Advertisement

ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ ಆರಂಭ: ಸರ್ವ ಸಿದ್ಧತೆ

10:14 AM Mar 23, 2018 | |

ಮಹಾನಗರ: ಈ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆಗಳು ರಾಜ್ಯದೆಲ್ಲೆಡೆ ಶುಕ್ರವಾರದಿಂದ ಪ್ರಾರಂಭಗೊಳ್ಳುತ್ತಿದ್ದು, ಎ. 6ರ ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಸರ್ವ ಸಿದ್ಧತೆ ನಡೆಸಿದ್ದು, ವಿದ್ಯಾರ್ಥಿಗಳೂ ಅಂತಿಮ ಹಂತದ ತಯಾರಿ ಮುಗಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಈ ಬಾರಿ 90 ಸಾಮಾನ್ಯ ಮತ್ತು ಇತರೆ ನಾಲ್ಕು ಖಾಸಗಿ ಸೇರಿದಂತೆ ಒಟ್ಟು 94 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟಾರೆ 32,786 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಈ ಪೈಕಿ 17,364 ಮಂದಿ ಬಾಲಕರು ಮತ್ತು 15,422 ಬಾಲಕಿಯರು.

ಈ ನಡುವೆ, ಎಲ್ಲ ಕೇಂದ್ರಗಳಲ್ಲಿ ಮತ್ತು ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ಇರಿಸುವ ಭದ್ರತಾ ಕೊಠಡಿಯಲ್ಲಿ ಸಿ.ಸಿ. ಕೆಮರಾ ಅಳವಡಿಸಿ ಕಣ್ಗಾವಲು ಇರಿಸಲಾಗಿದೆ. ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಕೂಡ ಮಾಡಲಾಗಿದೆ.

ಮಂಗಳೂರಲ್ಲಿ 11,595 ವಿದ್ಯಾರ್ಥಿಗಳು
ಮಂಗಳೂರು ನಗರ ಉತ್ತರ ಕ್ಷೇತ್ರದ 21 ಕೇಂದ್ರಗಳಲ್ಲಿ, 3,433 ಮಂದಿ ಹುಡುಗರು ಮತ್ತು 2,573 ಮಂದಿ ಹುಡುಗಿಯರು ಸೇರಿದಂತೆ ಒಟ್ಟಾರೆ 6,006 ಮಂದಿ ಪರೀಕ್ಷೆ ಬರೆಯುವರು. ಮಂಗಳೂರು ದಕ್ಷಿಣ ಕ್ಷೇತ್ರದ 20 ಕೇಂದ್ರಗಳಲ್ಲಿ 2,531 ಮಂದಿ ಹುಡುಗರು ಮತ್ತು 3,058 ಮಂದಿ ಹುಡುಗಿಯರು ಸೇರಿ ಒಟ್ಟಾರೆ 5,589 ಮಂದಿ ಪರೀಕ್ಷೆ ಬರೆಯುವರು. ಈ ಎಲ್ಲ ಕೇಂದ್ರಗಳಿಗೆ ನಾಲ್ಕು ರೂಟ್‌ಗಳ ಮೂಲಕ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗುತ್ತದೆ. 

ಪರೀಕ್ಷೆಗಳು ಸುಸೂತ್ರವಾಗಿ ನಡೆಸಲು ಡಿಸಿ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದ್ದು, ಮುಖ್ಯ ಶಿಕ್ಷಕರ ಸಭೆ, ಪರೀಕ್ಷಾ ಕೇಂದ್ರ ಮುಖ್ಯಸ್ಥರ ಸಭೆ, ಜಿ.ಪಂ. ಸಿಇಒ ಅವರೂ ಬಿಇಒ ಜತೆ ಸಭೆ ನಡೆಸಿ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

Advertisement

ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ
ಜಿಲ್ಲಾಡಳಿತ ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇರಿಸಿದ್ದು, ಕೇಂದ್ರಗಳ ಸುತ್ತಮುತ್ತ ಇರುವಂತಹ ಜೆರಾಕ್ಸ್‌ ಅಂಗಡಿಯನ್ನು ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಅವಧಿಯಲ್ಲಿ ಮುಚ್ಚಿಸಲು ಆದೇಶಿಸಲಾಗಿದೆ. ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯನ್ನು ಹೊರತುಪಡಿಸಿ ಕೇಂದ್ರಗಳ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ. ನಿಷೇಧಿತ ಸಮಯದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಇನ್ನಿತರ ಮಾರಕ ಆಯುಧ ಕೊಂಡೊಯ್ಯುವಂತಿಲ್ಲ.

ಸಕಲ ಸಿದ್ಧತೆ
ಪರೀಕ್ಷೆ ಸುಸೂತ್ರವಾಗಿ ನಡೆಯಲು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಎಲ್ಲ ಕೇಂದ್ರಗಳಲ್ಲಿ ಸಿ.ಸಿ. ಕೆಮರಾ ಅಳವಡಿಸಲಾಗಿದೆ.
– ಶಮಂತ್‌, ಉಪ ನಿರ್ದೇಶಕರ ಕಚೇರಿ
 ನೋಡಲ್‌ ಅಧಿಕಾರಿ

ಹೆತ್ತವರ ಒತ್ತಡವಿಲ್ಲ
ಎಸೆಸೆಲ್ಸಿ ಪರಿಕ್ಷೆಗೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇನೆ. ಬೆಳಗಿನ ಜಾವ 2 ಗಂಟೆ ಓದುತ್ತೇನೆ. ದಿನದಲ್ಲಿ ಸುಮಾರು 5 ಗಂಟೆ ಓದುತ್ತೇನೆ. ಹೆತ್ತವರು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ.
– ಧ್ರುವ್‌ ಪ್ರಭು, ಎಸೆಸೆಲ್ಸಿ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next