Advertisement

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧತೆ ತೋರಲಿ: ಈಶ್ವರ್‌ ಖಂಡ್ರೆ

09:44 PM Mar 15, 2022 | Team Udayavani |

ವಿಧಾನಸಭೆ:ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಬಿಜೆಪಿ ಸರ್ಕಾರ ಬದ್ಧತೆ ತೋರಿಸಿ ಮೂರು ಸಾವಿರ ಕೋಟಿ ರೂ. ಮೊತ್ತ ಒಂದು ವರ್ಷದಲ್ಲಿ ಬಳಕೆಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಕಾಂಗ್ರೆಸ್‌ನ ಈಶ್ವರ್‌ ಖಂಡ್ರೆ ಒತ್ತಾಯಿಸಿದರು.

Advertisement

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಕ್ಕರೂ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಪ್ರಸಕ್ತ ವರ್ಷ ಇಟ್ಟಿರುವ 1500 ಕೋಟಿ ರೂ.ಗೆ ಕ್ರಿಯಾ ಯೋಜನೆ ಆಗಿಲ್ಲ. ಇನ್ನೂ 1500 ಕೋಟಿ ರೂ. ನೀಡುವುದಾಗಿ ಹೇಳಲಾಗಿದೆ. ಅದು ಯಾವಾಗ ಖರ್ಚು ಮಾಡಲಾಗುತ್ತದೆ ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಪೈಕಿ ಒಬ್ಬರನ್ನು ಅಧ್ಯಕ್ಷರನ್ನು ಮಾಡಲಾಗುತ್ತಿತ್ತು. ಆದರೆ, ಇದೀಗ ಶಾಸಕರನ್ನು ನೇಮಕ ಮಾಡಲಾಗಿದೆ. ಅವರು ಸಂಪುಟದಲ್ಲಿ ಬಂದು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಸಾಧ್ಯವೇ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 40 ಸಾವಿರ ಹುದ್ದೆ ಖಾಲಿ ಇವೆ. ಆ ಪೈಕಿ 16,022 ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಹುದ್ದೆ ಸೇರಿದೆ. ಹೀಗಾದರೆ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ ಎಂದು ಕೇಳಿದ ಅವರು, ಕಾಂಗ್ರೆಸ್‌ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 26 ಸಾವಿರ ಹುದ್ದೆ ಭರ್ತಿ ಮಾಡಿ ನಿಗದಿಪಡಿಸಿದ ಅನುದಾನ ವೆಚ್ಚ ಮಾಡಿ ಮಂಡಳಿಗೆ ಸಚಿವರನ್ನೇ ನೇಮಿಸಲಾಗಿತ್ತು. ಅದು ನಮ್ಮ ಬದ್ಧತೆ ಎಂದು ಹೇಳಿದರು.

ದ್ರೋಹ
ಪ್ರಧಾನಮಂತ್ರಿ ಫ‌ಸಲ್‌ಬಿಮಾ ಯೋಜನೆಯಿಂದ ರೈತರಿಗೆ ದ್ರೋಹವಾಗುತ್ತಿದೆ. 2016 ರಿಂದ 2020-21 ರವರೆಗೆ 88 ಲಕ್ಷ ರೈತರು ವಿಮೆ ಮಾಡಿಸಿದ್ದು ವಿಮೆ ಮೊತ್ತ 42 ಸಾವಿರ ಕೋಟಿ ರೂ. ರೈತರು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 7,992 ಕೋಟಿ ರೂ. ಪ್ರೀಮಿಯಂ ತುಂಬಲಾಗಿದೆ. ಆದರೆ, ರೈತರಿಗೆ ಬಂದಿರುವ ಪರಿಹಾರ 5,995 ಕೋಟಿ ರೂ. ಮಾತ್ರ. ವಿಮೆ ಸಂಸ್ಥೆ ಅನಾಮತ್ತಾಗಿ ಎರಡೂವರೆ ಸಾವಿರ ಕೋಟಿ ರೂ. ಗುಳುಂ ಮಾಡಿದೆ. ಇದಕ್ಕೆ ವಿಮೆ ಕಂಪನಿ ಬೇಕಾ, ಸರ್ಕಾರವೇ ಮಾಡಲು ಸಾಧ್ಯವಿಲ್ಲವಾ, ಆ ಕಂಪನಿಗಳು ಷರತ್ತು ವಿಧಿಸಿ ಪರಿಹಾರ ಸಿಗಂತೆ ಮಾಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಸತಿ ಯೋಜನೆಯಡಿ ಕೊಟ್ಟ ಮನೆ ಬಿಟ್ಟರೆ ಬಿಜೆಪಿ ಸರ್ಕಾರ ಬಂದ ಮೇಲೆ ಒಂದೇ ಒಂದು ಮನೆ ಕೊಟ್ಟಿಲ್ಲ. ನಮ್ಮ ಜಿಲ್ಲೆ ಹಾಗೂ ನನ್ನ ಕ್ಷೇತ್ರದಲ್ಲಿ ಸುಳ್ಳು ದೂರು ಆಧರಿಸಿ ವಸತಿ ಫ‌ಲಾನುಭವಿಗಳಿಗೆ ಅನ್ಯಾಯ ಮಾಡಲಾಗಿದೆ. ವಸತಿ ಸಚಿವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಆಗ್ರಹ
ಇದೇ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ರಾಜಶೇಖರ ಪಾಟೀಲ್‌ ಹುಮ್ನಾಬಾದ್‌, ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ 100 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಘೋಷಿಸಿದ್ದರು. ಆದರೆ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಅಲ್ಲಿ ರೈತರ ಕಬ್ಬಿಗೆ ಸರಿಯಾದ ಬೆಲೆ ಸಿಕ್ಕಿಲ್ಲ. ಕಾರ್ಖಾನೆಯ ಸಾಮರ್ಥ್ಯದಷ್ಟು ಕಬ್ಬು ಅರೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ದೂರಿದರು.

ಬಸವಕಲ್ಯಾಣದಲ್ಲಿ ಅನುಭವ ಮಂಟಪ ಅಭಿವೃದ್ಧಿ ಕಾಮಗಾರಿ ವೇಗ ಪಡೆಯುತ್ತಿಲ್ಲ. ಆ ಭಾಗದ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕತೆಯಿಂದ ಪರಿಹಾರ ಕೊಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ವೀರಶೈವ ಅಭಿವೃದ್ದಿ ನಿಗಮ, ಮರಾಠ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂ. ಮೀಸಲಿಟ್ಟರೂ ಇದುವರೆಗೂ ಒಂದು ರೂಪಾಯಿ ವೆಚ್ಚ ಆಗಿಲ್ಲ. ಯಾವ ಪುರುಷಾರ್ಥಕ್ಕೆ ಘೋಷಣೆ ಮಾಡಬೇಕು ಎಂದು ಪ್ರಶ್ನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next