Advertisement

6755 ಕೈಗಾರಿಕೆಗಳು ಇರುವ ಈ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆಗಿಲ್ಲ ಸ್ವಂತ ಸೂರು!

02:18 PM Sep 13, 2020 | sudhir |

ಬಾಗಲಕೋಟೆ: ಜಿಲ್ಲೆಯ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಇರುವ ಸರ್ಕಾರದ ಇಎಸ್‌ಐ ಆಸ್ಪತ್ರೆಗೆ ಸ್ವಂತ ಸೂರಿಲ್ಲ. ಬಾಡಿಗೆ ಕಟ್ಟಡದಲ್ಲಿರುವ ಈ ಆಸ್ಪತ್ರೆ, ಕೇವಲ ಹೊರ ರೋಗಿಗಳ ವಿಭಾಗ ಹೊಂದಿದ್ದು, ಜಿಲ್ಲೆಯಲ್ಲಿಯೇ ಸುಸಜ್ಜಿತ ಪೂರ್ಣ ಪ್ರಮಾಣದ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ.

Advertisement

ಹೌದು, ಜಿಲ್ಲೆಯಲ್ಲಿ ಬೃಹತ್‌ ಮತ್ತು ಮಧ್ಯಮ ಪ್ರಮಾಣವೂ ಸೇರಿ ಸುಮಾರು 6755 ಕೈಗಾರಿಕೆಗಳಿವೆ. ಅದರಲ್ಲಿ 14 ಸಕ್ಕರೆ ಕಾರ್ಖಾನೆ, ಮೂರು ಸಿಮೆಂಟ್‌ ಕಾರ್ಖಾನೆಗಳೂ ಒಳಗೊಂಡಿದ್ದು, ಇದಲ್ಲದೇ 43,412 ವಿವಿಧ ಪ್ರಮಾಣದ (ಕಾಗದ ಮುದ್ರಣ, ರಬ್ಬರ್‌ ಮತ್ತು ಪ್ಲಾಸ್ಟಿಕ್‌, ಟೆಕ್ಸಟೈಲ್, ಮರ, ಇತರೆ ಸೇರಿ) ಸಣ್ಣ ಕೈಗಾರಿಕೆಗಳಿವೆ. ಈ ಎಲ್ಲ ಕೈಗಾರಿಕೆಗಳಲ್ಲಿ ನೇರವಾಗಿ 54,695 ಜನ ಕೆಲಸ ಮಾಡುತ್ತಿದ್ದರೆ, ಪರೋಕ್ಷವಾಗಿ ಲಕ್ಷಾಂತರ ಜನರು ಅವಲಂಬಿಸಿದ್ದಾರೆ.

ಇನ್ನಿ ದೇಶದ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸುವ ಸೈನಿಕರು, ಸೇವೆಯಿಂದ ನಿವೃತ್ತಿಯಾದ ಮಾಜಿ ಸೈನಿಕರು, ಬಹುತೇಕ ಇಎಸ್‌ಐ ಆಸ್ಪತ್ರೆಯನ್ನೇ ಅವಲಂಬಿಸುತ್ತಾರೆ. ಆದರೆ, ಅಗತ್ಯ ಸೌಲಭ್ಯಗಳು, ಇಲ್ಲಿನ ಆಸ್ಪತ್ರೆಯಲ್ಲಿ ದೊರೆಯದ ಕಾರಣ, ಅವರೂ ಹುಬ್ಬಳ್ಳಿಯ ಇಎಸ್‌ಐ ಆಸ್ಪತ್ರೆಗೆ ಅಲೆಯವ ಪ್ರಸಂಗ ಇದೆ.

ಸ್ವಂತ ಸೂರಿಲ್ಲ: ಎಲ್ಲ ಹಂತದ ಕೈಗಾರಿಕೆಗಳ ಕಾರ್ಮಿಕರಿಗೆ ಆರೋಗ್ಯ ಸೇವೆ ಒದಗಿಸಲು ಆಯಾ ಕೈಗಾರಿಕೆಗಳು, ಅವರವರ ವೇತನದಲ್ಲಿ ಇಎಸ್‌ಐ ಎಂದು ಒಂದಷ್ಟು ಹಣ ಕಡಿತ ಮಾಡಲಾಗುತ್ತದೆ. ಆದರೆ, ಕಾರ್ಮಿಕರಿಗೆ ಜಿಲ್ಲೆಯಲ್ಲಿ ಇಎಸ್‌ಐ ಒಳ ರೋಗಿಗಳ ಆಸ್ಪತ್ರೆ ಇಲ್ಲದ ಕಾರಣ, ಅವರೆಲ್ಲ ಹುಬ್ಬಳ್ಳಿ, ಬೆಳಗಾವಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಜತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಇಎಸ್‌ಐ ಸೌಲಭ್ಯವಿದ್ದು, ಇಎಸ್‌ಐ ಆಸ್ಪತ್ರೆಯಿಂದ ಶಿಫಾರಸ್ಸು ಪತ್ರ ಪಡೆದು, ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಿದೆ. ಆದರೆ, ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಇಎಸ್‌ಐ ಯೋಜನೆಯಡಿ ಕೆಲವೇ ರೋಗಗಳಿಗೆ ಚಿಕಿತ್ಸೆ ಸೌಲಭ್ಯವಿದೆ ಎಂಬ ಸಬೂಬು ಹೇಳಿ, ಹಣ ಪಡೆಯುವ ವ್ಯವಸ್ಥೆ ನಡೆಯುತ್ತಿದೆ ಎಂಬ ಆರೋಪವಿದೆ.

ಜಿಲ್ಲೆಯಲ್ಲಿ 6755 ಬೃಹತ್‌ ಮತ್ತು ಮಧ್ಯಕ ಕೈಗಾರಿಕೆಗಳು, 43,412 ಸಣ್ಣ ಕೈಗಾರಿಕೆಗಳಿದ್ದರೂ, ಜಿಲ್ಲೆಗೊಂದು ಸುಸಜ್ಜಿತ ಇಎಸ್‌ಐ ಆಸ್ಪತ್ರೆಯಿಲ್ಲ. ಸಧ್ಯ ನವನಗರದ ಬೃಂದಾವನ ಸೆಕ್ಟರ್‌ (ಸಂತ್ರಸ್ತರಲ್ಲದವರ ವಾಸಕ್ಕಾಗಿ ನಿರ್ಮಿಸಿದ ಸೆಕ್ಟರ್‌)ನ ಮನೆಯೊಂದರಲ್ಲಿ ಈ ಬಾಡಿಗೆ ಆಧಾರದ ಮೇಲೆ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ.

Advertisement

ಚಿಕಿತ್ಸೆ ಇಲ್ಲ; ಔಷಧಿ ಮಾತ್ರ: ಇಲ್ಲಿನ ಇಎಸ್‌ಐ ಆಸ್ಪತ್ರೆಯಲ್ಲಿ ಕಾರ್ಮಿಕರು, ವಿವಿಧ ಕಂಪನಿಗಳ ನೌಕರರು ಬಯಸುವ ಆರೋಗ್ಯ ಸೇವೆ ದೊರೆಯುವುದಿಲ್ಲ. ಸಂಸ್ಥೆ ನೀಡುವ ಇಎಸ್‌ಐ ಪ್ರಮಾಣ ಪತ್ರದೊಂದಿಗೆ ಇಲ್ಲಿಗೆ ಬಂದರೆ, ಇಎಸ್‌ಐ ಸೌಲಭ್ಯ ಇರುವ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಇಲ್ಲವೇ ಹುಬ್ಬಳ್ಳಿಗೆ ಹೋಗಿ ಎಂದು ಹೇಳುವ ಪರಿಪಾಠವಿದೆ. ಕೆಲವೇ ಕೆಲವು ಔಷಧಿ ನೀಡುವ ಸೌಲಭ್ಯವಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆದು, ಈ ಆಸ್ಪತ್ರೆಯಲ್ಲಿ ಮಾತ್ರೆ ಪಡೆಯಲು ಬರಬೇಕು. ಎಲ್ಲ ರೀತಿಯ ಮಾತ್ರೆಗಳೂ ಇಲ್ಲಿ ದೊರೆಯುವುದಿಲ್ಲ. ಹೀಗಾಗಿ ಮಾತ್ರ ಪಡೆಯಲೂ ಹುಬ್ಬಳ್ಳಿಯ ಇಎಸ್‌ಐ ಆಸ್ಪತ್ರೆಗೆ ಹೋಗಬೇಕಾದ ಮತ್ತೂಂದು ಅನಿವಾರ್ಯತೆಯೂ ಇದೆ. ಹೀಗಾಗಿ ಬಾಗಲಕೋಟೆಯಲ್ಲಿಯೇ ಪೂರ್ಣ ಪ್ರಮಾಣದ ಇಎಸ್‌ಐ ಆಸ್ಪತ್ರೆ ಆರಂಭಿಸಬೇಕು ಎಂಬ ಒತ್ತಡ ಕೇಳಿ ಬರುತ್ತಿದ್ದು, ಇದಕ್ಕೆ ಕಾರ್ಮಿಕ ಇಲಾಖೆ, ಸರ್ಕಾರ ಸ್ಪಂದಿಸಬೇಕಿದೆ.

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next