ಚಿಕ್ಕದೇವರಾಜ ಒಡೆಯರ್ ವೇದಿಕೆ (ಮಂಡ್ಯ): ಯಾವುದೇ ವಿಷಯದಲ್ಲಿ ಕಲ್ಪನೆ ಹಾಗೂ ಕುತೂಹಲ ಇದ್ದಾಗ ಅದು ಸೃಜನಶೀಲವಾಗುತ್ತದೆ. ಕೃತಕ ಬುದ್ಧಿಮತ್ತೆಯಿಂದ ಸೃಜನಶೀಲತೆ ಹೆಚ್ಚಾದರೂ ನಿರುದ್ಯೋಗ ಭೀತಿ ಉಂಟಾಗುತ್ತದೆ. ಹಾಗಾಗಿ ಅದನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ತಮಿಳುನಾಡಿನಲ್ಲಿ ವರ್ಚುವಲ್ ವಿಶ್ವವಿದ್ಯಾನಿಲಯ ಇರುವಂತೆ ಕರ್ನಾಟಕದಲ್ಲೂ ವರ್ಚುವಲ್ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಎಂದು ವಿಶ್ರಾಂತ ಕುಲಪತಿ ಡಾ| ಚಿದಾನಂದ ಗೌಡ ಸರಕಾರವನ್ನು ಆಗ್ರಹಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೃಜನಶೀಲತೆ- ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳ ಕುರಿತಾದ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಅವರು, ಸರಕಾರ ಇಂಥ ಕ್ರಮವನ್ನು ತೆಗೆದುಕೊಂಡರೆ ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರು ಕನ್ನಡ ಕಲಿಯುವಂತಾಗಲಿದೆ ಎಂದರು. ಇನ್ನು ಆಧುನಿಕ ಎಲೆಕ್ಟ್ರಾನಿಕ್ ಮಾಧ್ಯಮ 2 ಅಂಚಿನ ಕತ್ತಿ ಇದ್ದಂತೆ. ಅದು ಎಷ್ಟು ಪ್ರಯೋಜನವೊ ಅಷ್ಟೇ ದುಷ್ಪರಿಣಾಮ ಬೀರುತ್ತದೆ ಎಂದರು.
ಮಾಧ್ಯಮ ತಜ್ಞ ಜಿ.ಎನ್. ಮೋಹನ್ ಮಾತನಾಡಿ, ಕನ್ನಡ ತಂತ್ರಾಂಶ ಕೆಲಸಗಳಿಗೆ ಒಂದು ಕೇಂದ್ರೀಕೃತ ವ್ಯವಸ್ಥೆ ಅವಶ್ಯ. ಅದಕ್ಕಾಗಿ ಸರಕಾರ ಡಿಜಿಟಲ್ ಕನ್ನಡ ಪ್ರಾಧಿಕಾರ ಸ್ಥಾಪನೆ ಮಾಡಿದರೆ ಉತ್ತಮ ಎಂದರು. ತಂತ್ರಜ್ಞಾನ ಯುಗದಲ್ಲಿ ಕನ್ನಡ ಅನುಸಂಧಾನ ಕುರಿತು ಶಂಕರ ಸಿಹಿಮೊಗ್ಗೆ, ಕೃತಕ ಬುದ್ಧಿಮತ್ತೆ ಮತ್ತು ಚಾಟ್ ಜಿಪಿಟಿ ಸೃಷ್ಟಿಸಿರುವ ಸವಾಲುಗಳ ಕುರಿತು ತಂತ್ರಜ್ಞಾನ ತಜ್ಞ ಮಧು ವೈ.ಎನ್. ಮಾತನಾಡಿದರು.
ಏನಿದು ತಮಿಳು ವರ್ಚುವಲ್ ವಿವಿ?
ದೂರ ಶಿಕ್ಷಣವನ್ನು ಇಂಟರ್ನೆಟ್ ಮೂಲಕ ನೀಡುವುದಕ್ಕಾಗಿ 2001ರ ಫೆ.17ರಂದು ತಮಿಳುನಾಡು ಸರಕಾರ ಚೆನ್ನೈನಲ್ಲಿ ಆರಂಭಿಸಿದ ವಿಶ್ವವಿದ್ಯಾನಿಲಯವೇ ತಮಿಳು ವರ್ಚುವಲ್ ವಿಶ್ವವಿದ್ಯಾನಿಲಯ. 2010ರಿಂದ ಇದನ್ನು ತಮಿಳ್ ವರ್ಚುವಲ್ ಅಕಾಡೆಮಿ (ಟಿವಿಎ) ಎಂದು ಕರೆಯಲಾಗುತ್ತಿದೆ. ಇದು ತಮಿಳು ಭಾಷೆಯ ಹುಟ್ಟಿನಿಂದ ಪ್ರಸ್ತುತ ಸಾಹಿತ್ಯದವರೆಗೆ ಸಂಪೂರ್ಣ ಶಿಕ್ಷಣವನ್ನು ನೀಡುತ್ತದೆ.
ನಿತೀಶ ಡಂಬಳ