Advertisement

ಪ್ರಬಂಧ: ಶಾಲು ಸಂಮಾನ

09:49 AM Feb 17, 2020 | mahesh |

ಸನ್ಮಾನ ಸಮಾರಂಭ, ಅಭಿನಂದನಾ ಕಾರ್ಯಕ್ರಮ ಇತ್ಯಾದಿಗಳನ್ನು ಹಮ್ಮಿಕೊಂಡಾಗ ಕವಿಗೋಷ್ಠಿ, ವಿಚಾರಗೋಷ್ಠಿ, ಉಪನ್ಯಾಸಗಳನ್ನು ಇಟ್ಟುಕೊಳ್ಳುತ್ತಾರೆ. ಕಾರ್ಯಕ್ರಮ ಆಯೋಜಿಸಿದವರು ಬುದ್ಧಿವಂತರಾದಷ್ಟೂ ವಿಚಾರಗಳಲ್ಲಿ ಮತ್ತು ಭೋಜನದಲ್ಲಿ ವೈವಿಧ್ಯವನ್ನು ತುರುಕಿಸು ತ್ತಾರೆ. ಪ್ರೇಕ್ಷಕರನ್ನು ಹೆಚ್ಚು ಸಂಖ್ಯೆಯಲ್ಲಿ ಸೇರಿಸಿ ಹಿಡಿದಿಟ್ಟುಕೊಂಡು ಸಭಾಂಗಣ ಭರ್ತಿಮಾಡುವ ತಂತ್ರಗಾರಿಕೆ ಈ ದಿನಗಳಲ್ಲಿ ತುಂಬ ಅಗತ್ಯ. ಹುಟ್ಟುಹಬ್ಬ, ಮದುವೆ ಮುಂಜಿ, ಅರವತ್ತರ ಶಾಂತಿ ಇತ್ಯಾದಿ ಸಮಾರಂಭಗಳಲ್ಲಿ ಸಂಗೀತ, ನೃತ್ಯ, ತಾಳಮದ್ದಳೆ, ಗಮಕ ಇತ್ಯಾದಿಗಳು ಒಂದೆಡೆ ನಡೆಯುತ್ತಿದ್ದರೆ ಮತ್ತೂಂದೆಡೆ ಜನ ಇವು ಯಾವುದರ ಪರಿವೆಯೂ ಇಲ್ಲದೆ ಊಟ ಮಾಡುತ್ತಿರುತ್ತಾರೆ. ಅಂತೂ ಪ್ರತಿಬಾರಿ ಕಾರ್ಯಕ್ರಮವಷ್ಟೇ ಅಲ್ಲದೆ, ಜೊತೆಗೆ ಉಪಕಾರ್ಯಕ್ರಮವೇನಾದರೂ ಬೇಕೇ ಬೇಕು!

Advertisement

ಅದೊಂದು ದೊಡ್ಡ ಸಭಾಂಗಣದಲ್ಲಿ ಕಾರ್ಯಕ್ರಮ. ಸಭಾಭವನದ ಆಸನಗಳೆಲ್ಲ ಭರ್ತಿ! ಎಲ್ಲ ಶಾಲೆಗಳಿಗೆ ಕಡ್ಡಾಯವಾಗಿ ಶಿಕ್ಷಕರನ್ನು ಕಳುಹಿಸುವಂತೆ ಇಲಾಖೆಯ ಆದೇಶ ಬಂದಿರುವುದೇ ಇದಕ್ಕೆ ಕಾರಣ. ನಾನು ಯಥಾಪ್ರಕಾರ ಒಳಪ್ರವೇಶಿಸಿ ನನ್ನ ಸಹೋದ್ಯೋಗಿ ಗೆಳತಿಯರ ನಡುವೆ ಕಾಯ್ದಿರಿಸಿದ ಆಸನದಲ್ಲಿ ಆಸೀನಳಾದೆ.

ಇಂತಹ ಸಭೆಸಮಾರಂಭಗಳ ವೇದಿಕೆಯಲ್ಲಿ ಮಾತನಾಡುವವರು ಬಹಳ ಚಾಣಾಕ್ಷರಿರಬೇಕು. ಮಾತಿನ ಮೋಡಿಯಲ್ಲಿ ಎಲ್ಲರನ್ನು ಸೆಳೆವ ತಂತ್ರ ಗೊತ್ತಿರಬೇಕು. “ನೋಡೋಣ, ಈಗ ಚಪ್ಪಾಳೆ!’ ಎಂದು ಆಗಾಗ ಹೇಳುತ್ತ ಜನಮರುಳು ಮಾಡುತ್ತಿರಬೇಕು. ಯಾಕೆಂದರೆ, ಅಲ್ಲಿ ಆಸಕ್ತರಿಗಿಂತ ಒತ್ತಾಯದ ಮಾಘಸ್ನಾನಕ್ಕೆ ಬಂದವರೇ ಅಧಿಕ.

ಸಭೆಗಳೆಂದರೆ ಹಾಗೆ. ಬಹಳ ಅಪರೂಪಕ್ಕೆ ಭೇಟಿಯಾದವರ ಜೊತೆಗೆ ಮಾತು- ನಗು. ನೆಂಟಸ್ತಿಕೆ ಮಾತನಾಡುವವರೂ ಇರುತ್ತಾರೆ. ಕೆಲವರು ಭಾಷಣದ ಬಗ್ಗೆ ಕಾಮೆಂಟ್‌ ಮಾಡುತ್ತಿರುತ್ತಾರೆ.

ಉಪ್ಪು ತಿಂದವನ ಬಾಯಲ್ಲಿ ತಪ್ಪು ಬರುವುದು ಸಹಜ ಎನ್ನುತ್ತ ನಿಮಿಷಾರ್ಧ ದಲ್ಲಿ ಉಪನ್ಯಾಸಕನ ಪಾಂಡಿತ್ಯವನ್ನು ತಕ್ಕಡಿಯಲ್ಲಿ ಅಳೆಯುತ್ತಾರೆ.

Advertisement

ಅಂದು ಆ ವೇದಿಕೆಯಲ್ಲಿ ನಿರೂಪಕರು ಸನ್ಮಾನಿತರ ಹೆಸರನ್ನು ಓದುವಾಗ ನನ್ನ ಹೆಸರು ಹೇಳಿದ್ದನ್ನು ಕೇಳಿ ಹೌಹಾರಿದೆ. ನನ್ನನ್ನು ನಾನೇ ಚಿವುಟಿ ನೋಡಿದೆ. ನಾನೇನು ಸಾಧನೆ ಮಾಡಿದ್ದೇನೆ! ಒಂದಿಷ್ಟು ಕವಿತೆ- ಬರಹಗಳನ್ನು ಬರೆಯುವುದು ಹವ್ಯಾಸ. ಆದರೆ, ಎಲ್ಲವೂ ಕಸದ ಬುಟ್ಟಿಗೆ! ಸಂಪಾದಕರು ಒಳ್ಳೆಯ ಮೂಡಿನಲ್ಲಿದ್ದರೆ ಒಂದೊಂದು ಪ್ರಕಟವಾಗುತ್ತವೆ. ನಾಲ್ಕಾರು ಪುಸ್ತಕಗಳನ್ನು ಪ್ರಕಟಿಸಿದ್ದು ಹೌದು. ಆದರೆ, ಅದನ್ನು ಯಾರು ಓದಿರುತ್ತಾರೆ! ಸಮಾಜ ಸೇವೆಯನ್ನೇನೂ ಮಾಡಿಲ್ಲ. ನನ್ನ ಹೆಸರಿನ ಬೇರೆಯವರಿರಬಹುದು ಎಂದುಕೊಂಡೆ. ಮತ್ತೂಮ್ಮೆ ನನ್ನ ಪ್ರವರವನ್ನು ಓದಿದರು. “ನಾನೇ’ ಎಂಬುದು ಖಚಿತವಾಯಿತು.

ವೇದಿಕೆಯಲ್ಲಿ ಒಂದಿಬ್ಬರು ಸ್ವಾಮೀಜಿಯವರ ಸಹಿತವಾಗಿ ಎರಡು ಸಾಲುಗಳಲ್ಲಿ ಗಣ್ಯಾತಿಗಣ್ಯರೆನ್ನುವವರು ಆಸೀನರಾಗಿದ್ದರು. ನನಗಿಂತ ಮೊದಲು ವಿದ್ಯಾರ್ಥಿನಿಯೊಬ್ಬಳು ಸಂಮಾನದ ಕ್ಯೂನಲ್ಲಿ ನಿಂತಿದ್ದಳು. ಅವಳನ್ನು ವೇದಿಕೆಗೆ ಆಹ್ವಾನಿಸಿ, ಮುಂದೆ ಇರಿಸಿದ ಸ್ಪೆಷಲ್‌ ಫೈಬರ್‌ ಚಯರ್‌ನಲ್ಲಿ ಕೂರುವಂತೆ ಸೂಚಿಸಿ, ಶಾಲು ಹೊದೆಸಿ, ಕೈಯಲ್ಲಿ ತೊಟ್ಟೆ ಮುಚ್ಚಿದ ಹಣ್ಣಿನ ತಟ್ಟೆ ಇಟ್ಟು ಫೋಟೋ ಕ್ಲಿಕ್ಕಿಸಿದರು.

ಹಣದ ಲಕೋಟೆ ಏನಾದರೂ ಕೊಡುತ್ತಾರೆಯೇ, ನೋಡಿದೆ. ಇಲ್ಲ. ಈ ಸಂಮಾನ ಎಂಬುದೆಲ್ಲ ಬರೀ ಬೋಗಸ್‌. ಶಾಲು, ಹಣ್ಣು, ತಟ್ಟೆಯ ಜೊತೆ ಖರ್ಚಿಗೇನಾದರೂ ಕೊಡದಿದ್ದರೆ ಏನು ಫ‌ಲ? “ನನ್ನನ್ನೂ ಸನ್ಮಾನಕ್ಕಾಗಿ ಒತ್ತಾಯಿಸಿದ್ದರು, ಹಣ ಕೊಡುವುದಿಲ್ಲವಲ್ಲ ಎಂದು ಉದಾಸೀನ ಮಾಡಿದೆ’ ಎಂದು ಸಭಾಸೀನರಾಗಿದ್ದವರೊಬ್ಬರು ಹಲುಬುತ್ತಿದ್ದರು.

ಇಷ್ಟೆಲ್ಲಾ ಕೇಳಿದ ಮೇಲೆ ಸನ್ಮಾನಿಸಿ ಕೊಳ್ಳುವುದೆಂದರೆ ಹರಕೆಗೆ ತಂದು ಕಟ್ಟಿದ ಕುರಿಯ ಚಿತ್ರ ಕಣ್ಣಿಗೆ ಕಟ್ಟಿತು. ನನ್ನ ಪರಿಚಯ ಮಾಡುವ ಜೊತೆಯಲ್ಲಿ ಒಂದು ಪುಟದಷ್ಟು ಹೊಗಳಿ ಹೊನ್ನ ಶೂಲಕ್ಕೇರಿಸಿದರು. ಸನ್ಮಾನ ಪೀಠದಲ್ಲಿ ಕುಳ್ಳಿರಿಸಿ, ಶಾಲು ಹೊದೆಸಿ, ಅಭಿನಂದನಾ ಫ‌ಲಕ ಕೊಟ್ಟು, ಹಾರ ಹಾಕಿ, ಬೆನ್ನ ಹಿಂದೆ ಗಣ್ಯರು ನಿಂತು ಫೋಟೋಕ್ಕೆ ಫೋಸ್‌ ಕೊಡುವಾಗ, ಪೊಲೀಸರು ಕಳ್ಳನನ್ನು ಹಿಡಿದು ಫೊಟೊ ತೆಗೆಸಿಕೊಂಡಂತೆ ಕಾಣುತ್ತಿತ್ತು!

ಶೈಲಜಾ ಪುದುಕೋಳಿ

Advertisement

Udayavani is now on Telegram. Click here to join our channel and stay updated with the latest news.

Next