Advertisement

2-3 ಪಂಚಾಯತ್‌ಗೊಂದರಂತೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಸ್ಥಾಪನೆ: ಡಿಕೆಶಿ

12:12 AM Dec 23, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ 2ರಿಂದ 3 ಪಂಚಾಯತ್‌ಗಳಿಗೆ ಒಂದರಂತೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ (ಕೆಪಿಎಸ್‌) ಸ್ಥಾಪಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ಶುಕ್ರವಾರ ಸಮಗ್ರ ಶಿಕ್ಷಣ ನಿರ್ದೇಶನಾಲಯದ ಕಚೇರಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜನಸಂಖ್ಯೆಗೆ ಅನುಗುಣವಾಗಿ ಎರಡು ಅಥವಾ ಮೂರು ಪಂಚಾಯತ್‌ಗಳಿಗೆ ಒಂದರಂತೆ ಪಬ್ಲಿಕ್‌ ಸ್ಕೂಲ್‌ ಸ್ಥಾಪಿಸಲಾಗುವುದು. ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಮಾತ್ರ ಪಬ್ಲಿಕ್‌ ಶಾಲೆ ತೆರೆಯಲಾಗುವುದು. ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪಬ್ಲಿಕ್‌ ಶಾಲೆ ತೆರೆಯಲು ಅವಕಾಶವಿಲ್ಲ ಎಂದರು.

ಜನವರಿ ಎರಡನೇ ವಾರದೊಳಗೆ ಶಾಲೆಗಳ ಅಭಿವೃದ್ಧಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ನೀಡಲು ಒಪ್ಪಿರುವ ಸಂಸ್ಥೆಗಳ ಜತೆಗೆ ಚರ್ಚೆ ನಡೆಸಿ ಅವರಿಗೆ ನಮ್ಮ ಶಾಲೆಗಳ ಪಟ್ಟಿ ನೀಡುತ್ತೇವೆ. ಜತೆಗೆ ಪಬ್ಲಿಕ್‌ ಶಾಲೆಗಳ ಮಾದರಿ, ಯೋಜನೆ ನೀಡಲಾಗುವುದು ಎಂದು ಹೇಳಿದರು.

ಕನಿಷ್ಠ 4 ಕೋಟಿ ರೂ.ನಿಂದ 7 ಕೋಟಿ ರೂ. ವೆಚ್ಚದಲ್ಲಿ 2 ಸಾವಿರ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಕನಿಷ್ಠ 2 ಎಕ್ರೆ ಜಾಗ ಇರುವ ಶಾಲೆಯನ್ನು ಪಬ್ಲಿಕ್‌ ಶಾಲೆಯಾಗಿ ಅಭಿವೃದ್ಧಿಗೆ ಗುರುತಿಸಲಾಗುವುದು. ಅವರ ಹೆಸರಿನಲ್ಲೇ ಶಾಲೆ ಕಟ್ಟಲಾಗುವುದು ಎಂದು ಮಾಹಿತಿ ನೀಡಿದರು.

ಇದರ ಜತೆಗೆ ದೊಡ್ಡ ಖಾಸಗಿ ಶಾಲೆಗಳು ಶಿಕ್ಷಕರ ಕೊರತೆಯಿರುವ ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಆ ಶಾಲೆಗಳಿಗೆ ಬೋಧಕ ಸಿಬಂದಿಯನ್ನು ನಿಯೋಜಿಸುವ ಬಗ್ಗೆಯೂ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಸರಕಾರಿ ಶಾಲೆಗಳ ಶಿಕ್ಷಕರ ಜತೆಗೆ ಖಾಸಗಿ ಶಾಲೆಗಳಿಂದ ನಿಯೋಜಿಸಲ್ಪಟ್ಟ ಶಿಕ್ಷಕರು ಆ ಶಾಲೆಗಳಲ್ಲಿ ಪಠ್ಯ ಬೋಧಿಸಲಿದ್ದಾರೆ ಎಂದರು.

Advertisement

ಬೋಧಕರ ಕೊರತೆಯಿರುವ ಶಾಲೆಗಳ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ತಯಾರಿಸಿ ಖಾಸಗಿ ಶಾಲೆಗಳಿಗೆ ನೀಡಲಿದೆ. ಇದರಿಂದ ಖಾಸಗಿ ಶಾಲೆಗಳು ತಮ್ಮ ನೈತಿಕ ಜವಾಬ್ದಾರಿಯನ್ನು ನಿರ್ವಹಿಸಿದಂತೆ ಆಗುತ್ತದೆ. ಎಲ್ಲ ಶಾಲೆಗಳು ಸರಕಾರಿ ಶಾಲೆಯಾಗಿಯೇ ಉಳಿಯಲಿದ್ದು, ಉಚಿತ ಶಿಕ್ಷಣ ಇರಲಿದೆ. ಶಿಕ್ಷಣಕ್ಕಾಗಿ ಪಟ್ಟಣಗಳತ್ತ ಜನ ವಲಸೆ ಬರುವುದನ್ನು ತಪ್ಪಿಸಿ ಹಳ್ಳಿಗಳಲ್ಲಿಯೇ ಗುಣಮಟ್ಟ ಶಿಕ್ಷಣ ನೀಡುವುದು ನಮ್ಮ ಈ ಯೋಜನೆಯ ಉದ್ದೇಶ. ಈಗಾಗಲೇ 1,900 ಕೋಟಿ ರೂ ಸಾಂಸ್ಥಿಕ ಸಮಾಜಿಕ ನಿಧಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು ಎಂದರು.

ಮನೆ ಬಾಗಿಲಲ್ಲಿ ಶಾಲೆ ಆರಂಭಿಸಲು ಆಗುತ್ತದಾ?
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಸಂಚಾರಕ್ಕೆ ಕ್ರಮ ಕೈಗೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಮನೆ ಬಾಗಿಲಲ್ಲಿ ಶಾಲೆ ತೆರೆಯಲು ಆಗುತ್ತದಾ? ಮಕ್ಕಳು ಶಾಲೆಗೆ ಹೋಗಬೇಕಾಗುತ್ತದೆ. ಈಗ ಉಚಿತ ಬಸ್‌ ಇದೆ. ಮಕ್ಕಳ ಪ್ರಯಾಣಕ್ಕೆ ಸ್ಥಳೀಯರು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. 2-3 ಕಿ.ಮೀ.ಗೆ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟವಾಗಲಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next