ಶಿವಮೊಗ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೈ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ತಪ್ಪು. ಇದು ಒಂದು ರೀತಿಯ ರಾಜಕೀಯ ವ್ಯಭಿಚಾರ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ತಪ್ಪು. ಪಕ್ಷದ ಚುನಾವಣಾ ಸಮಿತಿ ಆಯ್ಕೆ ಮಾಡಿ ನಂತರ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ವಿವಿಧ ಸ್ತರಗಳ ಅಧಿಕಾರ ಹೊಂದಿರುವವರು ಅವರವರ ಇತಿಮಿತಿಗಳಲ್ಲಿ ನಡೆದುಕೊಳ್ಳಬೇಕು. ಸಿದ್ದರಾಮಯ್ಯ 224 ಕ್ಷೇತ್ರಗಳಲ್ಲೂ ಕೂಡ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿ.
ನಿಮ್ಮ ಬೆಂಬಲಿಗರು ಮಾತ್ರ ಅಭ್ಯರ್ಥಿಗಳಾಗಿ ಘೋಷಣೆ ಆಗಬೇಕಾ? ಡಿ.ಕೆ. ಶಿವಕುಮಾರ್‌ಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ವಿಪಕ್ಷ ನಾಯಕನಿಗೆ ವಿಶೇಷ ಸ್ಥಾನಮಾನ ಏನಾದರೂ ಕೊಟ್ಟಿದ್ದೀರಾ? ಸತೀಶ್ ಜಾರಕಿಹೊಳಿ ಸೇರಿದಂತೆ ಕಾರ್ಯಾಧ್ಯಕ್ಷ ಹುದ್ದೆ ಹೊಂದಿರುವ ಎಲ್ಲರೂ ಐದು, ಹತ್ತು ಸೀಟು ಅನೌನ್ಸ್ ಮಾಡಲಿ. ಅರ್ಜಿ ಹಾಕುವ ಸಂದರ್ಭ ಇನ್ನೂ ಮುಗಿಯುವ ಮೊದಲೇ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದು ಒಂದು ರೀತಿಯ ರಾಜಕೀಯ ವ್ಯಭಿಚಾರ. ರಾಷ್ಟ್ರೀಯ ವಿಚಾರಧಾರೆ ಇಟ್ಟುಕೊಂಡು ಬೆಳೆದಿದೆ. ಸಿದ್ದರಾಮಯ್ಯ ಶುರು ಮಾಡುತ್ತಿದ್ದಂತೆ ಅವರ ಬಾಲಂಗೋಚಿಗಳೆಲ್ಲ ಶುರು ಮಾಡಿದ್ದಾರೆ ಎಂದರು.
ವೋಟರ್ ಐಡಿ ಹಗರಣ ತನಿಖೆಯಾಗಲಿ
ವೋಟರ್ ಐಡಿ ಹಗರಣ ಪ್ರಜಾಪ್ರಭುತ್ವಕ್ಕೆ ಆದ ಅಪಮಾನ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
Related Articles
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನದ ಹಕ್ಕನ್ನು ತರಲು ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆಧುನಿಕ ವ್ಯವಸ್ಥೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು ಮಾರಕವಾಗಿರಬಾರದು. ವೋಟರ್ ಐಡಿ ಹಗರಣ ಕಳೆದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.
ಇದನ್ನು ಯಾರೇ ಮಾಡಿದರೂ ಸಹ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ.
ಈ ಬಗ್ಗೆ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರ ಗಮನ ಕೊಡಬೇಕು. ಬಿಜೆಪಿ, ಕಾಂಗ್ರೆಸ್ ಎಂದು ನಾನು ಹೇಳುವುದಿಲ್ಲ ಯಾರದೇ ಅವ ಧಿಯಲ್ಲಿ ನಡೆದರೂ ತಪ್ಪು. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಮತದಾನಕ್ಕೆ ಬಾರದೆ ಸೋಂಬೇರಿಗಳಾಗಿ ಇರುವವರಿಗೆ ಇದು ಬೆಂಬಲ ನೀಡಿದಂತೆ ಆಗುತ್ತದೆ.
ಪ್ರಜಾಪ್ರಭುತ್ವದ ಮತದಾನದ ಹಕ್ಕು ಸಂಪೂರ್ಣ ಸದುಪಯೋಗ ಆಗಬೇಕು. ವೋಟರ್ ಐಡಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಊಹೆಗಳು ಸತ್ಯವೋ? ಸುಳ್ಳೋ? ಗೊತ್ತಿಲ್ಲ ಸಮಗ್ರ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬರುತ್ತದೆ ಎಂದರು.