Advertisement

24 ಕೆರೆ ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ

11:29 AM Jul 15, 2017 | Team Udayavani |

ಮೈಸೂರು: ಕಬಿನಿ ನದಿಯಿಂದ ಸುತ್ತೂರಿನಲ್ಲಿ ನೀರು ಎತ್ತಿ 233 ಕೋಟಿ ರೂ. ವೆಚ್ಚದಲ್ಲಿ 24 ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರಿಂದ 59 ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆವತಿಯಿಂದ ತಗಡೂರು ಗ್ರಾಮದ ಕೊಮ್ಮಗೆರೆ ತುಂಬಿಸುವ ಯೋಜನೆ ಹಾಗೂ ಲೋಕೋ ಪಯೋಗಿ ಇಲಾಖೆವತಿಯಿಂದ ಎಸ್ಸಿ ಹಾಗೂ ಎಸ್ಟಿ ಕಾಲನಿಗಳಲ್ಲಿ ಕಾಂಕ್ರೀಟ್‌ ರಸ್ತೆಗಳು ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕೆರೆಗೆ ನೀರು ತುಂಬಿಸುವುದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿ ಬೋರ್‌ ವೆಲ್‌ಗ‌ಳು, ಬಾವಿಗಳಲ್ಲಿ ನೀರು ಉತ್ತಮವಾಗಿ ಸಿಗಲಿದೆ. 64.75 ಹೆಕ್ಟೇರ್‌ ವಿಸ್ತೀರ್ಣದ ಕೊಮ್ಮಗೆರೆಯಿಂದ ತಗಡೂರು, ಚಿನ್ನಂಬಳ್ಳಿ, ಕಕ್ಕರಹಟ್ಟಿ, ಚುಂಚನಹಳ್ಳಿಗಳ 41.68 ಹೆಕ್ಟೇರ್‌ ಪ್ರದೇಶ ಅಚ್ಚುಕಟ್ಟಾಗಲಿದೆ ಎಂದರು.

ಗುತ್ತಿಗೆದಾರ ಅಮೃತಾ ಎಂಬುವವರಿಗೆ ಈ ಕೆರೆ ಅಭಿವೃದ್ಧಿ ಕಾಮಗಾರಿಯ ಟೆಂಡರ್‌ ಆಗಿದ್ದು, ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಅವಧಿ ನೀಡಲಾಗಿದೆ. ಅವಧಿಗೂ ಮುಂಚೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಈ ಕೆರೆ ತುಂಬುವುದರಿಂದ ಸುತ್ತಲಿನ 20 ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಸಂಸದ ಆರ್‌.ಧ್ರುವನಾರಾಯಣ, ಶಾಸಕ ಕಳಲೆ ಕೇಶವಮೂರ್ತಿ, ವರುಣ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಸಿ.ಬಸವರಾಜು ಇತರರು ಇದ್ದರು.

Advertisement

ಅಧಿಕಾರಿಗಳಿಗೆ ತರಾಟೆ
ಏಯ್‌ ಯಾರ್ರಿ ಇಲ್ಲಿ ಮೈನರ್‌ ಇರಿಗೇಷನ್‌ ಎಸ್‌.ಇ, ಬಾರಪ್ಪ ಇಲ್ಲಿ. ಕೆರೆ ಏರಿ ಎಲ್ಲಾ ಲೀಕ್‌ ಆಯ್ತಾದೆ, ಜಂಗಲ್‌ ಬೆಳದದೆ ಅಂಥಾ ಜನ ಹೇಳ್ತಾವೆ, ಆ ಎಲ್ಲಾ ಕೆಲ್ಸಾ ಮಾಡುಸ್ತಿದ್ದೀಯಾ. ಕೆರೆಗೆ ನೀರು ಬರೋದೊಳ್ಗೆ ಪರ್ಸನಲ್ಲಾಗಿ ನಿಂತು ಎಲ್ಲಾ ಕೆಲ್ಸಾ ಮಾಡಿ ನಂಗೆ ಹೇಳು, ದುಡ್ಡು ಬೇಕಾದ್ರೆ ನಾನು ಕೊಡ್ತೇನೆ.ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ ರಿಂದ ತಗಡೂರಿನ ಕೊಮ್ಮನಕೆರೆ ಅಭಿವೃದ್ಧಿ ಕಾಮಗಾರಿಯ ಮಾಹಿತಿ ಪಡೆದ ರೀತಿ.

ಕೆರೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಗ್ರಾಮಸ್ಥರನ್ನು ಹೆಸರಿಡಿದು ಮಾತನಾಡಿಸಿ ಭಾಷಣ ಏನು ಮಾಡಲ್ಲ ಎಲೆಕ್ಷನ್‌ಗೆ ಬಂದಾಗ ಮಾತಾಡ್ತೀನಿಎಂದು ಹೊರಟು ನಿಂತ ಸಿದ್ದರಾಮಯ್ಯರನ್ನು ಗ್ರಾಮಸ್ಥರು ಪಟ್ಟು ಹಿಡಿದು ವೇದಿಕೆಗೆ ಕರೆತಂದು ಒಬ್ಬೊಬ್ಬರೆ ಗ್ರಾಮದ ಸಮಸ್ಯೆಗಳನ್ನು ಹೇಳ ತೊಡಗಿದರು. ಕೆರೆ ಬಂಡ್‌ ಲೀಕಾಗುತ್ತೆ ಸಾ ಎಂದು ಗ್ರಾಮಸ್ಥರು ತಿಳಿಸಿದಾಗ ಅಧೀಕ್ಷಕ ಎಂಜಿನಿಯರ್‌ ಕರೆದು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next