೂರು: ಸಕ್ಕರೆ ಕಾರ್ಖಾನೆಯ ಸುತ್ತ 15 ಕಿ.ಮೀ. ವ್ಯಾಪ್ತಿಯಲ್ಲಿ ಎಥೆನಾಲ್ ಉತ್ಪಾದನ ಘಟಕ ಸ್ಥಾಪಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಎಥೆನಾಲ್ ಕಾರ್ಖಾನೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲು ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಆಸ್ಕಿನ್ಸ್ ಬಯೋಪ್ಯುಯೆಲ್ಸ… ಪ್ರ„ವೇಟ್ ಲಿಮಿಟೆಡ್ ಮತ್ತು ಶ್ರೀ ಬ್ರಹ್ಮಾನಂದ ಸಾಗರ್ ಸಕ್ಕರೆ ಕೈಗಾರಿಕೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾ| ಎನ್.ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ನ್ಯಾಯಪೀಠವು 1966 ಮತ್ತು 2021ರ ಕಬ್ಬು (ನಿಯಂತ್ರಣ) ಆದೇಶದ ನಿಬಂಧನೆಗಳನ್ನು ಆಧರಿಸಿ, 2021ರಿಂದೀಚೆಗೆ ಸಕ್ಕರೆ ಮತ್ತು ಎಥೆನಾಲ್ ಎರಡನ್ನೂ ತಯಾರಿಸುವ ಅಗತ್ಯವಿಲ್ಲ ಮತ್ತು ಸಕ್ಕರೆ ಅಥವಾ ಎಥೆನಾಲ್ ಎರಡರಲ್ಲಿ ಒಂದು ತಯಾರಿಸಿದರೆ ಕಾನೂನಿನ ಅಡಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಕಾರ್ಖಾನೆ ಅಥವಾ ಸಕ್ಕರೆ ಕಾರ್ಖಾನೆ ಎಂದು ವ್ಯಾಖ್ಯಾನಿಸಬಹುದಾಗಿದೆ ಎಂದು ಹೇಳಿದೆ.
ಅಲ್ಲದೆ, 2021 ರಿಂದ ಕಬ್ಬು (ನಿಯಂತ್ರಣ) ತಿದ್ದುಪಡಿ ಆದೇಶ ಜಾರಿಗೆ ಬಂದಿದೆ. ಅದರಲ್ಲಿ ಕಾರ್ಖಾನೆ ವ್ಯಾಖ್ಯಾನದಲ್ಲಿ ಬಳಸಲಾದ ಭಾಷೆ ಮತ್ತು ವಿರಾಮ ಚಿಹ್ನೆಯನ್ನು ವಿಶ್ಲೇಷಿಸಿದಾಗ, ನ್ಯಾಯಾಲಯವು ಕೇವಲ ಎಥೆನಾಲ್ ಅನ್ನು ಕಾರ್ಖಾನೆಯ ಆವರಣ/ಕಾರ್ಖಾನೆಯಲ್ಲಿ ತಯಾರಿಸಿದ್ದರೂ ಸಹ, ಸಕ್ಕರೆ ಕಾರ್ಖಾನೆ ವ್ಯಾಖ್ಯಾನದಲ್ಲಿ ರಚಿಸಲಾದ ಕಾನೂನು ಮೂಲಕ ಸಕ್ಕರೆ ಕಾರ್ಖಾನೆ ಎಂದು ಪರಿಗಣಿಸಲು ಸಕ್ಕರೆ ಉತ್ಪಾದಿಸುವ ಅಗತ್ಯವಿಲ್ಲ. ಕೇವಲ ಎಥೆನಾಲ್ ಉತ್ಪಾದಿಸುವ ಕಾರ್ಖಾನೆ ಸ್ಥಾಪಿಸಲು ಸಹ 15 ಕಿ.ಮೀ. ವ್ಯಾಪ್ತಿಯ ನಿರ್ಬಂಧ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಆದೇಶಿಸಿದೆ.
Related Articles
ಎಥೆನಾಲ್ ತಯಾರಿಕೆಯು ಕಬ್ಬಿನ ರಸ, ಸಕ್ಕರೆ ಪಾಕ, ಮೊಲಾಸಿಸ್ ಆಧರಿಸಿದ ಕಾರಣದಿಂದ ಈ ವ್ಯಾಖ್ಯಾನವು ಅಗತ್ಯವಾಯಿತು ಎಂಬುದು ಸ್ಪಷ್ಟವಾಗಿದೆ. ಇದು ಕಬ್ಬಿನ ಉಪ ಉತ್ಪನ್ನವಾದ್ದರಿಂದ 15 ಕಿ.ಮೀ. ವ್ಯಾಪ್ತಿಯ ನಿರ್ಬಂಧದೊಳಗೆ ಎಥೆನಾಲ್ ತಯಾರಿಕೆಗೆ ಅನುಮತಿ ನೀಡಿದರೆ ಸಕ್ಕರೆ ಕಾರ್ಖಾನೆಗೂ ತೊಂದರೆ ಆಗಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬಾಲಬ್ರೂಯಿ ಗೆಸ್ಟ್ ಹೌಸ್ ಕ್ಲಬ್ ಆಗಿ ಪರಿವರ್ತಿಸಲು ಅನುಮತಿ
ಬೆಂಗಳೂರು: ಶತಮಾನಕ್ಕೂ ಹೆಚ್ಚು ಹಳೆಯ ಮರಗಳನ್ನು ಹೊಂದಿರುವ ಪಾರಂಪರಿಕ ಕಟ್ಟಡ ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್ (ಕಾನ್ಸ್‌ಟಿಟ್ಯೂಷನಲ್ ಕ್ಲಬ್) ಆಗಿ ಪರಿವರ್ತಿಸಲು ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ.
ಸುಮಾರು 150 ವರ್ಷಕ್ಕೂ ಮಿಗಿಲಾದ ಹಳೆಯ ಮರಗಳನ್ನು ಹೊಂದಿರುವ ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತಿಸುವುದನ್ನು ಆಕ್ಷೇಪಿಸಿ ಪರಿಸರವಾದಿ ಟಿ. ದತ್ತಾತ್ರೇಯ ದೇವರೇ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಕಟ್ಟಡ ಮತ್ತು ಮರಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ.
ವಿಚಾರಣೆ ವೇಳೆ ಸರಕಾರಿ ವಕೀಲರಾದ ಪ್ರತಿಮಾ ಹೊನ್ನಾಪುರ, ಕಟ್ಟಡದ ಕುರಿತು ಯಥಾಸ್ಥಿತಿ ಕಾಯ್ದಕೊಳ್ಳುವಂತೆ 2021ರ ಅ. 7ರಂದು ನ್ಯಾಯಪೀಠ ನೀಡಿರುವ ಆದೇಶ ತೆರವು ಕೋರಿ ಸರ್ಕಾರ ಮಧ್ಯಾಂತರ ಅರ್ಜಿ ಸಲ್ಲಿಸಿದ್ದು, ಅದನ್ನು ವಿಚಾರಣೆ ನಡೆಸಿ ಮಾನ್ಯ ಮಾಡಬೇಕು ಎಂದು ಕೋರಿದರು. ಅಲ್ಲದೆ, ಅತಿಥಿ ಗೃಹದ ಪುನರ್ ನಿರ್ಮಾಣ, ಮರುವಿನ್ಯಾಸ ಮತ್ತು ಕಟ್ಟಡ ಕೆಡವಬೇಕೆಂಬ ಪ್ರಸ್ತಾಪ ಸರಕಾರದ ಮುಂದಿಲ್ಲ. ಕಟ್ಟಡದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡದೆ ಒಳಾಂಗಣದ ಸೌಂದರ್ಯ ಹೆಚ್ಚಳ ಮಾಡುವ ಪ್ರಸ್ತಾಪವಿದೆ.
ಜತೆಗೆ, ಈ ಕಟ್ಟಡವನ್ನು ಕಾನ್‌ಸ್ಟಿಟ್ಯೂಷನ್ ಕ್ಲಬ್‌ನ್ನಾಗಿ ಬದಲಾಯಿಸುವ ಉದ್ದೇಶವಿದೆ. ಕಟ್ಟಡದ ಆವರಣದಲ್ಲಿರುವ ಯಾವುದೇ ಮರಗಳನ್ನು ಕಡಿಯುವುದಿಲ್ಲ, ಕಟ್ಟಡದ ಯಾವುದೇ ಭಾಗಕ್ಕೂ ಹಾನಿ ಮಾಡುವುದಕ್ಕೆ ಮುಂದಾಗುವುದಿಲ್ಲ ಎಂದು ಸರಕಾರ ನ್ಯಾಯಾಲಯಕ್ಕೆ ಭರವಸೆ ನೀಡಲಿದೆ ಎಂದರು.
ಸರಕಾರಿ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಕಟ್ಟಡ ಮಾರ್ಪಾಡು ಮಾಡದಂತೆ ನಿರ್ವಹಣೆ ಮಾಡಬೇಕು. ಜತೆಗೆ, ಅತಿಥಿ ಗೃಹದ ಆವರಣದಲ್ಲಿ ಯಾವುದೇ ಮರಗಳನ್ನು ಕಡಿಯದೆ ಕ್ರಮ ವಹಿಸಬೇಕು ಎಂದು ಸರಕಾರಕ್ಕೆ ಸೂಚನೆ ನೀಡಿತು. ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್ ಆಗಿ ಬದಲಾಯಿಸುವುದರ ಸಂಬಂಧ ವಿಧಾನಸಭಾಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.