Advertisement

ಗೋಕರ್ಣ ಸಮೀಪ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆ

11:07 PM Jun 17, 2019 | Lakshmi GovindaRaj |

ಬೆಂಗಳೂರು: ವೇದ, ಪುರಾಣ, ಸಮರ ಕಲೆ ಸಹಿತವಾಗಿ ಆಧುನಿಕ ಶಿಕ್ಷಣವನ್ನು ಭಾರತೀಯ ವ್ಯವಸ್ಥೆಯೊಳಗೆ ನೀಡಲು ಗೋಕರ್ಣದ ಸಮೀಪದಲ್ಲಿ ತಕ್ಷಶಿಲಾ ಮಾದರಿಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪನೆ ಮಾಡಲಿದ್ದೇವೆ ಎಂದು ರಾಮಚಂದ್ರಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಘೋಷಿಸಿದರು.

Advertisement

ಸರ್ಕಾರದ ಸಹಾಯಧನ ಹಾಗೂ ಮಾನ್ಯತೆ ಇಲ್ಲದೆಯೇ ತಕ್ಷಶಿಲೆ ಮಾದರಿಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಆರಂಭಿಸಲಿದ್ದೇವೆ. ವಿಶ್ವವಿದ್ಯಾಲಯ, ಪಠ್ಯಕ್ರಮ ಮತ್ತು ಬೋಧನಾ ವಿಧಾನ ಇತ್ಯಾದಿಗಳನ್ನು ಹಂತ ಹಂತವಾಗಿ ಸಿದ್ಧಪಡಿಸಿಕೊಂಡು 2020ರ ಏಪ್ರಿಲ್‌ 26ರಂದು ಉದ್ಘಾಟನೆ ನೆರವೇರಿಸಲಿದ್ದೇವೆ.

ಬಹುಮಹಡಿ ಕಟ್ಟಡಗಳನ್ನು ನಿರ್ಮಿಸದೆ, ಕುಟೀರಗಳು ಹಾಗೂ ಪ್ರಕೃತಿಯ ಮಡಿಲಲ್ಲಿ ಮಕ್ಕಳಿಗೆ ಭಾರತೀಯ ಶಿಕ್ಷಣ ಪದ್ಧತಿಯಂತೆ ವಿದ್ಯಾಭ್ಯಾಸ ನೀಡುವ ವ್ಯವಸ್ಥೆ ಇದಾಗಿದೆ ಎಂದು ಸೋಮವಾರ ಗಿರಿನಗರದ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿ ಮಾಹಿತಿ ನೀಡಿದರು.

ವಿಷ್ಣುಗುಪ್ತ (ಚಾಣಕ್ಯ) ಹೆಸರಿನ ವಿಶ್ವವಿದ್ಯಾಪೀಠದ ಮಹಾಸಂಕಲ್ಪದ ಸಾಕಾರಕ್ಕಾಗಿ ಜೂನ್‌ 20ರಿಂದ ಧಾರಾ ರಾಮಾಯಣ ಪ್ರವಚನ ನಡೆಯಲಿದೆ. ಸಾಮವೇದ ಒಂದು ಕಾಲದಲ್ಲಿ ಸಹಸ್ರ ಶಾಖೆಗಳನ್ನು ಹೊಂದಿತ್ತು. ಈಗ ಮೂರು ಶಾಖೆಗಳು ಮಾತ್ರ ಉಳಿದುಕೊಂಡಿದೆ. ಭಾರತೀಯ ಮೂಲದ ಪ್ರತಿ ವಿದ್ಯೆಯ ಕಥೆಯೂ ಹೀಗೆ ಇದೆ.

ನಮ್ಮ ಪೂರ್ವಜರು ಕಂಡುಕೊಂಡ ಒಂದೊಂದು ವಿದ್ಯೆಯೂ ಪಾಶ್ಚಿಮಾತ್ಯರ ದಾಳಿಯಿಂದ ಅರ್ಥಕಳೆದು ಹೋಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಭಾರತೀಯ ವಿದ್ಯೆಯ ಪ್ರಕಾರದ ಪುನರುಜ್ಜಿವನಕ್ಕಾಗಿ ತಕ್ಷಶಿಲೆ ಮಾದರಿಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ರಚನೆ ಮಾಡುವ ಯೋಜನೆ ಇದಾಗಿದೆ ಎಂದು ವಿವರ ನೀಡಿದರು.

Advertisement

ಭಾರತೀಯತೆಯೇ ಈ ವಿಶ್ವವಿದ್ಯಾಲಯಕ್ಕೆ ಸೇರಲು ಬೇಕಿರುವ ಅರ್ಹತೆಯಾಗಿದೆ. ಜಾತಿ, ಮತ ಪಂಥ ಬೇಧವಿಲ್ಲದೆ ಎಲ್ಲರೂ ದಾಖಲಾಗಬಹುದು ಎಂದು ತಿಳಿಸಿದರು. ವೇದ- ಶಾಸ್ತ್ರಗಳು, ಪರಂಪರೆ- ಪದ್ಧತಿಗಳನ್ನು ಒಳಗೊಂಡ ಸಮಗ್ರ ಭಾರತೀಯ ಸಂಸ್ಕೃತಿಯ ಮಹತ್ವದ ಸಂಗತಿಗಳ ಕುರಿತು ಸಂಶೋಧನೆ ನಡೆಸಲು ಸಂಶೋಧನಾಲಯವನ್ನು ಸ್ಥಾಪಿಸಲಾಗುತ್ತದೆ.

ಇಡೀ ದೇಶದಲ್ಲೇ ವಿಭಿನ್ನವಾದ ವಿಶ್ವವಿದ್ಯಾಲಯವಾಗಿ ಇದು ರೂಪುಗೊಳ್ಳಲಿದೆ. ಹಾಗೆಯೇ ಅಲ್ಲೇ ಸಮೀಪದ ಮಲ್ಲಿಕಾರ್ಜುನ ದೇವಸ್ಥಾನದ ಪರಿಸರದಲ್ಲಿ ಶಂಕರ ಥೀಮ್‌ ಪಾರ್ಕ್‌ ನಿರ್ಮಾಣ ಮಾಡಲಾಗುತ್ತದೆ. ಅವರ ಜೀವನ ಸಾಧನೆಗಳನ್ನು ಶಿಲ್ಪ ಕಲೆಗಳ ಮೂಲಕ ಅನಾವರಣಗೊಳಿಸಲಾಗುತ್ತದೆ.

ದಿವ್ಯೌಷಧವನ, ಸಂಶೋಧನಾಲಯ, ಆಡಿಯೋ, ವಿಡಿಯೋ ಪ್ರದರ್ಶಿನಿ, ವಸ್ತುಸಂಗ್ರಹಾಲಯ ಹಾಗೂ ಬೃಹತ್‌ ಶಾಂಕರ ಗ್ರಂಥ ಸಂಗ್ರಹಾಗಾರ ನಿರ್ಮಿಸಲಿದ್ದೇವೆ ಎಂದು ತಿಳಿಸಿದರು. ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್‌, ಧಾರಾ ರಾಮಾಯಣ ಕ್ರಿಯಾ ಸಮಿತಿ ಅಧ್ಯಕ್ಷೆ ಡಾ.ಶಾರದಾ ಜಯಗೋವಿಂದ್‌, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

5 ಲಕ್ಷ ದೇಣಿಗೆ: ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗಾಗಿ ಹೊರನಾಡು ಕ್ಷೇತ್ರದ ವತಿಯಿಂದ 5 ಲಕ್ಷ ರೂ. ಮೊದಲ ದೇಣಿಗೆಯಾಗಿ ಧರ್ಮದರ್ಶಿ ಭೀಮೇಶ್ವರ ಜೋಶಿಯವರು ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next