ಲಕ್ಷ್ಮೇಶ್ವರ: ಪಾಲಕರು ಮಕ್ಕಳಿಗೆ ಧರ್ಮ, ದೇವರು, ಧರ್ಮ ಗುರುಗಳು, ಹಿರಿಯರು, ಪರಂಪರೆ, ಆಚರಣೆ, ಸಂಪ್ರದಾಯ, ಸಂಸ್ಕೃತಿ ಮತ್ತು ಮಾನವೀಯತೆ ಮುಂತಾದ ಮಾನವೀಯ ಮೌಲ್ಯಗಳನ್ನು ರೂಢಿಸಬೇಕೆಂದು ಉಜ್ಜಯಿನಿ ಪೀಠದ ಜ|ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.
ಮಂಗಳವಾರ ಪಟ್ಟಣದ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ನಡೆದ ಸದ್ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಲ್ಲ ಧರ್ಮಗಳ ಸಾರವೂ ಒಂದೇ. ಅದು ಮಾನವೀಯ ಮೌಲ್ಯಗಳ ಸಾರವೇ ಆಗಿದೆ. ಮಕ್ಕಳು ಕೇವಲ ಒಂದು ಕುಟುಂಬದ ಆಸ್ತಿಯಾಗಿರದೇ, ಅವರು ಭವ್ಯ ಭಾರತದ ಭವಿಷ್ಯದ ಆಸ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆಸ್ತಿ ಮಾಡದೇ, ಮಕ್ಕಳಲ್ಲಿ ನಮ್ಮ ಧರ್ಮ, ಸಂಸ್ಕೃತಿ, ನೆಲ, ಜಲ, ಭಾಷೆಯಬಗ್ಗೆ ಅಭಿಮಾನ, ಸ್ವಾಭಿಮಾನ ಮೂಡಿಸಬೇಕು.
ತಂದೆ-ತಾಯಿಯರು, ಧರ್ಮ ಗುರುಗಳು, ಹಿರಿಯರು, ಮಠ-ಮಾನ್ಯಗಳ ಬಗ್ಗೆ ಗೌರವ, ಸಂಪರ್ಕ, ಸತ್ಸಂಗ ಒಡಮೂಡಿದಾಗ ಬದುಕು ಸುಂದರಮಯವಾಗಿರುತ್ತದೆ. ಇಷ್ಟಲಿಂಗ ಧಾರಣೆ, ಪೂಜೆ, ಪ್ರಾರ್ಥನೆಯಿಂದ ಬದುಕಿನ ಕಷ್ಟಗಳು ಮರೆಯಾಗಿ ಶಾಂತಿ, ನೆಮ್ಮದಿ ಪ್ರಾಪ್ತವಾಗುತ್ತದೆ
ಎಂದರು. ಯುವಕರು ನಮ್ಮ ಧರ್ಮ, ಪರಂಪರೆಯಿಂದ ವಿಮುಖರಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ನಾವು ಮಾಡಿದ ಪಾಪ, ಪುಣ್ಯ ಕರ್ಮಗಳ ಫಲ ನಾವೇ ಅನುಭವಿಸುವುದು ಶತಸಿದ್ಧ. ಆದ್ದರಿಂದ, ಧರ್ಮ ಗುರುಗಳು, ಪಾಲಕರು ನಿಟ್ಟಿನಲ್ಲಿ ನಿಗಾ ವಹಿಸಬೇಕಿದೆ.
ಭಕ್ತರು ಇಷ್ಟಪಟ್ಟಲ್ಲಿ ಬರುವ ದಿನಗಳಲ್ಲಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ತಮ್ಮ ಸಾನ್ನಿಧ್ಯ ಮತ್ತು ಮುಕ್ತಿಮಂದಿರ ಶ್ರೀಗಳು ಸೇರಿ ಹಲವಾರು ಪಟ್ಟಾಧ್ಯಕ್ಷರ ಸಮ್ಮುಖದಲ್ಲಿ ಬೃಹತ್ ಉಚಿತ ಲಿಂಗಧಾರಣೆ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು. ಈ ವೇಳೆ ಮುಕ್ತಿಮಂದಿರದ ಶ್ರೀ ವಿಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸುಳ್ಳ ಹಿರೇಮಠದ ಶಿವಸಿದ್ಧರಾಮೇಶ್ವರ ಶ್ರೀಗಳು, ಪಟ್ಟಣದ ಮಳೇ ಮಲ್ಲಿಕಾರ್ಜುನ ಶ್ರೀಗಳು, ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನ ಮಲ್ಲಿಕಾರ್ಜುನ ಶ್ರೀಗಳು ಉಪಸ್ಥಿತರಿದ್ದರು.
Related Articles
ಹಿರಿಯರಾದ ಸೋಮಣ್ಣ ಮುಳಗುಂದ ಮಾತನಾಡಿದರು. ವೀರಣ್ಣ ಪವಾಡದ, ನಿಂಗಪ್ಪ ಜಾವೂರ, ಬಸವರಾಜ ಉಮಚಗಿ, ಕುಮಾರ ಹೊಸಮಠ, ಆನಂದ ಕಲಾಲ್, ರಾಮಣ್ಣ ಗೌರಿ, ಶಂಭು ಬಂಡಿವಾಡ, ಪ್ರಕಾಶ ಕೊಂಚಿಗೇರಿಮಠ, ನೀಲಪ್ಪ ಕರ್ಜೆಕಣ್ಣವರ ಇತರರಿದ್ದರು. ಶಿಕ್ಷಕ ಎಸ್.ಎಫ್. ಆದಿ ನಿರೂಪಿಸಿ, ಬಿ.ಟಿ.ಪಾಟೀಲ ಸ್ವಾಗತಿಸಿದರು.