Advertisement

ಉದ್ಯೋಗ ಮಾಹಿತಿಗೆ ತಜ್ಞರ ಸಮಿತಿ ರಚನೆ

06:00 AM Jul 29, 2018 | Team Udayavani |

ಕುಂದಾಪುರ: ಕೊರಗ ಸಮುದಾಯದ ಅಭಿವೃದ್ಧಿಗೆ ಸರಕಾರ ಎಲ್ಲ  ರೀತಿಯಲ್ಲೂ ಬದ್ಧವಾಗಿದ್ದು, ಆದರೆ   ಮಾಹಿತಿ ಕೊರತೆಯಿಂದ ಅದನ್ನು ಪಡೆದುಕೊಳ್ಳಲು ಹಿಂದುಳಿದಿದ್ದಾರೆ. ಕೊರಗರಿಗೆ ಉದ್ಯೋಗ ಮಾಹಿತಿ ನೀಡಲು ತಜ್ಞರ ಸಮಿತಿ ರಚಿಸಿ, ಆ ಮೂಲಕ ಕ್ಯಾರಿಯರ್‌ ಕೌನ್ಸೆಲಿಂಗ್‌, ಕಾರ್ಯಾಗಾರ, ಶಿಬಿರಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು.
 
ಶನಿವಾರ ಹೆಮ್ಮಾಡಿಯ ಆರ್‌. ಆರ್‌, ಕನ್ವೆನ್ಶನ್‌ ಹಾಲ್‌ನಲ್ಲಿ ಹೆಮ್ಮಾಡಿ ಹಾಗೂ ಕಟ್‌ಬೆಲೂ¤ರು ಗ್ರಾ.ಪಂ., ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ) ಸಹಯೋಗದಲ್ಲಿ ಕೊರಗ ಸಮುದಾಯ ಯುವ ಜನತೆಗೆ ಶೈಕ್ಷಣಿಕ, ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

Advertisement

ಕೊರಗರ ಜೀವನ ಮಟ್ಟ ಸುಧಾರಣೆಗೆ ಕಾಲನಿಯಲ್ಲೇ ಪ್ರತಿ ವಾರ ಸಭೆ ನಡೆಸಿ, ಅಲ್ಲಿ ನಿಮ್ಮ ಸಮಸ್ಯೆಗಳನ್ನು ಪ್ರಸ್ತಾವಿಸಿ. 
2 ತಿಂಗಳಿಗೊಮ್ಮೆ ಪಂಚಾಯತ್‌ ಮಟ್ಟದಲ್ಲಿ ಸಭೆಯಾಗಲಿ. ಅಲ್ಲಿ ಪ್ರಸ್ತಾವವಾದ ವಿಚಾರಗಳನ್ನು ಐಟಿಡಿಪಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಿ ಎಂದ ಡಿಸಿ, ಅರ್ಧದದಲ್ಲೇ ವಿದ್ಯಾಭ್ಯಾಸ ಮುಗಿಸಿದವರಿಗೆ ಕೊರಗರ ಕಾಲನಿಯಲ್ಲಿಯೇ ಕಲಿಯಲು ಇಲಾಖೆ ಯಿಂದಲೇ ಅವಕಾಶ ಮಾಡಿಕೊಡ ಲಾಗುವುದು ಎಂದವರು ಹೇಳಿದರು. 

ಶಿಕ್ಷಣವೇ ಪರಿಹಾರ
ಉದ್ಘಾಟಿಸಿದ ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್‌ ಮಾತನಾಡಿ, ಕೊರಗರಿಗೆ ಸಾಕಷ್ಟು ಸವಲತ್ತುಗಳಿದ್ದರೂ ಅದನ್ನು ಪಡೆದುಕೊಳ್ಳುವಲ್ಲಿ ಹಿಂದುಳಿ ಯುತ್ತಿದ್ದಾರೆ. ಮಾಹಿತಿಯ ಕೊರತೆ ಯಿದ್ದು, ಶಿಕ್ಷಣದಿಂದ ಇದಕ್ಕೆಲ್ಲ ಪರಿಹಾರ ಸಿಗಲು ಸಾಧ್ಯ ಎಂದರು. 

ತಾ.ಪಂ. ಸದಸ್ಯ ರಾಜು ದೇವಾಡಿಗ, ಐಟಿಡಿಪಿ ಅಧಿಕಾರಿ ವಿಶ್ವನಾಥ ಮಾತನಾಡಿ ದರು. ಕಟ್‌ಬೆಲೂ¤ರು ಗ್ರಾ.ಪಂ. ಅಧ್ಯಕ್ಷೆ ಅನಸೂಯಾ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. 

ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹರೀಶ್‌ ಭಂಡಾರಿ, ಉಪಾಧ್ಯಕ್ಷ ಅಂಥೋನಿ ಲೂಯಿಸ್‌, ಕಟ್‌ಬೆಲೂ¤ರು ಗ್ರಾ.ಪಂ. ಉಪಾಧ್ಯಕ್ಷ ಶರತ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು. ಕೊರಗ ಸಂಘಟನೆಯ ತಾಲೂಕು ಅಧ್ಯಕ್ಷ ಗಣೇಶ್‌ ಪ್ರಸ್ತಾವಿಸಿದರು. ಕಟ್‌ಬೆಲೂ¤ರು ಪಿಡಿಒ ಸುಜಾತಾ ಸ್ವಾಗತಿಸಿ, ಹೆಮ್ಮಾಡಿ ಪಿಡಿಒ ರೂಪಾ ಕಾರ್ಯಕ್ರಮ ನಿರ್ವಹಿಸಿದರು. 

Advertisement

6 ತಿಂಗಳಾದರೂ ಸಿಗದ ಪಿಎಫ್‌
ಕುಂದಾಪುರ ಪುರಸಭೆಯ ಪೌರ ಕಾರ್ಮಿಕ ದಿನೇಶ್‌ ಅವರು 6 ತಿಂಗಳ ಹಿಂದೆ ಕಸ ಸಾಗಾಟದ ವಾಹನ ಪಲ್ಟಿಯಾಗಿ ಮೃತಪಟ್ಟಿದ್ದು, ಆದರೆ ಈವರೆಗೆ ಭವಿಷ್ಯ ನಿಧಿ (ಪಿಎಫ್‌) ಸಿಕ್ಕಿಲ್ಲ. ಅದಲ್ಲದೆ ವಾಹನದ ವಿಮೆ ಕೂಡ ಸಿಕ್ಕಿಲ್ಲ ಎಂದು ಅವರ ಮನೆಯವರು ಡಿಸಿ ಗಮನಕ್ಕೆ ತಂದರು. ಇದಕ್ಕುತ್ತರಿಸಿದ ಡಿಸಿ, ತಾಂತ್ರಿಕ ಕಾರಣದಿಂದ ಪಿಎಫ್‌ ಸಿಗುವಲ್ಲಿ ಸ್ವಲ್ಪ ತಡವಾಗಿದೆ. ಶೀಘ್ರ ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದರು. ಈ ವೇಳೆ ಪಲ್ಟಿಯಾದ ವಾಹನಕ್ಕೆ ಇನ್ಶೂರೆನ್ಸ್‌ ಮಾಡಿಸಿರಲಿಲ್ಲ. ಇದಕ್ಕೆ ಯಾರು ಹೊಣೆ ಎಂದು ಸಭೆಯಲ್ಲಿ ಕೊರಗ ಮುಖಂಡರು ಪ್ರಶ್ನಿಸಿದರು. 

ಬುಟ್ಟಿಗೆ ಬೇಡಿಕೆಯಿದೆ
ಕೊರಗರ ಮೂಲ ಕಸುಬಾಗಿರುವ ಬುಟ್ಟಿ ನೇಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾವಂತರಾದರೂ ಮೂಲ ಕಸುಬನ್ನು ನಿರ್ಲಕ್ಷಿಸಬಾರದು. ನಿಮ್ಮ ಬುಟ್ಟಿಗೆ ಈಗಲೂ ಬಹಳಷ್ಟು ಬೇಡಿಕೆಯಿದೆ. ಅದಕ್ಕೂ ಉತ್ತಮ ಮಾರುಕಟ್ಟೆ ಕಲ್ಪಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು. ಬುಟ್ಟಿ ನೇಯುವಿಕೆ ಗೊತ್ತಿಲ್ಲದವರಿಗೆ ತರಬೇತಿ ಕೂಡ ಇಲಾಖೆಯಿಂದಲೇ ನೀಡಲಾಗುವುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌,  ಜಿಲ್ಲಾಧಿಕಾರಿ

ಸರಕಾರ, ಸಮುದಾಯ, ಸಮಾಜ…
ಕೊರಗ ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಶಿಕ್ಷಣ ಪಡೆದವರು ಬಾಕಿ ಉಳಿದವರಿಗೆ ಮಾಹಿತಿ, ಅರಿವು ಮೂಡಿಸುವ ಕೆಲಸ ಮಾಡಬೇಕು. ಆಗ ಮಾತ್ರ ನಿಮ್ಮ ಸಮುದಾಯ ಮುಂದೆ ಬರಲು ಸಾಧ್ಯ. ಕೊರಗ ಜನರಲ್ಲಿ ಅಪೌಷ್ಟಿಕತೆ, ಶಿಶು ಮರಣ ಹೆಚ್ಚಾಗಿದ್ದು, ಆರೋಗ್ಯ ಕಾಳಜಿ ಕಡಿಮೆಯಿದೆ. ಆದರೆ ಕೊರಗರು ದುರ್ಬಲರಲ್ಲ. ನಿಮ್ಮೊಂದಿಗೆ ಸರಕಾರ, ಸಮುದಾಯ ಹಾಗೂ ಸಮಾಜವಿದೆ.
– ಜಯಪ್ರಕಾಶ್‌ ಶೆಟ್ಟಿ , 
ಉಪನ್ಯಾಸಕರು, ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next