ಬೆಂಗಳೂರು: ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಈ ಹಿಂದೆ ಅಂದರೆ 2023ರ ಫೆಬ್ರವರಿ 20ರಂದು ಕರ್ನಾಟಕ ಮೇದಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ತದನಂತರ ಹಲವು ಕಾರಣಗಳನ್ನು ನೀಡಿ ಮಾರ್ಚ್ 9ರಂದು ತನ್ನ ಆದೇಶ ಹಿಂಪಡೆದಿತ್ತು. ಆದರೆ, ಮೇದಾರ ಸಮುದಾಯವು ಪರಿಶಿಷ್ಟ ಪಂಗಡಗಳ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳ ಪಟ್ಟಿಯಲ್ಲಿ ಬರುವುದರಿಂದ ಆ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ನಿಗಮ ಸ್ಥಾಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.
ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಪಟ್ಟಿಯಲ್ಲಿರುವ ಮೇದಾ, ಮೇದಾರಿ, ಗೌರಿಗ, ಬುರುಡ, ಮೇದಾರ ಸಮುದಾಯಗಳು ಈ ನಿಗಮದಡಿ ಬರಲಿದ್ದು, ಅವುಗಳ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಆದೇಶದಲ್ಲಿ ತಿಳಿಸಿದೆ.
Related Articles
ತಾತ್ಕಾಲಿಕವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ಕಟ್ಟಡದಲ್ಲೇ ಈ ಮೇದಾರ ಅಭಿವೃದ್ಧಿ ನಿಗಮ ಕಾರ್ಯನಿರ್ವಹಿಸಲಿದೆ. ನಿಗಮಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯಮಾನುಸಾರ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.