Advertisement

ಯುವಜನ ಸಬಲೀಕರಣ ನಿಗಮ ಸ್ಥಾಪಿಸಿ: ಅಗಸರ

12:09 PM Feb 15, 2021 | Team Udayavani |

ಕಲಬುರಗಿ: ಯುವ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳನ್ನು ಗಟ್ಟಿಯಾಗಿ ಪ್ರತಿಪಾದಿಸದ ಪರಿಣಾಮ ಹೆಚ್ಚು ಜನರು ನಿರುದ್ಯೋಗಿಗಳಾಗಿ ಬದುಕುವ ಸ್ಥಿತಿ ಬಂದಿದೆ. ಯುವ ಜನಾಂಗಕ್ಕೆ ತಮ್ಮ ಹಕ್ಕು ಮತ್ತು ಅವಕಾಶ ತಿಳಿಯುವ ನಿಟ್ಟಿನಲ್ಲಿ ಯುವಜನ ಸಬಲೀಕರಣ ನಿಗಮ ಸ್ಥಾಪನೆ ಅವಶ್ಯವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ| ದಯಾನಂದ ಅಗಸರ ಹೇಳಿದರು.

Advertisement

ನಗರದ ಶಿವಶರಣ ಹರಳಯ್ಯ ಸಾಂಸ್ಕೃತಿಕ ಭವನದಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಆಯೋಜಿಸಿದ್ದ “ಯುವಜನ ಹಕ್ಕಿನ ಮೇಳ’ವನ್ನು ಸಂವಿಧಾನದ ಪೀಠಿಕೆ ಪ್ರತಿ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ಹೆಚ್ಚು ಯುವಶಕ್ತಿ ಹೊಂದಿದ್ದರೂ ಭಾರತವೇಕೆ ಇನ್ನು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎನ್ನುವುದು ಇಡೀ ದೇಶವನ್ನು ಕಾಡುತ್ತಿರುವ ಪ್ರಶ್ನೆ. ಯುವಜನರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತ ಅವಕಾಶ ನೀಡದಿರುವುದೇ ಇದಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಕಲಿಕೆಯಲ್ಲಿ ಸಾಕಷ್ಟು ಮುಂದುವರಿದಿದ್ದೇವೆ. ಆದರೆ, ಕಲಿಕೆ ಮುಗಿದ ಬಳಿಕ ಮುಂದೇನು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಹರೆಯದ ವಯಸ್ಸಿನದಲ್ಲಿ ಎಲ್ಲರೂ ಭಾವನಾತ್ಮಕ ಲೋಕದಲ್ಲೇ ವಿಹರಿಸುತ್ತ ಮೈಮರೆಯುತ್ತಾರೆ. ಆದರೆ, ಭವಿಷ್ಯ ಭದ್ರವಾಗಲು ಅವರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.

ಡಾ| ಅಂಬೇಡ್ಕರ್‌ ಸಂವಿಧಾನ ರಚನೆಗಾಗಿ ವಿಶ್ವವನ್ನು ಸುತ್ತುವಾಗ, ಒಂದು ದೇಶದ ಪ್ರಧಾನಿ ಒಬ್ಬರು ಅವರಿಗೆ ಹೀಗೆ ಹೇಳಿದ್ದರು; ಯಾವುದೇ ದೇಶದ ಸಂವಿಧಾನ ಎಷ್ಟು ಸಮರ್ಥವಾದದ್ದು, ಶ್ರೇಷ್ಠವಾದದ್ದು ಎನ್ನುವುದಕ್ಕಿಂತ ಅದನ್ನು ಅನುಷ್ಠಾನಕ್ಕೆ ತರುವ ಕೈಗಳು ಎಷ್ಟು ಶುದ್ಧವಾಗಿವೆ ಎನ್ನುವುದು ಮುಖ್ಯ. ಇದೇ ಮಾತು ಡಾ| ಅಂಬೇಡ್ಕರ್‌ ಅವರಿಗೂ ಮನವರಿಕೆಯಾಗಿತ್ತು. ಸಮಾನ ಹಕ್ಕಿನಂತಹ ಆಶಯವನ್ನು ಚಾಚೂತಪ್ಪದೇ ಜಾರಿಗೊಳಿಸಲು ಬಹಳ ಪರಿಶುದ್ಧ ಮನಸ್ಸುಗಳು ಬೇಕಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಣ ತಜ್ಞ ಡಾ| ರಜಾಕ್‌ ಉಸ್ತಾದ್‌ ಮಾತನಾಡಿ,18 ವರ್ಷ ತುಂಬಿದ ಪ್ರತಿಯೊಬ್ಬರೂ ಸರ್ಕಾರ ರಚಿಸುವ ಹಕ್ಕು ಪಡೆಯುತ್ತಾರೆ. ಆದರೆ, ತಮ್ಮ ಭವಿಷ್ಯ ನಿರ್ಮಿಸಿಕೊಳ್ಳುವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿ ಮಾಡಲು ಯುವಜನ ಸಬಲೀಕರಣ ನಿಗಮ ರಚಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ದೇಶದಲ್ಲಿ ಯುವ ಜನರು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಬೇಕು. ಇದಕ್ಕಾಗಿ ಸರ್ಕಾರ ನಿಗಮ ಸ್ಥಾಪಿಸಬೇಕು. ನಿಗಮವು ಯುವಕರಿಗೆ ತಮ್ಮ

Advertisement

ಹಕ್ಕುಗಳು ಏನು? ಅವುಗಳನ್ನು ಪಡೆಯುವುದು ಹೇಗೆ? ಎನ್ನುವ ಕುರಿತು ಮಾರ್ಗದರ್ಶನ ಮಾಡಬೇಕು ಎಂದರು. ಡೆಕ್ಕನ್‌ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಅನಿಲ ಟೆಂಗಳಿ ಮಾತನಾಡಿದರು. ವಕೀಲ ಅಶ್ವಿ‌ನಿ ಮದನಕರ್‌ “ಯುವಜನರ ಸಮಸ್ಯೆಗಳು’ ಕುರಿತು ವಿಷಯ ಮಂಡಿಸಿದರು. ಹೋರಾಟಗಾರ್ತಿ ರಮಾ
ಹಾಗೂ ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಂಯೋಜಕಿ ರುಕ್ಮಿಣಿ ನಾಗಣ್ಣವರ ಮಾತನಾಡಿದರು.

ದೇವರಾಜ ಪಾಟೀಲ, ಉಮೇಶ ಸಜ್ಜನ, ಮಂಗಳೂರು ರಿಯಾಜ್‌ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next