ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಆರೋಪಕ್ಕೆ ಸಿಲುಕಿರುವ ಕೆ. ಎಸ್. ಈಶ್ವರಪ್ಪ ಅವರು ಶುಕ್ರವಾರ ರಾತ್ರಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸಿಎಂ ಬೊಮ್ಮಾಯಿ ಅವರ ಅಧಿಕೃತ ನಿವಾಸಕ್ಕೆ ಆಗಮಿಸಿದ ಈಶ್ವರಪ್ಪ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಮತ್ತು ಈಶ್ವರಪ್ಪ ಅವರು ಕೆಲ ಕಾಲ ಮಾತುಕತೆಯನ್ನೂ ನಡೆಸಿದ್ದಾರೆ.
ಬೆಂಬಲಿಗರ ಆಕ್ರೋಶ
ಈಶ್ವರಪ್ಪ ಅವರು ರಾಜೀನಾಮೆ ಸಲ್ಲಿಸಲು ಆಗಮಿಸಿದ ವೇಳೆ ಸಿಎಂ ನಿವಾಸದ ಬಳಿ ಆಗಮಿಸಿದ್ದ ಬೆಂಬಲಿಗರು ಕಾಂಗ್ರೆಸ್ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು. ಈಶ್ವರಪ್ಪ ಅವರಿಗೆ ಜೈಕಾರ ಹಾಕಿದರು. ಈಶ್ವರಪ್ಪ ರಾಜೀನಾಮೆ ನೀಡಬಾರದು, ಅವರ ರಾಜೀನಾಮೆ ಪಡೆಯಬಾರದು ಎಂದು ಕೂಗಿದರು.ಸಿಎಂ ನಿವಾಸದ ಸುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ಈಶ್ವರಪ್ಪ ಅವರು ನಾಳೆ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಗಾಗಲಿ,ಹೊಸಪೇಟೆಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಗಾಗಲಿ ಹಾಜರಾಗುವುದಿಲ್ಲ ಎಂದು ಹೇಳಲಾಗಿದೆ.
ಈಶ್ವರಪ್ಪ ಅವರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಪ್ರಮುಖ ಸಚಿವರು ಸಿಎಂ ನಿವಾಸಕ್ಕೆ ದೌಡಾಯಿಸಿದ್ದಾರೆ, ಸಚಿವರಾದ ಆರಗ ಜ್ಞಾನೇಂದ್ರ, ಭೈರತಿ ಬಸವರಾಜು, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್ ಅವರು ಸಿಎಂ ಜತೆ ಮಾತುಕತೆ ಯಲ್ಲಿ ಭಾಗಿಯಾಗಿದ್ದಾರೆ.