Advertisement

ಎರಡನೇ ವೈದ್ಯಕೀಯ ಕಾಲೇಜಿಗೆ ಶಂಕು

11:14 AM Nov 09, 2017 | |

ಬೆಂಗಳೂರು: ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಶಂಕುಸ್ಥಾಪನೆ ನೆರವೇರಿಸಿದ್ದು, ರಾಜಧಾನಿಯ ಎರಡನೇ ಸರ್ಕಾರಿ ವೈದ್ಯಕೀಯ ಕಾಲೇಜು ಎಂಬ ಕೀರ್ತಿಗೆ ಇದು ಪಾತ್ರವಾಗಿದೆ.

Advertisement

ನಗರದಲ್ಲಿ ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆ ಹಾಗೂ ನಿತ್ಯ ಲಕ್ಷಾಂತರ ಜನರು ನಗರಕ್ಕೆ ಬಂದು ಹೋಗುತ್ತಾರೆ. ಆ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೂಂದು ವೈದ್ಯಕೀಯ ಕಾಲೇಜು ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದರು. ಅದರಂತೆ ಬೌರಿಂಗ್‌ ಆಸ್ಪತ್ರೆಯ ಆವರಣದಲ್ಲಿ ಕಾಲೇಜು ನಿರ್ಮಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. 

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೌರಿಂಗ್‌ ಹಾಗೂ ಲೇಡಿ ಕರ್ಜನ್‌ ಆಸ್ಪತ್ರೆಗಳು ಸಾವಿರಾರು ವರ್ಷಗಳಿಂದ ಜನರಿಗೆ ಚಿಕಿತ್ಸೆ ನೀಡುತ್ತಿವೆ. ಅದೇ ರೀತಿ ನಗರದಲ್ಲಿ ಬಡವರ್ಗದವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ನಗರದಲ್ಲಿ ಎರಡನೇ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಆಸ್ಪತ್ರೆ ಆವರಣದ 13-14 ಎಕರೆ ಜಾಗದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲು 200 ಕೋಟಿ ರೂ. ನೀಡಲಾಗಿದ್ದು, ವೈದ್ಯಕೀಯ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, 2018ರ ವೇಳೆಗೆ ಕಾಲೇಜು ಕಾರ್ಯಾರಂಭ ಮಾಡಲಿದೆ. 2004ರಲ್ಲಿ ರಾಜ್ಯದಲ್ಲಿ ಕೇವಲ 4 ವೈದ್ಯಕೀಯ ಕಾಲೇಜುಗಳು ಮಾತ್ರ ಇದ್ದವು. ನಮ್ಮ ಸರ್ಕಾರ ಬಂದ ನಂತರ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೀಟು ದೊರೆಯುವುದರೊಂದಿಗೆ ಗ್ರಾಮೀಣ ಜನರಿಗೆ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿದೆ ಎಂದರು.

ಬಡವರಿಗೆ ಈ ಹಿಂದೆ ಯಾವುದೇ ರೀತಿಯ ಕಾಯಿಲೆಗಳು ಬರುತ್ತಿರಲಿಲ್ಲ. ಗ್ರಾಮೀಣ ಭಾಗದ ಜನರಿಗೆ ಸಕ್ಕರೆ ಕಾಯಿಲೆ ಏನು ಎಂಬುದೇ ತಿಳಿದಿರಲಿಲ್ಲ. ಸಕ್ಕರೆ ಕಾಯಿಲೆ ಶ್ರೀಮಂತರ ಕಾಯಿಲೆ ಎಂದು ಹೇಳುತ್ತಿದ್ದರು. ಆದರೆ, ಬದಲಾದ ಕಾಲಘಟ್ಟದಲ್ಲಿ ಎಲ್ಲರಿಗೂ ಸಕ್ಕರೆ ಕಾಯಿಲೆ ಬರುತ್ತಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಅದೊಂದು ಕಾಯಿಲಯೇ ಅಲ್ಲ. ಅದೇ ನಿರ್ಲಕ್ಷಿಸಿದರೆ ಹತ್ತಾರು ಮಾರಣಾಂತಿಕ ಕಾಯಿಲೆಗಳನ್ನು ತರುತ್ತದೆ ಎಂದು ಎಚ್ಚರಿಸಿದರು. 

Advertisement

ನಾನು 1994ರಿಂದಲೇ ಸಕ್ಕರೆ ಕಾಯಿಲೆಗೆ ಒಳಗಾಗಿದ್ದು, ಸೂಕ್ತ ಚಿಕಿತ್ಸೆ ಪಡೆಯುವ ಜತೆಗೆ ಜೀವನ ಶೈಲಿ ಹಾಗೂ ಆಹಾರ ಶೈಲಿಯನ್ನು ಬದಲಿಸಿಕೊಂಡಿದ್ದೇನೆ. ಈ ಬಗ್ಗೆ ಆತಂಕ ಪಡದೆ ಜೀವಿಸಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next