ದಾವಣಗೆರೆ: ಸಚಿವ ಕೆ. ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಅನ್ನು ತುರುಬಿಗೆ ಹೋಲಿಸಿದ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಪಿ ಟಿ ಪರಮೇಶ್ವರ್ ನಾಯ್ಕ್ ಈಶ್ವರಪ್ಪ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ತುರುಬು ಬಿಚ್ಚುವುದು ಗೊತ್ತು, ಕಟ್ಟುವುದು ಗೊತ್ತಿದೆ. ಅವರಿಗೆ ಸ್ವಾಭಿಮಾನ ಇದ್ದರೆ ಅವರ ಬೆನ್ನು ಅವರು ನೋಡಿಕೊಳ್ಳಲಿ. ಉಪ ಮುಖ್ಯಮಂತ್ರಿಯಾದವರು ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಯೋಗ್ಯತೆ ಎಲ್ಲಿಗೆ ಬಂತು ಎನ್ನುವುದು ಗೊತ್ತಾಗುತ್ತೆ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.
ಅನರ್ಹ ಶಾಸಕರಿಗೂ ಹಾಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ವಿಚಾರವಾಗಿ ಮಾತನಾಡಿದ ಪರಮೇಶ್ವರ್ ನಾಯ್ಕ್, ಬಿಜೆಪಿಯವರು ಎಣಿ ಹತ್ತಿ ಅದನ್ನೇ ಒದೆಯುವ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಇದೇ ರೀತಿಯ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಗೂಳಿಹಟ್ಟಿ ಶೇಖರ್ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಈಗ ಅವರ ಸ್ಥಿತಿ ಏನಾಗಿದೆ ಎನ್ನುವುದನ್ನು ನೋಡುತ್ತಿದ್ದೇವೆ ಎಂದರು.
ಈಗಿನ ಬಿಜೆಪಿ ಸರ್ಕಾರ ಅನೈತಿಕ ಸರ್ಕಾರ. ಬಿಜೆಪಿಯನ್ನು ನಂಬಬೇಡಿ ಎಂದು ಅನರ್ಹ ಶಾಸಕರಿಗೆ ಹೇಳಿದ್ದೆವು. ಆದರೆ ಈಗ ಅವರಿಗೆ ಜ್ಞಾನೋದಯವಾಗಿರಬೇಕು. ಅದಕ್ಕೆ ಸವದಿಯವರು ಈ ರೀತಿ ಹೇಳಿರಬೇಕು. ಇದೇನು ಹೊಸದೇನಲ್ಲ ಎಂದು ಕಿಡಿಕಾರಿದರು.
ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರನ್ನು ಕೊಂಡಾಡಿದ ಪಿಟಿ ಪರಮೆಶ್ವರ್ ನಾಯ್ಕ್, ಇಡೀ ರಾಜ್ಯದಲ್ಲೇ ದಾವಣಗೆರೆಯಷ್ಟು ಯಾರು ಕೂಡ ಅಭಿವೃದ್ಧಿ ಮಾಡಿಲ್ಲ. ಮಲ್ಲಿಕಾರ್ಜುನ್ ಸಾಕಷ್ಟು ಅನುಧಾನ ತೆಗೆದುಕೊಂಡು ಬಂದು ಅಭಿವೃದ್ಧಿ ಕೆಲಸ ಮಾಡಿದರು. ಆದರೆ ಮತದಾರರು ಅವರನ್ನು ಕೈ ಹಿಡಿಯಲಿಲ್ಲ ಎಂದರು.
ವಿರೋಧಿಗಳಿಗೆ ಠೇವಣೆ ಇಲ್ಲದಂತೆ ಮಾಡಿ ಹೆಚ್ಚಿನ ಮತಗಳಿಂದ ಜನರು ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಬೇಕಿತ್ತು. ಆದರೆ ಮತದಾರರು ಕೈ ಹಿಡಿಯಲಿಲ್ಲ ಎಂದರು.