Advertisement

ಶೀಘ್ರ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆ

02:06 AM Jun 29, 2022 | Team Udayavani |

ದಾವಣಗೆರೆ: ರಾಜ್ಯದಲ್ಲಿ 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ರೈತರು ಹಾಲು ಉತ್ಪನ್ನ ಸಹಕಾರ ಸಂಘಗಳಿಗೆ ಹಾಲು ಮಾರಾಟ ಮಾಡುತ್ತಿದ್ದಾರೆ. ಆ ಎಲ್ಲ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಪ್ರಾರಂಭಿಸಿ 26 ಲಕ್ಷ ಜನರಿಗೆ ಸದಸ್ಯತ್ವ ನೀಡಿ ಕ್ರೆಡಿಟ್‌ ಕಾರ್ಡ್‌, ಇತರ ಸೌಲಭ್ಯ ಒದಗಿಸುವ ಚಿಂತನೆ ನಡೆದಿದೆ. ಬ್ಯಾಂಕ್‌ ಆರಂಭಿಸುವ ಕುರಿತಂತೆ ರಿಸರ್ವ್‌ ಬ್ಯಾಂಕ್‌ನೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

Advertisement

ಮಂಗಳವಾರ ನಗರದ ತ್ರಿಶೂಲ್‌ ಕಲಾಭವನದಲ್ಲಿ ನಡೆದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿನ ಸೊಸೈಟಿ, ಬ್ಯಾಂಕ್‌ಗಳಲ್ಲಿನ ಮೋಸ, ಅವ್ಯವಹಾರ, ಭ್ರಷ್ಟಾಚಾರ ಹಾಗೂ ದುರ್ಬಳಕೆ ತಡೆಗೆ ಈಗಿರುವ ಕಾನೂನುಗಳ ಜತೆಗೆ ಇನ್ನೂ ಕಠಿನ ಕಾನೂನು ಜಾರಿಗೆ ತರಲಾಗುವುದು ಎಂದರು.

ಅವ್ಯವಹಾರ ತಡೆಗೆ ಕಠಿನ ಕ್ರಮ
ರಾಜ್ಯದಲ್ಲಿ 21 ಡಿಸಿಸಿ, 1 ಅಪೆಕ್ಸ್‌ ಬ್ಯಾಂಕ್‌, 5,400 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, 40-50 ಸಂಘಗಳಲ್ಲಿ ಮೋಸ, ಅವ್ಯವಹಾರ, ಭ್ರಷ್ಟಾಚಾರ ನಡೆಯಬಹುದು. ಅಂದ ಮಾತ್ರಕ್ಕೆ ಇಡೀ ಸಹಕಾರ ಕ್ಷೇತ್ರದಲ್ಲೇ ಅವ್ಯವಹಾರ, ಮೋಸ, ಭ್ರಷ್ಟಾಚಾರ ನಡೆಯುತ್ತದೆ ಎನ್ನುವುದು ಸರಿಯಲ್ಲ. ಆದರೂ ಅವ್ಯವಹಾರ ತಡೆಗೆ ಸರಕಾರ ಇನ್ನೂ ಹೆಚ್ಚಿನ ಅಗತ್ಯ ಕಠಿನ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಶೀಘ್ರ ಸಾಫ್ಟ್‌ ವೇರ್‌ ಅಳವಡಿಕೆ
ರೈತರಿಗೆ ಸಾಲ ವಿತರಣೆ, ಮರುಪಾವತಿ ಇನ್ನಿತರ ವಿಷಯಗಳ ಬಗ್ಗೆ ನಿಗಾ ವಹಿಸಲು ಕೇಂದ್ರ ಸರಕಾರ ಒಂದೇ ಸಾಫ್ಟ್‌ವೇರ್‌ ಅಳವಡಿಸುವ ಚಿಂತನೆ ನಡೆಸಿದೆ. ರಾಜ್ಯದಲ್ಲೂ ಸಾಫ್ಟ್‌ ವೇರ್‌ ಅಳವಡಿಸಲಾಗುವುದು. ಎಲ್ಲ ರೈತರಿಗೆ ಸಹಕಾರ ಸಂಘ, ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ದೊರೆಯಬೇಕು ಎಂದು ಹೇಳಿದರು.

ಅ. 2ರಿಂದ ಯಶಸ್ವಿನಿ ಯೋಜನೆ ಮರು ಜಾರಿ
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯಶಸ್ವಿನಿ ಯೋಜನೆ ಮರು ಜಾರಿಯಾಗಲಿದ್ದು, ಅ. 2ರಂದು ಉದ್ಘಾಟನೆ ಯಾಗಲಿದೆ ಎಂದು ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ವಿನಿ ಯೋಜನೆ ಮರು ಜಾರಿಗೆ ಎಲ್ಲ ತಯಾರಿ ನಡೆದಿದೆ. ಈ ಕುರಿತು ಸಿಎಂ ಜತೆ ಚರ್ಚಿಸಲಾಗಿದೆ ಎಂದು ಹೇಳಿದರು.

ರೈತರ ಸಾಲದ ಮಿತಿ ದ್ವಿಗುಣ
ಯಾವುದೇ ರೈತರಿಗೆ ಸಾಲ ದೊರೆಯಲಿಲ್ಲ ಎನ್ನುವಂತಾಗಬಾರದು ಎನ್ನುವ ಉದ್ದೇಶದಿಂದ ಈಗಿರುವ 3 ಮತ್ತು 10 ಲಕ್ಷದ ಸಾಲದ ಮಿತಿಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರದ ಹಣಕಾಸು ಸಚಿವರೊಂದಿಗೆ ಚರ್ಚಿಸಿದ್ದಾರೆ.

ಅತಿ ಹೆಚ್ಚು ರೈತರಿಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಕಳೆದ ಸಾಲಿನಲ್ಲಿ 30 ಲಕ್ಷ ರೈತರಿಗೆ 20,180 ಕೋಟಿ ರೂ. ಸಾಲ ವಿತರಣೆ ಪೈಕಿ ಗುರಿ ಹೆಚ್ಚಾಗಿ ಶೇ. 102ರಷ್ಟು ಪ್ರಮಾಣದಲ್ಲಿ ಸಾಲ ನೀಡಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ಒದಗಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆದಷ್ಟು ಬೇಗ ಸಾಲ ಸೌಲಭ್ಯ ವಿತರಣೆ ಪ್ರಾರಂಭಿಸಲಾಗುವುದು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next