Advertisement

ಸಮಸ್ತ ಬಿಲ್ಲವರು ಮತ್ತು ಈಡಿಗರ ಒತ್ತಾಸೆಯಂತೆ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ: ಕೋಟ 

04:26 PM Apr 26, 2023 | Team Udayavani |

ಕಾಪು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವು ಸಮಸ್ತ ಬಿಲ್ಲವರು ಮತ್ತು ಈಡಿಗರ ಒತ್ತಾಸೆಯಂತೆ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವೂ ಸೇರಿದಂತೆ ಕುಂಬಾರ, ಬಲಿಜರು, ಗಾಣಿಗ ಸಹಿತ 12 ನಿಗಮಗಳನ್ನು ಸ್ಥಾಪಿಸಿದೆ. ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ, ಅಗ್ನಿಪಥ್‌ ಸೇನಾ ತರಬೇತಿಗಾಗಿ ಕೋಟಿ ಚೆನ್ನಯ ಸೇನಾ ಪೂರ್ವ ತರಬೇತಿ ಶಿಬಿರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ, ಸಮುದಾಯ ಭವನವೂ ಸೇರಿದಂತೆ ಹಿಂದೆಂಗಿಂತಲೂ ಹೆಚ್ಚಿನ ಮೊತ್ತದ ಅನುದಾನವನ್ನು ಬಿಡುಗಡೆಗೊಳಿಸಿದೆ. ಸರಕಾರದ ಅಭಿವೃದ್ಧಿ ಕಾರ್ಯಗಳೇ ಬಿಜೆಪಿಯ ಗೆಲುವಿಗೆ ಪೂರಕವಾಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಮಂಗಳವಾರ ಕಾಪು ಮಂಡಲ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ರಾಜ್ಯದಾದ್ಯಂತ ಎರಡು ದಿನಗಳ ಕಾಲ ಮಹಾ ಪ್ರಚಾರ ಅಭಿಯಾನವನ್ನು ನಡೆಸುತ್ತಿದ್ದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ನಾರಾಯಣಗುರುಗಳ ಮೂರ್ತಿಗೆ ಮಾಲಾರ್ಪಣೆಗೈದು, ಪ್ರಾರ್ಥನೆ ಸಲ್ಲಿಸಿ ಮಹಾ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

ಗುರ್ಮೆ ಸುರೇಶ್‌ ಶೆಟ್ಟಿ ಅವರಿಗೆ ಪೂರ್ಣ ಜನ ಬೆಂಬಲ : ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಅವರಿಗೆ ಸಂಪೂರ್ಣ ಜನ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲಾ ವರ್ಗದ ಜನರು ಜಾತಿ, ಮತ, ಭೇಧವಿಲ್ಲದೇ ಅವರ ಸೇವಾ ಕಾರ್ಯವನ್ನು ಪ್ರಶಂಸಿಸಿ, ಬೆಂಬಲಿಸುತ್ತಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಸಾಧನೆ ಹಾಗೂ ಕಳೆದ ಐದು ವರ್ಷದಲ್ಲಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಜನರೇ ಸ್ವಯಂ ಪ್ರೇರಿತರಾಗಿ ಬಿಜೆಪಿಯ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವಿನ ನಿರೀಕ್ಷೆ : ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಪಕ್ಷ ಉತ್ತಮ, ಸಮರ್ಥ, ಸವ್ಯಸಾಚಿಯಾದ ಗುರ್ಮೆ ಸುರೇಶ್‌ ಶೆಟ್ಟಿ ಅವರನ್ನು ಅಭ್ಯರ್ಥಿಯನ್ನಾಗಿ ನೀಡಿದ್ದು ಅವರ ಗೆಲುವಿಗಾಗಿ ನಾವು ನಿರಂತರ ಶ್ರಮ ವಹಿಸಬೇಕಿದೆ. ಕಳೆದ ಐದು ವರ್ಷದಲ್ಲಿ ನಡೆಸಿರುವ ಮೂರು ಸಾವಿರಕ್ಕೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳ ಸಹಿತ ಡಬಲ್‌ ಇಂಜಿನ್‌ ಸರಕಾರದ ಸಾಧನೆ, ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು ಮತ್ತು ಪಕ್ಷ ಸಂಘಟನಾ ಚಾತುರ್ಯತೆಯಿಂದಾಗಿ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದ್ದು ಸುಮಾರು 20 ಸಾವಿರಕ್ಕೂ ಅಧಿಕ ಮತಗಳೊಂದಿಗೆ ಗೆಲ್ಲುವ ವಿಶ್ವಾಸವಿದೆ ಎಂದರು.

ಜನರ ಆಶೀರ್ವಾದವೇ ಗೆಲುವಿಗೆ ಶ್ರೀರಕ್ಷೆ : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಲಿಷ್ಠವಾಗಿದ್ದು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರೂ ಸೇರಿದಂತೆ ಪಕ್ಷದ ಎಲ್ಲ ಮುಖಂಡರ ಒಗ್ಗಟ್ಟು ಮತ್ತು ಕಾರ್ಯಕರ್ತರ ಪರಿಶ್ರಮದಿಂದಾಗಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರೂ ಕೂಡಾ ಉತ್ತಮ ಸ್ಪಂಧನೆ ನೀಡುತ್ತಿದ್ದಾರೆ. ಚುನಾವಣಾ ಉಸ್ತುವಾರಿಯಾದಿಯಾಗಿ ಎಲ್ಲಾ ಮುಖಂಡರೂ ಗೆಲುವಿಗಾಗಿ ನಿರಂತರ ಶ್ರಮಿಸುತ್ತಿದ್ದು ಮತದಾರರು ಪೂರ್ಣ ಬಹುಮತಗಳೊಂದಿಗೆ ಬೆಂಬಲಿಸಿ, ಹೆಚ್ಚಿನ ಮತಗಳೊಂದಿಗೆ ಗೆಲ್ಲಿಸುವ ವಿಶ್ವಾಸವಿದೆ ಎಂದರು.

Advertisement

ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್‌ ನಾಯಕ್‌, ಚುನಾವಣಾ ಉಸ್ತುವಾರಿ ಸುಲೋಚನಾ ಭಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಆಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್‌, ಪ್ರಮುಖರಾದ ಕಿರಣ್‌ ಆಳ್ವ, ಹರೀಶ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next