ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಗೆ ಬಳಕೆ ಮಾಡುವ ಔಷಧಗಳು, ಆ್ಯಂಟಿಬಯೋಟಿಕ್ಸ್‌ಗಳು ಲಸಿಕೆಗಳು ಇನ್ನು ಜನರ ಕೈಗೆ ಎಟಕುವ ದರದಲ್ಲಿ ಲಭ್ಯವಾಗಲಿವೆ.
ಜತೆಗೆ ಅಸಿಡಿಟಿ ನಿಯಂತ್ರಣಕ್ಕಾಗಿ ವೈದ್ಯರು ನೀಡುವ ರ್‍ಯಾಂಟಾಕ್, ಝಿಂಟ್ಯಾಕ್ ಸೇರಿದಂತೆ 26 ಔಷಧಗಳನ್ನು ರಾಷ್ಟ್ರೀಯ ಅಗತ್ಯ ಔಷಧ ಪಟ್ಟಿಯಿಂದ ತೆಗೆಯಲಾಗಿದೆ. ಅವುಗಳ ಬಳಕೆಯಿಂದ ಕ್ಯಾನ್ಸರ್ ಬರಲಿವೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಗತ್ಯ ಔಷಧಗಳ ಪಟ್ಟಿಗೆ 34 ಹೊಸ ಔಷಧಗಳನ್ನು ಸೇರಿಸಲಾಗಿದೆ. ಅದರಲ್ಲಿ ಐವರ್‌ವೆುಕ್ಟಿನ್, ಮ್ಯುಪಿರೋಸಿನ್ ಮತ್ತು ಮೆರೋಪೆನೆಮ್ ಔಷಧಗಳನ್ನು ಸೇರಿಸಲಾಗಿದೆ. ಹೀಗಾಗಿ, ಜನರ ಕೈಗೆ ಎಟಕುವ ದರದಲ್ಲಿ ಲಭ್ಯವಾಗಲಿರುವ ಔಷಧಗಳ ಪಟ್ಟಿ 384ಕ್ಕೆ ಏರಿಕೆಯಾಗಿದೆ.
ವಿವಿಧ ಕ್ಯಾನ್ಸರ್ ಚಿಕಿತ್ಸೆಗೆ ಬಳಕೆ ಮಾಡಲಾಗಿರುವ ನಾಲ್ಕು ಪ್ರಮುಖ ಔಷಧಗಳು ಕೈಗೆಟಕುವ ದರಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮನಸುಖ ಮಾಂಡವಿಯಾ “ಕೇಂದ್ರ ಸರ್ಕಾರದ ನಿರ್ಧಾರದಿಂದ ಜನರಿಗೆ ಕೈಗೆಟಕುವ ದರದಲ್ಲಿ ಔಷಧಗಳು ಲಭ್ಯವಾಗಲಿವೆ’ ಎಂದು ಬರೆದುಕೊಂಡಿದ್ದಾರೆ.
ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (ಎನ್‌ಎಲ್‌ಇಎಂ)ಯಲ್ಲಿ 27 ವಿಭಾಗಗಳಿಗೆ ಅನ್ವಯವಾಗುವ 384 ಔಷಧಗಳು, ಏಳು ಆ್ಯಂಟಿಬಯಾಟಿಕ್ಸ್‌ಗಳು, ಲಸಿಕೆಗಳು, ಕ್ಯಾನ್ಸರ್‌ಗೆ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ಔಷಧಗಳು ಜನರಿಗೆ ಕಡಿಮೆ ದರದಲ್ಲಿ ಲಭ್ಯವಾಗಲಿವೆ. ರೋಗಿಗಳೂ ಔಷಧ ವೆಚ್ಚದ ಪ್ರಮಾಣ ತಗ್ಗಲಿದೆ’ ಎಂದು ಬರೆದುಕೊಂಡಿದ್ದಾರೆ.
ಎಲ್ಲರಿಗೂ ಔಷಧ; ಕಡಿಮೆ ದರ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲರಿಗೂ ಔಷಧ; ಕಡಿಮೆ ದರದಲ್ಲಿ ಎಂಬ ನಿಲುವಿನ ಆಧಾರದಲ್ಲಿ ಇಂಥ ಕ್ರಮ ಕೈಗೊಂಡಿದೆ ಎಂದು ಸಚಿವ ಮಾಂಡವಿಯಾ ಹೇಳಿದ್ದಾರೆ. ದರ, ಸುರಕ್ಷತೆ, ಪರಿಣಾಮಕಾರಿತ್ವವನ್ನು ಪರಿಗಣಿಸಿ ರಾಷ್ಟ್ರೀಯ ಅಗತ್ಯ ಔಷಧ ಪಟ್ಟಿ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಪರಿಷ್ಕೃತಗೊಂಡಿರುವ ಔಷಧಗಳ ಪಟ್ಟಿಯಲ್ಲಿ ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಡಬಿಗಟ್ರಾನ್ ಮತ್ತು ಟೆನೆಕ್ಟೆಪ್ಲೇಸ್‌ಗಳು ಸೇರಿವೆ.
384- ಅಗತ್ಯ ಔಷಧ ಪಟ್ಟಿಯಲ್ಲಿನ ಔಷಧಗಳ ಸಂಖ್ಯೆ
27 – ವರ್ಗಗಳು
1996- ರಾಷ್ಟ್ರೀಯ ಅಗತ್ಯ ಔಷಧ ಪಟ್ಟಿ ಶುರುವಾದ ವರ್ಷ