Advertisement

ನೀರಾವರಿ ಗ್ರಂಥಾಲಯ, ವಾಟರ್‌ ಮ್ಯೂಸಿಯಂ ಸ್ಥಾಪನೆ

08:51 PM Feb 16, 2020 | Lakshmi GovindaRaj |

ತುಮಕೂರು: ಗಂಗಸಂದ್ರ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೀರಾವರಿ ಡಿಜಿಟಲ್‌ ಹೈಟೆಕ್‌ ಗ್ರಂಥಾಲಯ ಹಾಗೂ ಕರ್ನಾಟಕದ ಸಮಗ್ರ ನೀರಾವರಿ ಅಭಿವೃದ್ಧಿ ಯೋಜನೆಗಳ ಮಾಹಿತಿ ನೀಡುವ ವಾಟರ್‌ ಮ್ಯೂಸಿಯಂ ಸ್ಥಾಪಿಸಲಾಗುವುದು ಎಂದು ಸಂಸದ ಜಿ.ಎಸ್‌.ಬಸವರಾಜ್‌ ತಿಳಿಸಿದರು.

Advertisement

ತುಮಕೂರು ವಿಶ್ವವಿದ್ಯಾನಿಲಯದ ನೀರಾವರಿ ತಜ್ಞ ಜಿ.ಎಸ್‌.ಪರಮಶಿವಯ್ಯ ಅಧ್ಯಯನ ಪೀಠದಿಂದ ಗಂಗಸಂದ್ರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, 2022ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಬೇಕಾದರೆ ಜಮೀನಿಗೆ ನೀರು, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಉತ್ತಮ ಮಾರುಕಟ್ಟೆ ನಿರ್ಮಾಣ ಮೊದಲ ಆದ್ಯತೆಯಾಗಬೇಕು ಎಂದು ಸಲಹೆ ನೀಡಿದರು.

ಎಲ್ಲಾ ಇಲಾಖೆಯ ಅಧಿಕಾರಿಗಳು ಯೋಜನೆ ಪಟ್ಟಿ ಮಾಡಿ ಜಿಲ್ಲಾಧಿಕಾರಿ ಅನುಮೋದನೆ ಪಡೆದು ಜಾರಿಗೆ ಶ್ರಮಿಸಬೇಕು ಎಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಈ ಕೇಂದ್ರ ಒಂದು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಲಿದೆ. ಈ ಯೋಜನೆಗೆ ಜಿಲ್ಲಾಡಳಿತ ಸ್ಪಂದಿಸಲಿದೆ ಕೆರೆಯ ಹದ್ದುಬಸ್ತು ನಿಗದಿಗೊಳಿಸುವುದು ಮತ್ತು ಸರ್ಕಾರಿ ಜಮೀನು ಗುರುತಿಸಿ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಪರಮಶಿವಯ್ಯ ಅವರ ಅಧ್ಯಯನ ಪೀಠಕ್ಕೆ ಕಾಯ್ದಿರಿಸಲಾಗುವುದು ಎಂದರು.

ಅಧ್ಯಯನ ಕೇಂದ್ರದ ನಿರ್ದೇಶಕ ಹಾಗೂ ಕಾವೇರಿ ನಿಗಮದ ನಿರ್ದೇಶಕ ಕೆ.ಜೈಪ್ರಕಾಶ್‌ ಮಾತನಾಡಿ, ಜಿ.ಎಸ್‌.ಪರಮಶಿವಯ್ಯನವರ ಅಧ್ಯಯನ ಕೇಂದ್ರದ ಕನಸು ನನಸು ಮಾಡುವುದರ ಜೊತೆಗೆ ರಾಜ್ಯದ ಪ್ರತಿಯೊಂದು ಭಾಗಕ್ಕೂ ಅನೂಕೂಲವಾಗುವಂತೆ ಊರಿಗೊಂದು ಕೆರೆ, ಆ ಕೆರೆಗೆ ನದಿ ನೀರು ಯೋಜನೆಯಡಿ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಎಂದರು.

ತುಮಕೂರು ಜಿಲ್ಲೆಯ 2715 ಗ್ರಾಮಗಳ ಜಲಗ್ರಾಮ ಕ್ಯಾಲೆಂಡರ್‌ ಮಾಡಲು ಜಿಲ್ಲೆಯ 331 ಗ್ರಾಮ ಪಂಚಾಯಿತಿ ಮತ್ತು 11 ನಗರ ಸ್ಥಳೀಯ ಪ್ರದೇಶಗಳವಾರು ವಿಷನ್‌ ಗ್ರೂಪ್‌ ರಚಿಸುವ ಚಿಂತನೆಯಿದೆ ಎಂದರು. ಅಭಿವೃದ್ಧಿ ರೆವೂಲ್ಯೂಷನ್‌ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಗ್ರಾಮ ಸಂಸದ ಜಿ.ಎಸ್‌.ಬಸವರಾಜ್‌, ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಜನ್ಮ ಸ್ಥಳವಾಗಿದೆ. ಪರಮಶಿವಯ್ಯನವರ ನೀರಾವರಿ ಕನಸುಗಳ ಜೊತೆಗೆ ತುಮಕೂರು ನಗರ ಮತ್ತು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರ ಯೋಜನೆಗಳ ಮಾಹಿತಿ ಲಭ್ಯವಾಗುವಂತೆ ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದರು.

Advertisement

ತಹಶೀಲ್ದಾರ್‌ ಮೋಹನ್‌, ಭದ್ರಾ ಮೇಲ್ದಂಡೆ ಇಲಾಖೆಯ ಡಿಸಿಇ ಮಲ್ಲೇಶ್‌, ಟೂಡಾ ಆಯುಕ್ತ ಯೋಗಾನಂದ್‌, ಬೆಸ್ಕಾಂ ಎಸ್‌.ಇ ಗೋವಿಂದಪ್ಪ, ಲೋಕೋಪಯೋಗಿ ಇಇ ಸಂಜೀವರಾಜು, ಕಾವೇರಿ ನೀರಾವರಿ ಇಇ ಮೋಹನ್‌ ಕುಮಾರ್‌, ನಗರ ನೀರು ಸರಬರಾಜು ಮಂಡಳಿ ಎಇಇ ಚಂದ್ರಶೇಖರ್‌, ಸ್ಮಾರ್ಟ್‌ಸಿಟಿ ಎಇಇ ಶಿವಕುಮಾರ್‌, ಸಣ್ಣ ನೀರಾವರಿ ಇಲಾಖೆ ಎಇಇ ರಂಗನಾಥ್‌, ವಿಶ್ವವಿದ್ಯಾನಿಲಯದ ರಮೇಶ್‌ ರೆಡ್ಡಿ ಇತರರಿದ್ದರು.

ಸ್ಥಳ ಪರಿಶೀಲಿಸಿದ ಸಂಸದ: ಜಿ.ಎಸ್‌.ಪರಮಶಿವಯ್ಯ ಅಧ್ಯಯನ ಪೀಠದಿಂದ ಸ್ಥಾಪಿಸಲು ಉದ್ದೇಶಿಸಿರುವ ನೀರಾವರಿ ಡಿಜಿಟಲ್‌ ಹೈಟೆಕ್‌ ಗ್ರಂಥಾಲಯ ಹಾಗೂ ವಾಟರ್‌ ಮ್ಯೂಸಿಯಂ ನಿರ್ಮಾಣಕ್ಕೆ ಸಂಸದ ಜಿ.ಎಸ್‌.ಬಸವರಾಜ್‌ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ, ಪರಮಶಿವಯ್ಯ ಅಧ್ಯಯನ ಪೀಠ ಇಲ್ಲಿ ಸ್ಥಾಪನೆಯಾದರೆ ಅವರ ಹೆಸರು ಅಜರಾಮರವಾಗುತ್ತದೆ. ರೈತ ಕುಟುಂಬದಿಂದ ಬಂದಿರುವ ಕಾವೇರಿ ನೀರಾವರಿ ನಿಗಮದ ಅಧ್ಯಕ್ಷ ಜೈಪ್ರಕಾಶ್‌ ಪರಮಶಿವಯ್ಯ ಅಧ್ಯಯನ ಪೀಠದ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದ್ದು, ಅವರಲ್ಲಿರುವ ಜ್ಞಾನ ಹಂಚುವ ಕೆಲಸ ಮಾಡುವಂತಾಗಲಿ ಎಂದು ಹೇಳಿದರು. ಗಂಗಸಂದ್ರದ ಜನರು ಸಾಮೂಹಿಕವಾಗಿ ಅಧ್ಯಯನ ಪೀಠ ನಿರ್ಮಾಣಕ್ಕೆ ಬೆಂಬಲ ನೀಡಬೇಕು. ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಗಂಗಸಂದ್ರ ಕೆರೆಗೆ ಸುಮಾರು 62 ಜಾತಿಯ ಪಕ್ಷಿಗಳು ಬರಲಿವೆ ಎಂದು ಪಕ್ಷಿ ಪ್ರೇಮಿಗಳು ಹೇಳುತ್ತಿದ್ದಾರೆ. ಆ ಪಕ್ಷಿಗಳ ಉಳಿವಿಗೆ ಮತ್ತು ವೃದ್ಧಿಗಾಗಿ ಅಗತ್ಯ ಸೌಕರ್ಯ ಮಾಡುವ ಮೂಲಕ ಇದೊಂದು ಪಕ್ಷಿಗಳ ತಾಣವಾಗುವಂತೆ ಯೋಜನೆ ರೂಪಿಸಬಬೇಕು. ಕೆರೆಯ ಸುತ್ತ ಮತ್ತು ಬಟಾನಿಕಲ್‌ ಗಾರ್ಡನ್‌ನಲ್ಲಿ ಎಲ್ಲಾ ಜಾತಿಯ ಮರಗಿಡ ಹಾಕುವ ಮೂಲಕ ಇದೊಂದು ವಿವಿಧ ರೀತಿಯ ಸಸ್ಯ ಪ್ರಾತ್ಯಕ್ಷಿಕೆ ಕೇಂದ್ರವಾಗುವಂತೆ ಮಾಡುವುದು ಅಗತ್ಯ.
-ಜಿ.ಎಸ್‌.ಬಸವರಾಜ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next