ಬೆಂಗಳೂರು: ವಿದ್ಯುತ್ ದರ ಯೂನಿಟ್‌ಗೆ 30 ಪೈಸೆ ಹೆಚ್ಚಳ ಮಾಡಿರುವ ಸರ್ಕಾರದ ಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿರುವ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್ ನೀಡಿರುವ ರಾಜ್ಯ ಸರ್ಕಾರಕ್ಕೆ ಖಂಡಿತವಾಗಿಯೂ ಮನುಷ್ಯತ್ವವೇ ಇಲ್ಲವೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಖಾಸಗಿ ಶಾಲೆ-ಕಾಲೇಜು ಶಿಕ್ಷಕರು ಸೇರಿ ಹಲವು ಕಂಪನಿಗಳ ಉದ್ಯೋಗಿಗಳು ಅರ್ಧ ಸಂಬಳ ಪಡೆಯುತ್ತಿದ್ದಾರೆ. ಎಷ್ಟೋ ಜನ ಉದ್ಯೋಗ ಕಳೆದುಕೊಂಡು ದುಡಿವ ಕೈಗೆ ಕೆಲಸ ಇಲ್ಲದೆ ಬಸವಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಏರಿಸುವ ಸರ್ಕಾರಕ್ಕೆ ಜನರ ಕಾಳಜಿ ಇಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಬಂಧನ
ಈಗಾಗಲೇ ಪೆಟ್ರೋಲ್ ಬೆಲೆ 100 ರೂ. ತಲುಪಿದೆ. ಇದರ ಜತೆಗೆ ರಾಜ್ಯ ಸರ್ಕಾರ ವಿದ್ಯುತ್ ಶಾಕ್ ನೀಡಿದೆ. ಕೊರೊನಾದಿಂದ ನಲುಗಿರುವ ಜನರ ಮೇಲೆ ವಿದ್ಯುತ್ ದರ ಏರಿಕೆಯ ಗದಾ ಪ್ರಹಾರ ಇದೇನಾ ಬಿಜೆಪಿಯ ಜನಪರ ನೀತಿ ಎಂದು ಪ್ರಶ್ನಿಸಿದ್ದಾರೆ.