ಬೆಂಗಳೂರು: ಎಸ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಯತ್ನಾಳ್ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಕಾಂಗ್ರೆಸ್‌ನವರು ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅದು ಹೇಗೆ ಬಿಡುವುದಿಲ್ಲ ಎಂದು ನಾವೂ ನೋಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಅವರು, ಇವರು ಸದನ ನಡೆಸಲು ಬಿಡದಿದ್ದರೆ ನಾವು ಸುಮ್ಮನೆ ಇರುತ್ತೇವಾ ಎಂದು ಪ್ರಶ್ನಿಸಿದರು.
ಯತ್ನಾಳ್ ಹೇಳಿಕೆಗೆ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಹೇಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಲೆಗಡುಕ ಎಂದು ಸಿದ್ದರಾಮಯ್ಯ ಹೇಳಿದಾಗಲೇ ಅವರನ್ನು ಪಕ್ಷದಿಂದ ಹೊರಗೆ ಹಾಕಬೇಕಿತ್ತು ಎಂದು ಹೇಳಿದರು. ಕಾಂಗ್ರೆಸ್‌ನವರು ಸಿಎಎ ಬಗ್ಗೆ ಹೋರಾಟ ಮಾಡಲಿ ಬೇಡ ಎನ್ನುವುದಿಲ್ಲ. ಆದರೆ ದೇಶದ್ರೋಹಿಗಳ ಪರ ವಕಾಲತ್ತು ವಹಿಸುವುದು ಬೇಡ ಎಂದರು.
ದಿಲ್ಲಿ ಗಲಭೆಗೆ ಬಿಜೆಪಿ ಕಾರಣ ಅಲ್ಲ. ರಾಷ್ಟ್ರದ್ರೋಹಿಗಳು ಮಾಡಿದ್ದಾರೆ. ಕಾಂಗ್ರೆಸ್‌ನವರೇ ಮೇಲ್ನೋಟಕ್ಕೆ ರಾಷ್ಟ್ರ ಭಕ್ತಿ ತೋರಿಸಬೇಡಿ. ನಿಮ್ಮ ವಿಚಾರವೇನು? ರಾಷ್ಟ್ರ ಭಕ್ತರ ಪರವೋ ಅಥವಾ ರಾಷ್ಟ್ರ ದ್ರೋಹಿಗಳ ಪರವೋ ಎಂದವರು ಪ್ರಶ್ನಿಸಿದರು.
ದೊರೆಸ್ವಾಮಿ, ಅಮೂಲ್ಯಾ ಮತ್ತು ಇತರ ಪ್ರಗತಿಪರರ ಜತೆ ಕಾಂಗ್ರೆಸ್‌ನವರು ಯಾವ ರೀತಿ ಸಂಬಂಧ ಹೊಂದಿದ್ದಾರೆ ಎಂಬುದು ಗೊತ್ತಿದೆ ಎಂದು ಅಮೂಲ್ಯಾ ಜತೆ ದೊರೆಸ್ವಾಮಿ ಅವರು ನಿಂತಿದ್ದ ಫೋಟೊ ಪ್ರದರ್ಶಿಸಿದರು.
ದೊರೆಸ್ವಾಮಿ ಅವರ ಹೆಸರಿನಲ್ಲಿ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ. ರಾಜಕಾರಣ ಮಾಡಲು ಅವರ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಅಮೂಲ್ಯಾ ಪಾಕ್ ಪರ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದು ಬಿಟ್ಟರೆ ಏನು ಮಾಡಿದ್ದರು ಎಂದು ಪ್ರಶ್ನಿಸಿದರು.