ಶಿರಸಿ: ಅರಣ್ಯ ವಾಸಿಗಳಿಗೆ ಭೂಮಿ ಮಂಜೂರಿಗೆ ಸಂಬಂಧಿಸಿ ಸಕಾಲದಲ್ಲಿ ಸೂಕ್ತ ಮಾಹಿತಿ, ಮಾಗದರ್ಶನ ಮತ್ತು ನೆರವು ನೀಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲಿಯೂ ಅರಣ್ಯ ವಾಸಿಗಳಿಗೆ ಮಾಹಿತಿ ಕೇಂದ್ರ ಸ್ಥಾಪಿಸಲು ಜಿಲ್ಲಾ ಅರಣ್ಯ ಭೂ ಹಕ್ಕು ಹೋರಾಟಗಾರರ ವೇದಿಕೆ ನಿರ್ಧರಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಹೋರಾಟಗಾರರ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಅರಣ್ಯವಾಸಿಗಳಿಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅರಣ್ಯ ವಾಸಿಗಳಿಗೆ ಸಾಮಾಜಿಕ ಜ್ಞಾನ ಕೊರತೆ ಮತ್ತು ಅನಕ್ಷರತೆಯಿಂದ ಮಂಜೂರಿಗೆ ಸಂಬಂಧಿಸಿದ ದಾಖಲೆಗಳ ಕ್ರೂಢೀಕರಣ, ಮಂಜೂರಿಯ ವಿಧಿ ವಿಧಾನವನ್ನು ಅನುಸರಿಸುವಲ್ಲಿ ವಿಫಲತೆ ಹಾಗೂ ಕಾನೂನಿನ ಮಾಹಿತಿ ಕೊರತೆಯಿಂದ ಭೂ ಹಕ್ಕು ಪಡೆಯಲು ಸಫಲರಾಗದೇ ಇರುವುದು ವಿಷಾದಕರ. ಈ ದಿಸೆಯಲ್ಲಿ ಹೋರಾಟಗಾರರ ವೇದಿಕೆಯು ಮಾಹಿತಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ ಎಂದು ಹೇಳಿದರು.
ಕಳೆದ 28 ವರ್ಷದ ಹೋರಾಟದಲ್ಲಿ ಸರ್ಕಾರವು 13 ಸಾರೆ ಅರಣ್ಯವಾಸಿಗಳಿಂದ ಅರ್ಜಿ ಸಂಗ್ರಹಿಸಿದ್ದು, ಇಲ್ಲಿಯವರೆಗೆ ಈ ಅರ್ಜಿಗಳ ವಿಲೇವಾರಿ ಸಮರ್ಪಕವಾಗಿ ಆಗಿಲ್ಲ. ಹಾಗೂ ಮಂಜೂರಿಗೆ ಸಂಬಂಧಿಸಿ ಇಂದಿನವರೆಗೂ ಅರಣ್ಯವಾಸಿಗಳು ಗೊಂದಲದಲ್ಲಿ ಇರುವರು. ಇಲ್ಲಿಯವರೆಗೆ ಸರ್ಕಾರದ ಸ್ಪಷ್ಟತೆಯ ಮತ್ತು ಇಚ್ಛಾಶಕ್ತಿ ಕೊರತೆಯಿಂದ ಅರಣ್ಯ ವಾಸಿಗಳು ಹತಾಶೆಗೊಂಡಿದ್ದಾರೆ ಎಂದ ಅವರು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯ ವಾಸಿಗಳು ಅರ್ಜಿ ಸಲ್ಲಿಸಿ 11 ವರ್ಷಗಳಾದರೂ ಸಹಿತ ಪ್ರಾಥಮಿಕ ಹಂತದ ಅರ್ಜಿ ವಿಲೇವಾರಿ ಆಗಿಲ್ಲ. ಆಡಳಿತಾತ್ಮಕವಾಗಿ ವ್ಯವಸ್ಥೆಯು ಪರಿಪೂರ್ಣವಾಗಿ ಮಂಜೂರಿ ಪ್ರಕ್ರಿಯೆಯಲ್ಲಿ ಇಚ್ಛಾಶಕ್ತಿ ವ್ಯಕ್ತಪಡಿಸದೇ ಇರುವುದು ಮೂಲ ಕಾರಣವಾಗಿದೆ. ಜನಪ್ರತಿನಿಧಿಗಳು ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಇಂದಿಗೂ ಗಂಭೀರವಾಗಿ ಪರಿಗಣಿಸಿಯೂ ಇಲ್ಲ ಎಂದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ತಿರಸ್ಕರಿಸಲ್ಪಟ್ಟ ಆದೇಶದಲ್ಲಿ 90 ದಿನಗಳ ಒಳಗೆ ತಿರಸ್ಕೃತ ಅರ್ಜಿಗಳಿಗೆ ಮೇಲ್ಮನವಿ ಸಲ್ಲಿಸಬೇಕು ಎಂಬ ಉಲ್ಲೇಖವಿದೆ. ಆದರೂ ತಿರಸ್ಕರಿಸಲ್ಪಟ್ಟ 65220 ಅರಣ್ಯ ವಾಸಿಗಳಲ್ಲಿ ಕೇವಲ 6300 ಅತಿಕ್ರಮಣದಾರರು ಮಾತ್ರ ಮೇಲ್ಮನವಿ ಸಲ್ಲಿಸಿರುವುದು ವಿಷಾದಕರ. ಭೂ ಹಕ್ಕನ್ನು ಊರ್ಜಿತವಾಗಿ ಇಟ್ಟುಕೊಳ್ಳಲು ಹಾಗೂ ಅತಿಕ್ರಮಣ ಕ್ಷೇತ್ರದಿಂದ ಒಕ್ಕಲೆಬ್ಬಿಸದೇ ಇರಲು ಮೇಲ್ಮನವಿ ಸಲ್ಲಿಸುವುದು ಅತಿ ಅವಶ್ಯವೆಂಬ ಕನಿಷ್ಠ ಪರಿಜ್ಞಾನವೂ ಇಲ್ಲ ಎಂದು ರವೀಂದ್ರ ನಾಯ್ಕ ಹೇಳಿದರು.
ತಾಲೂಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಲಕ್ಷ್ಮಣ ಮಾಲಕನವರ್ ಸ್ವಾಗತಿಸಿದರು. ಅಬ್ರಾಹಿಂ ಮತ್ತು ತಿಮ್ಮಾ ಮರಾಠಿ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಎಂ.ಆರ್. ನಾಯ್ಕ ಕಂಡ್ರಾಜಿ ವಂದಿಸಿದರು.