ಮಡಿಕೇರಿ: ಜಿಲ್ಲೆಯಲ್ಲಿ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಯಲು ಉನ್ನತ ಮಟ್ಟದ ತಜ್ಞರ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಜಿಲ್ಲೆಯ ತಿತಿಮತಿ ಅರಣ್ಯ ವ್ಯಾಪ್ತಿಯ ಚೈನಿಹಡ್ಲು ಹಾಡಿಗೆ ಶನಿವಾರ ಭೇಟಿ ನೀಡಿ ಆದಿವಾಸಿ ಜನರ ಅಹವಾಲು ಆಲಿಸಿದ ಅನಂತರ ಸಚಿವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ 15 ದಿನಗಳಲ್ಲಿ ಮೂವರು ಕಾಡಾನೆ ಹಾವಳಿಗೆ ತುತ್ತಾಗಿದ್ದಾರೆ. ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಣ ಮಾಡುವಲ್ಲಿ ಸರಕಾರ ಅಗತ್ಯ ತುರ್ತು ಕ್ರಮ ಕೈಗೊಳ್ಳಲಿದೆ. ಆ ನಿಟ್ಟಿನಲ್ಲಿ ತಿತಿಮತಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 5 ಕಿ.ಮೀ. ಉದ್ದದ ರೈಲ್ವೇ ಬ್ಯಾರಿಕೇಡ್ ನಿರ್ಮಿಸಲಾಗುವುದು ಎಂದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಕಾಡಾನೆ ಹಾವಳಿಯಿಂದ ಸ್ಥಳೀಯರು ತುಂಬಾ ತೊಂದರೆಪಡುತ್ತಿದ್ದಾರೆ. ಆದ್ದರಿಂದ ಜಿಲ್ಲೆಗೆ ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಲಾಗಿತ್ತು, ಅದರಂತೆ ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದರು.
ಕೊಡಗು ಜಿಲ್ಲಾ ಪಂಚಾಯತ್‌ಗಳ ಮಾಜಿ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರಾದ ಪಂಕಜ ಅವರು ತಿತಿಮತಿ ಚೈನಿಹಡ್ಲು ಹಾಡಿಯಲ್ಲಿ 150ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದು, ಕಾಡಾನೆ ಹಾವಳಿಯಿಂದ ರಕ್ಷಣೆ ಬೇಕಿದೆ ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: Soujanya ತಾಯಿ ಮುಂದೆ ಅಣ್ಣಪ್ಪ ಬೆಟ್ಟದಲ್ಲಿ ಪ್ರಮಾಣ ಮಾಡಿದ ಧೀರಜ್, ಮಲ್ಲಿಕ್, ಉದಯ್ ಜೈನ್