Advertisement

ಭೋವಿ ಜಗದ್ಗುರು ಭೇಟಿ ಮಾಡಿದ ಈಶ್ವರಪ್ಪ

10:55 AM Aug 23, 2019 | sudhir |

ಬಾಗಲಕೋಟೆ : ಬಿಜೆಪಿ ಸರ್ಕಾರದಲ್ಲಿ ಭೋವಿ ಸಮಾಜಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದ ಇಲ್ಲಿನ ಭೋವಿ ಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯನ್ನು ನೂತನ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ಮಾಡಿ, ಮಾತುಕತೆ ನಡೆಸಿದರು.

Advertisement

ನಗರದ ಕಾರಿಹಳ್ಳ ಬಳಿ ಇರುವ ಭೋವಿ ಪೀಠಕ್ಕೆ ತೆರಳಿ, ಶ್ರೀಗಳ ಆಶೀರ್ವಾದ ಪಡೆದರು. ಅಲ್ಲದೇ ಪೀಠದಿಂದ ಸನ್ಮಾನವೂ ಸ್ವೀಕರಿಸಿ, ಜಗದ್ಗುರುಗಳೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು.

ಕಡ್ಡಾಯವಾಗಿ ಸಚಿವ ಸ್ಥಾನ ಕೊಡಿ :
ಬಿಜೆಪಿಯಲ್ಲಿ ಭೋವಿ ಸಮಾಜದ ಶಾಸಕರಿದ್ದಾರೆ. ಹಲವರು ಅನುಭವಿ ಹಾಗೂ ಹಿರಿಯರಿದ್ದಾರೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಹೇಗೆ ಎಲ್ಲ ಸಮಾಜದವರಿದ್ದರೋ ಹಾಗೆ, ಬಿಜೆಪಿ ಸರ್ಕಾರದಲ್ಲಿ ಎಲ್ಲ ಸಮಾಜದ ಸಚಿವರಿರಬೇಕು. ಆಗ ಜಾತ್ಯಾತೀತ ರಾಷ್ಟ್ರ ಎಂಬ ದೇಶದ ಐಕ್ಯತೆಗೆ ಮಹತ್ವ ಬರುತ್ತದೆ. ಭೋವಿ ಸಮಾಜದ ಒಬ್ಬರಿಗಾದರೂ ಸಚಿವ ಸ್ಥಾನ ನೀಡಲೇಬೇಕು ಎಂದು ಬೇಡಿಕೆ ಇಟ್ಟರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇದೇ ವಿಷಯ ಪ್ರಸ್ತಾಪಿಸಿದ ಶ್ರೀಗಳು, ಸಮಾಜಕ್ಕೆ ಸಚಿವ ಸ್ಥಾನ ನೀಡಲು ಈಶ್ವರಪ್ಪನವರಿಗೆ ಹೇಳಿದ್ದೇವೆ. ಅವರು ನಮ್ಮ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಯಡಿಯೂರಪ್ಪನವರ ಮಂತ್ರಿ ಮಂಡಲ, ಬಸವಣ್ಣನವರ ಅನುಭವ ಮಂಟಪದಂತೆ ಎಲ್ಲ ಸಮಾಜದವರನ್ನು ಒಳಗೊಂಡಿರಬೇಕು. ಭೋವಿ ಸಮಾಜಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಅದರಂತೆ ಯಾವ ಸಮಾಜಕ್ಕೆ ಅವಕಾಶ ಸಿಕ್ಕಿಲ್ಲವೋ ಅವರಿಗೆಲ್ಲ ಅವಕಾಶ ಕೊಡಬೇಕು. ಯಡಿಯೂರಪ್ಪ ಅವರಷ್ಟೇ ಈಶ್ವರಪ್ಪ ಕೂಡ ಪವರ್‌ಫುಲ್ ನಾಯಕರಾಗಿದ್ದಾರೆ. ಹೈಕಮಾಂಡ್‌ನ ರಿಮೋಟ್ ಕಂಟ್ರೋಲ್ ಅವರ ಬಳಿಯೂ ಇದೆ. ಹೀಗಾಗಿ ಭೋವಿ ಸಮಾಜಕ್ಕೆ ಅವಕಾಶ ಕಡ್ಡಾಯವಾಗಿ ಕೊಡಬೇಕು. ಈ ಕುರಿತು ಆ. ೨೩ರಂದು ಸಮಾಜದ ಹಿರಿಯರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ. ಅವಕಾಶ ಸಿಗದಿದ್ದರೆ ಏನು ಮಾಡಬೇಕು ಎಂಬುದು ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ.
-ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಜಗದ್ಗುರು, ಭೋವಿ ಪೀಠ, ಬಾಗಲಕೋಟೆ

Advertisement

ಭೋವಿ ಸಮಾಜಕ್ಕೆ ಅವಕಾಶ ಕಲ್ಪಿಸಲು ಶ್ರೀಗಳು ಹೇಳಿದ್ದಾರೆ. ಅವರೊಂದಿಗೆ ಮಾತುಕತೆಯೂ ನಡೆಸಿದ್ದೇನೆ. ನಮ್ಮಲ್ಲಿ ೧೦೮ಕ್ಕೂ ಹೆಚ್ಚು ಸಮಾಜ ಇವೆ. ೩೪ ಸ್ಥಾನಗಳಲ್ಲಿ ಎಲ್ಲರಿಗೂ ಅವಕಾಶ ಸಿಗಲ್ಲ. ಮುಂದೆ ಎಲ್ಲರಿಗೂ ಅವಕಾಶ ಸಿಗುತ್ತವೆ. ನಾನೇ ಭೋವಿ ಸಮಾಜದ ವ್ಯಕ್ತಿಯಾಗಿ ಎಲ್ಲ ಕೆಲಸ-ಕಾರ್ಯ ಮಾಡುತ್ತೇನೆಂದು ಜಗದ್ಗುರುಳಿಗೆ ಹೇಳಿದ್ದೇನೆ. ಆದರೂ ಅವರ ಅಭಿಪ್ರಾಯವನ್ನು ಪಕ್ಷದ ಹಿರಿಯರ ಗಮನಕ್ಕೆ ತರುತ್ತೇನೆ.
-ಕೆ.ಎಸ್. ಈಶ್ವರಪ್ಪ, ನೂತನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next