ರಾಯರಿಗೆ ವರ್ಗಾವಣೆಯಾಗಿ ಕುಟುಂಬ ಸಮೇತ ಈ ಊರಿಗೆ ಬಂದು ವಾಸ್ತವ್ಯ ಹೂಡಿ ತಿಂಗಳೊಂದಾಯಿತು. ಸಹೋದ್ಯೋಗಿಗಳ ಶಿಫಾರಸಿನ ಮೇರೆಗೆ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಿ ಇನ್ನೇನು ಉದ್ದನೆಯ ಉಸಿರು ಬಿಡಬೇಕೆನ್ನುವಾಗ ಹೀಗಾಗಬೇಕೆ? ಮಾವನವರು ಬಿದ್ದು ಕಾಲು ಮುರಿದುಕೊಂಡಿದ್ದಾರೆನ್ನುವ ಸುದ್ದಿ ಆಫೀಸಿನಲ್ಲಿದ್ದಾಗ ಫೋನಿನ ಮುಖಾಂತರ ತಿಳಿಯಿತು. ವಿಷಯ ಮಡದಿ ಕಿವಿಗೆ ಬಿದ್ದಿದ್ದೇ ತಡ ಮೂಗು ಕೆಂಪಡರಿ ಕಣ್ಣು ಓಕುಳಿ. “ಇನ್ನೇನು ತಡಮಾಡಬೇಡ. ನನಗೆ ರಜೆ ಸಿಗದು. ನೀನಾದರೂ ಹೋಗು’ ಎಂದು ಅವಸರವಸರದಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿದ್ದೇನೊ ನಿಜ. ಆಮೇಲಿನದ್ದು ನೆನಪಿಸಿಕೊಳ್ಳಲೂ ಹಿಂಜರಿಕೆ ರಾಯರಿಗೆ. ಮಡದಿಯನ್ನು ತರಾತುರಿಯಲ್ಲಿ ಊರಿನ ಬಸ್ಸನ್ನೇರಿಸಿ, ಸೀಟಿನಲ್ಲಿ ಕುಳ್ಳಿರಿಸಿ ಕೆಳಗಿಳಿದಿದ್ದರು. ಕಿಟಿಕಿಯಿಂದ ತಲೆ ಹೊರಗೆ ಹಾಕಿದವಳೆ, “”ಮಕ್ಕಳು ಜಾಗೃತೆ, ಹಾಗೆ ಹೋಗಿ ಹೀಗೆ ಬರಲಾಗುತ್ತದೆಯೆ? ತಂದೆಯವರನ್ನು ನೋಡದಿರಲು ಆಗುತ್ತದೆಯೆ? ಆಸ್ತಿ ಹೋಳಾಗಿಲ್ಲ. ಹಾಗಾಗಿ, ತವರಿನ ಗೋಳಲ್ಲಿ ಭಾಗಿಯಾಗದಿರಲು ಆಗುತ್ತದೆಯೆ? ಮಕ್ಕಳು ಬೆಳಿಗ್ಗೆ ಹೊಟ್ಟೆತುಂಬ ತಿಂಡಿತಿಂದು ಹೋಗಲಿ. ಕುಡಿಯಲು ಮನೆಯ ನೀರೇ ಕೊಡಿ. ಶಾಲೆಯ ನೀರು ಕುಡಿದು ಶೀತವಾದರೆ ಹೊಸ ಊರಲ್ಲಿ ಇನ್ನೂ ಡಾಕ್ಟರ್‌ರ ಪರಿಚಯವಾಗಿಲ್ಲ. ಅಲ್ಲದೆ, ಗಂಟೆಗಟ್ಟಲೆ ಕ್ಲಿನಿಕ್ಕಿನ ಬೆಂಚಿನಲ್ಲಿ ಕುಳಿತು ಹೆಣ ಕಾದ ಹಾಗೆ ಕಾಯುವುದು ಯಾರು? ಹಾಗೆ ಸಹಾಯ ಬೇಕಿದ್ದರೆ ಶಾಲೆಯ ಪಕ್ಕದಲ್ಲಿ ತರಕಾರಿ ಅಂಗಡಿಯ ಹುಡುಗ ನಮ್ಮ ದೂರದ ಸಂಬಂಧಿಯಂತೆ. ಇಲ್ಲಿಗೆ ಬಂದಮೇಲೆೆ ಪರಿಚಯವಾದವ, ಅವನೇ… ಆ ಶ್ರೀನಿವಾಸ. ಅವನ ಸಹಾಯ ಪಡೆದುಕೊಳ್ಳಿ…”
ಮಲೆನಾಡಿನ ಮಳೆಯಂತೆ ಸಂದುಕಡಿಯದ ಮಾತು. ಅಷ್ಟರಲ್ಲೇ ಪುಣ್ಯಾತ್ಮ ಡ್ರೆ„ವರ್ ಬಸ್ ಸ್ಟಾರ್ಟ್ ಮಾಡಿದ್ದ. ಹಾಗಾಗಿ ಅವಳಂದದ್ದು ಸರಿಯಾಗಿ ಕೇಳಿಸಲಿಲ್ಲ. ಆದರೆ ಕಿವುಡ-ಮೂಗರಿಗಾಗಿ ಬರುವ ವಾರ್ತೆಯ ವಾಚಕಿಯಂತೆ ಸಂಜ್ಞೆ ಮಾಡಲು ಆರಂಭಿಸಿದವಳು ಮೆಲ್ಲನೆ ಆಮೆಯಂತೆ ಕುತ್ತಿಗೆಯನ್ನು ಒಳಗೆ ಸೇರಿಸಿಕೊಂಡಳು. ಅಬ್ಟಾ! ಊರಿಂದ ಫೋನು ಬಂದಾಗಿಂದಲೂ “ಅಪ್ಪಬಿದ್ದದ್ದೇ, ಜಾರಿ ಬಿದ್ದದ್ದೇ.., ನಡೆವಾಗ ಬಿದ್ದದ್ದೇ.., ಯಾರಾದರು ಹಿಂದಿನಿಂದ ದೂಡಿದರೆ?’ ಕೇಳಿದ್ದನ್ನೇ ಕೇಳಿ ಕೇಳಿ ಸಾಕಾದ ರಾಯರಿಗೆ ಇದೀಗ ವಾರ್ತೆಯ ಕೊನೆಯ ಮುಖ್ಯಾಂಶಗಳನ್ನು ಕೇಳುವಾಗ ತಲೆ ಗಿರ್ರನೆ ತಿರುಗಿದ ಅನುಭವ. ಮಕ್ಕಳನ್ನು ಶಾಲೆಗೆ ಹೊರಡಿಸುವುದು, ಹೊಟ್ಟೆತುಂಬಿಸುವುದು, ಕುಡಿಯುವ ನೀರು… ಅಬ್ಬಬ್ಟಾ ! ಒಂದೇ ಎರಡೇ… ಮುಂಚೆ ಮಕ್ಕಳ ಜೊತೆ ತವರಿಗೆ ಹೋಗುವಾಗ ನೀರಿನ ಫ್ಲಾಸ್ಕನ್ನು ಹೆಗಲಿಗೇರಿಸಿಕೊಳ್ಳುತ್ತಿದ್ದವಳನ್ನು ಯಾರೋ ತವರಲ್ಲಿ “ಎಷ್ಟು ದಿನ ತಂಗುತ್ತಿ?’ ಅಂದದ್ದಕ್ಕೆ “ಒಂದೇ ದಿನ’ ಎನ್ನುವ ಉತ್ತರ ಈಕೆಯದ್ದು. “ಹಾಗಾದರೆ ಒಂದು ವಾರಕ್ಕೆ ಕೊಡಪಾನ ಹಿಡಿಯುತ್ತೀಯೋ’ ಎಂಬ ಪ್ರಶ್ನೆಗೆ ಮುಖ ಊದಿಸಿಕೊಂಡಿದ್ದಳು. ಬೆಳಗ್ಗಿನ ಹೊತ್ತು ಆಫೀಸಿಗೂ ಶಾಲೆಗೂ ಹೊರಡುವ ಗಡಿಬಿಡಿ. ಇಬ್ಬರೂ ಒಟ್ಟಿಗೆ ಸೇರಿ ನಾಲ್ಕು ಕೈಗಳಲ್ಲಿ ಕೆಲಸ ಮಾಡಿದರೂ ಸಮಯಕ್ಕೆ ಸರಿಯಾಗಿ ಮುಗಿಯದು. ಈಗ ಕೇವಲ ಎರಡು ಕೈಗಳಲ್ಲಿ ಒಂದೇ ಒಂದು ತಲೆ ಉಪಯೋಗಿಸಿ ಹೇಗೆ ಮಾಡಲಿ? ಹೆಂಡತಿಯನ್ನು ಕಳುಹಿಸಿ ಮನೆಗೆ ಬಂದ ರಾಯರಿಗೆ ಮರುದಿನದ ಬೆಳಗಿನದೇ ಚಿಂತೆ. ಒಬ್ಬನಿಂದ ಮನೆ ಸುಧಾರಿಸಲು ಆದೀತೆ? ಆಫೀಸಿನಲ್ಲಿ ಮ್ಯಾನೇಜರ್ ಆಗಿದ್ದರೂ ಮಕ್ಕಳ ಪಾಲಿಗೆ ಅಟೆಂಡರ್. ಪ್ರತಿ ಪದದ ಇಂಗ್ಲಿಷ್ ಉಚ್ಚಾರಣೆಯಲ್ಲಿ ಲೋಪ ಹುಡುಕುವ ಪುಟ್ಟಮಕ್ಕಳು. ಈಗೀಗ ಬಾಯೆ¤ರೆಯಲೂ ಭಯ. ಅಂದು ಕರಗ ಬೇಡವೆಂದರೂ ಕೇಳದ ರಾತ್ರಿ; ಬರಬೇಡವೆಂದರೂ ಬಂದ ಬೆಳಗು. ಬಿಸಿಲ ಕೋಲಿ¾ಂಚು ಕೋಣೆಯೊಳಗೆ ಇಣುಕಿದರೂ ಕಣ್ಣು ತೆರೆಯದ ಮಕ್ಕಳು. ಹೊದಿಕೆಯ ಎಳೆದು ಬಿಸುಟರೆ ಮಿಸುಕಾಡರು. ಮಡದಿ ಕಡೆದಿಟ್ಟ ಹಿಟ್ಟಿನಲ್ಲಿ ಇಡ್ಲಿ ಬೇಯಲಿಟ್ಟು ಮಾಡಿಟ್ಟ ಸಾಂಬಾರನ್ನು ಬಿಸಿಮಾಡುವಾಗಲೇ ಸುಸ್ತು ಗಾಬರಿ. ಮತ್ತೂಮ್ಮೆ ಕೂಗಿ ಕರೆದರೆ ಕ್ಯಾರೇ ಎನ್ನದ ಮಕ್ಕಳು. ಆದಿತ್ಯವಾರ ಅಲ್ಲ ಎನ್ನುವುದನ್ನು ಮತ್ತೂಮ್ಮೆ ಕ್ಯಾಲೆಂಡರಿನಲ್ಲಿ ಕಣ್ಣಾಡಿಸಿ ಖಾತ್ರಿ ಮಾಡಿಕೊಂಡರು. ಮೊದಲ ದಿನಕ್ಕೇ ಒಂಥರಾ ಗಾಬರಿ. “ಮಕ್ಕಳ ಬೇಸಿಗೆ ರಜೆಯಲ್ಲಿ ಮಾವನವರ ಕಾಲು ಮುರಿದುಹೋಗಬಾರದಿತ್ತೇ?’ ಲಘುವಾಗಿ ಹಲ್ಲುಕಡಿದರು. ಇಡ್ಲಿ ಬೆಂದ ಸಮಾಚಾರವನ್ನು ಪರಿಮಳವು ಸೂಚಿಸಿತು. ಇವತ್ತೇನೋ ಆಯಿತು. ನಾಳಿನ ಚಿಂತೆ ಕಾಡಿತು. ಹೊಟೇಲಿನಿಂದ ತಂದರಾಯಿತು. ತನ್ನನ್ನು ತಾನೇ ಸಮಾಧಾನಿಸಿಕೊಂಡರು. ಇವಳಿಗೂ ಹೊಟೇಲಿಗೂ ವೈರತ್ವ. ಹೇಗೂ ಮನೆಯಲ್ಲಿ ಇವಳಿಲ್ಲ. ಬೇಡವೆನ್ನುವವರ್ಯಾರು? ಒಮ್ಮೆ ಕುಟುಂಬ ಸಮೇತ ಹೊಟೇಲಿಗೆ ಹೋದ ನೆನಪಿದೆ. ಮಕ್ಕಳು ಕಂಡದ್ದೆಲ್ಲ ತರಿಸಿಕೊಂಡವು. “ನನಗೆ ಇಡ್ಲಿಸಾಂಬಾರು ಮಾತ್ರ ಸಾಕು’ ಎಂದು ತರಿಸಿಕೊಂಡವಳೇ ಅದರ ಗಾತ್ರ ಕಂಡು ಮುಸಿ ಮುಸಿ ನಕ್ಕಿದ್ದಳು. ಚಮಚದಡಿ ಅಡಗಿ ಕುಳಿತ ಚಿಕಣಿ ಇಡ್ಲಿ.
ಸಾಹುಕಾರ ದುಡ್ಡಿನ ಗಂಟನ್ನೆಲ್ಲಿ ಬಚ್ಚಿಡುತ್ತಾನೇ, ಬಚ್ಚಿಟ್ಟ ದುಡ್ಡಿನ ಗಂಟಿಗೆ ಬೆಲೆಯೇ ಇಲ್ಲದ ಕಾಲ ಬಂದರೆ, ಪಾಪ! ದೇವರೇ ಗತಿ. ಕಾಗೆ ಕಣ್ಣಿನ ಗಾತ್ರದ ಇಡ್ಲಿ ತಿನ್ನುವ ಬದಲು ತಿಂದ ಮೇಲೆ ಕೊಡುವ ನೋಟನ್ನೇ ಉಂಡೆ ಮಾಡಿ ನುಂಗಿದರೇ ಹೊಟ್ಟೆ ತುಂಬುವುದೋ ಏನೋ ಎನ್ನುತ್ತ ತಟ್ಟೆಯಲ್ಲಿದ್ದ ಚಮಚವನ್ನು ಎತ್ತಿ ಬದಿಗಿಡುವಾಗ “ಟೇಬಲ್ ಮ್ಯಾನರ್ಸ್ ಕಣೇ, ಚಮಚದಲ್ಲೇ ತಿನ್ನು’ ಎಂದರೆ, “ಸಾವಿರ ಜನರ ಬಾಯಿಗೆ ಹೋಗಿ ಹೊರ ಬಂದ ಚಮಚ. ಸಾವಿರ ಜನ ಉಂಡೆದ್ದ ಬಟ್ಟಲು. ಹೊಟ್ಟೆ ಮಗುಚಿ ವಾಕರಿಕೆ ಬರುತ್ತಿದೆ’ ಎನ್ನುತ್ತಲೇ ಟೇಬಲ್ಲಿನ ಮೇಲೆ ಕೈ ತೊಳೆೆಯಲು ತಂದಿಟ್ಟ ಉರುಟು ತಟ್ಟೆಯಲಿದ್ದ ಲಿಂಬು ಹೋಳನ್ನು ಕಿವುಚಿ ಬೋರೆಂದು ಕುಡಿದವಳೇ, “ಇದೊಂದು ಹೊಸ ವ್ಯವಸ್ಥೆ. ಒಳ್ಳೇದೇ ನೋಡಿ’ ಎನ್ನುವಾಗ ರಾಯರು ತಬ್ಬಿಬ್ಬು. ಮೆಲ್ಲನೆ ಯಾರಾದರೂ ನೋಡಿದರೆ ಎಂದು ಕಳ್ಳನೋಟದಲ್ಲಿ ವೀಕ್ಷಿಸಿ, “ಇನ್ನು ಮೇಲೆ ನಿಮ್ಮನ್ನೆಲ್ಲ ಹೊಟೇಲಿಗೆ ಕರೆತಂದರೆ ನನ್ನ ಮರ್ಯಾದೆ ಮೂರು ಕಾಸಿಗೆ ಹರಾಜಾದೀತು. ಟೇಬಲ್ ಮ್ಯಾನರ್ಸ್ ಗೊತ್ತಿಲ್ಲದಿದ್ದರೆ ನೋಡಿಯಾದರೂ ಕಲಿಯಬಾರದೆ?’ ಬೈಯುತ್ತಲೇ ಹೊರಬಂದಿದ್ದರು. ಮತ್ತೆ ಎಂದೂ ಕುಟುಂಬ ಸಮೇತರಾಗಿ ಹೊಟೇಲಿನ ಮೆಟ್ಟಿಲೇರಿರಲಿಲ್ಲ. ಮಡದಿಯಧ್ದೋ ಆಚೀಚೆಯವರೊಡನೆ ಕೇಳಿ ಮಾಡುವ ಹೊಸಹೊಸ ಪ್ರಯೋಗಗಳಿಗೇನೂ ಕೊರತೆಯಿರಲಿಲ್ಲ.
ಹೊರಬಾಗಿಲಿನಲ್ಲಿ ಕರೆವ ಸದ್ದು. ನೋಡಿದರೆ ಶ್ರೀನಿವಾಸ. ಒಳಗೆ ಕರೆದು ಊಟದ ಟೇಬಲ್ಲಿನ ಕುರ್ಚಿಯಲ್ಲೇ ಕುಳ್ಳಿರಿಸಿ, ಮಕ್ಕಳನ್ನು ಎಬ್ಬಿಸಿ, ಕೈಗೆ ಪೇಸ್ಟ್ ಹಚ್ಚಿದ ಬ್ರೆಷ್‌ನ್ನು ನೀಡುವಾಗ, “ಏನಾದರೂ ಸಹಾಯ ಮಾಡಬೇಕೇ, ಮಕ್ಕಳ ನೀರಿನ ಬಾಟಿÉಯನ್ನು ತುಂಬಿಸಬೇಕೇ?’ ಎಂದ. ಆವಾಗಲೇ ಗ್ಯಾಸ್ ಮೇಲೆ ಕುದಿಯಲಿಟ್ಟ ನೀರಿನ ನೆನಪಾದದ್ದು. ಕೊತಕೊತನೆ ಕುದಿದ ನೀರನ್ನು ತಂದು ದೊಡ್ಡ ಗಾತ್ರದ ವೃತ್ತಾಕಾರದ ಬೋಗುಣಿಗೆ ಹುಯ್ದು ಟೇಬಲ್ಲಿನ ಮೇಲಿಟ್ಟು ತಣಿಯಲು ಫ್ಯಾನ್ ಹಾಕಿದರು. “ಈಗಿನ ಮಕ್ಕಳಿಗೆ ಎಲ್ಲವೂ ಕೈಗೆಟಕುವ ವ್ಯವಸ್ಥೆ’ ಎಂದ ಅವನ ಮಾತು ರಾಯರ ಕಿವಿಯೊಳಗೆ ಹೋಗಲೇ ಇಲ್ಲ. ಮಕ್ಕಳಿಗೆ ತಿಂಡಿ ಬಡಿಸಿಕೊಂಡು ತರುವಾಗ ಶ್ರೀನಿವಾಸನಿಗೆ ಕೊಡಬೇಕೇ ಬೇಡವೇ ಮನದೊಳಗೆ ಜಿಜಾnಸೆ. ಮಡದಿ ಇರುವಾಗ ಎರಡು-ಮೂರು ಬಾರಿ ಬಂದಾಗಲೂ ಆತನಿಗೆ ಏನೂ ಕೊಟ್ಟಿರಲಿಲ್ಲ. “ಅವನಿಗೂ ಕೊಡಬಾರದ?’ ಅಂದದ್ದಕ್ಕೆ, “ನನಗೆ ಎಂಜಿಲು ಬಟ್ಟಲು ತೊಳೆದೂ ತೊಳೆದೂ ಸಾಕಾಗಿದೆ. ಕೊಟ್ಟವ್ರ ಕೈಯನ್ನೇ ಕಚ್ಚುವ ಕಾಲ. ಉಂಡ ತಟ್ಟೆ ತೊಳೆಯುವುದರೊಳಗೆ ಕೊಟ್ಟವರ ಕೈ ಕಚ್ಚುತ್ತಾರೆ. ನಾನು ಯಾರನ್ನೂ ಹತ್ತಿರ ಸೇರಿಸಿಕೊಳ್ಳುವುದಿಲ್ಲಪ್ಪ’ ಹೀಗೆ ಶುರುವಾದ ಅವಳ ಭಾಷಣ ಮುಗಿಯಲು ಐದು ನಿಮಿಷಗಳಾದರೂ ಬೇಕೇಬೇಕಿತ್ತು. ಹೊರಗೆ ರಿಕ್ಷಾ ನಿಂತ ಸದ್ದು. ಕಿಟಿಕಿಯಿಂದ ಇಣುಕಿದರೆ ಶಾಲೆಯ ಮಕ್ಕಳ ರಿಕ್ಷಾ ಬಂದು ನಿಂತಿದೆ. ಹುತ್ತದ ವಿವಿಧ ಬಿಲಗಳಿಂದ ಇಣುಕುವ ಮರಿ ಹಾವುಗಳಂತೆ ಶಾಲಾಮಕ್ಕಳು ಇಣುಕುತ್ತ, “ನಾಗರಾಜಾ… ನಾಗಾಭರಣಾ… ಇನ್ನೂ ರೆಡಿ ಆಗಿಲ್ವೇ?’ ಕಿರುಚುತ್ತಿವೆ. “ಸಂಜೆ ಸ್ನಾನ ಮಾಡಿದರಾಯಿತು. ಈಗ ತಿಂಡಿತಿಂದು ಹೊರಡಿ’ ಎಂದು ಗಡಿಬಿಡಿಯಲ್ಲಿ ಇಡ್ಲಿ ಸಾಂಬಾರಿನ ಪ್ಲೇಟ್ ಟೇಬಲ್ಲಿನ ಮೇಲಿಡುವಾಗ ಶ್ರೀನಿವಾಸನ ಎದುರೂ ಇಡಲು ಮರೆಯಲಿಲ್ಲ. “ಅಯ್ಯೋ ನನಗ್ಯಾತಕ್ಕೆ?’ ಎಂದವನೇ ಸಾಂಬಾರನ್ನು ಹುಯ್ದುಕೊಂಡು ಇಡ್ಲಿಯನ್ನು ಕಿವುಚುವಾಗ ಕೈಬೆರಳುಗಳ ನಾಲ್ಕು ಸಂದಿನಿಂದಲೂ ಚಿರ್ಕನೆ ಹೊರಬಂದ ಇಡ್ಲಿ ಸಾಂಬಾರಿನ ಮಿಶ್ರಣವನ್ನು ಕಂಡ ರಾಯರ ಮೊದಲ ಮಗ “ವ್ಯಾಕ್’ ಎಂದು ಹೊರಗೋಡಿದರೆ “ಬೇಗ ಬನ್ರೊà ಇನ್ನೂ ಆಗ್ಲಿಲ್ವೇ… ನಿಮ್ಮಿಂದ ನಮ್ಗೆ ತಡವಾಗ್ತದೆ’ ಮಕ್ಕಳ ಕಿರುಚಾಟ ಬೇರೆ. ಎರಡನೆಯವ ಎರಡು ತುಂಡುಗೈದ ಇಡಿ ಇಡ್ಲಿಯ ಒಂದು ಭಾಗವನ್ನು ಸೊಳ್ಳೆ ನುಂಗುವ ಹಲ್ಲಿಯಂತೆ ಗಬಕ್ಕನೆ ನುಂಗಿದ್ದು ಗಂಟಲಲ್ಲೇ ಸಿಕ್ಕಿ ಉಸಿರು ಕಟ್ಟಿ ಹಸಿರಾದ ಮುಖ. ನೀರಿಗಾಗಿ ತಡಕಾಡುವಾಗ “ಬೆನ್ನಿಗೊಂದು ಗುದ್ದಿ’ ಎನ್ನುತ್ತ ತಣಿಸಲು ಇಟ್ಟ ನೀರಿನಲ್ಲಿ ಎಂಜಲು ಕೈಯನ್ನು ಅದ್ದುತ್ತ ಲಿಂಬೆ ಹೋಳನ್ನು ಹುಡುಕುವ ಶ್ರೀನಿವಾಸನ ಓಕುಳಿಯಾಟ ನೋಡಿ ಕೋಪ ನೆತ್ತಿಗೇರಿ ಹೋಗಿತ್ತು ರಾಯರಿಗೆ. ಹೆಂಡತಿ ಹೇಳಿದ್ದು ನಿಜ. ಕೊಟ್ಟವ್ರದ್ದೇ ಕೈ ಕಚಾ¤ರೆ, ತಟ್ಟೆ ತೊಳೆಯುವುದೊಳಗೆ ಉಲ್ಟಾ ಹೊಡಿತಾರೆ. ಗಾದೆ ಸುಳ್ಳಲ್ಲ. ಮನದಲ್ಲೇ ನೆನೆವಾಗ “ರಾಯರೆ, ಇಷ್ಟು ಗಡಿಬಿಡಿಯಲ್ಲೂ ಟೇಬಲ್ ಮ್ಯಾನರ್ಸ್ ಅಂತ ಇದೆಯಲ್ಲ ಅದನ್ನ ತಪ್ಪಿಸುವುದಿಲ್ಲ ನೀವು. ಮೆಚ್ಚಬೇಕು ನಿಮ್ಮನ್ನ’ ಎನ್ನುತ್ತಿರುವಾಗ ಶ್ರೀನಿವಾಸನನ್ನು ಹಿಡಿದು ಬಡಿಯಬೇಕೆನ್ನುವಷ್ಟು ಸಿಟ್ಟು ಬಂದಿತ್ತು ರಾಯರಿಗೆ.
ವಸಂತಿ ಶೆಟ್ಟಿ , ಬ್ರಹ್ಮಾವರ