ಚೆನ್ನೈ: ತಮಿಳುನಾಡಿನ ಈರೋಡ್ ಲೋಕಸಭಾ ಕ್ಷೇತ್ರದ ಸಂಸದ ಎ.ಗಣೇಶಮೂರ್ತಿ ಅವರನ್ನು ಇಂದು ಮುಂಜಾನೆ ಆಸ್ಪತ್ರೆಗೆ ಸೇರಿಸಲಾಗಿದೆ. ಅವರು ಕೀಟನಾಶಕ ಸೇವಿಸಿದ ಕಾರಣ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಪಕ್ಷದಿಂದ ಸ್ಪರ್ಧೆ ನಡೆಸಿದ್ದ ಗಣೇಶಮೂರ್ತಿ ಅವರು ಜಯ ಗಳಿಸಿದ್ದರು. ಸೋಮವಾರ ಮುಂಜಾನೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಅವರು ಕೀಟನಾಶಕ ಸೇವಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಕುಟಂಬ ಸದಸ್ಯರೊಂದಿಗೆ ಇಬ್ಬರು ವೈದ್ಯರು ಆ್ಯಂಬುಲೆನ್ಸ್ ನಲ್ಲಿ ತೆರಳಿದ್ದರು.
ಎಂಡಿಎಂಕೆ ನಾಯಕ ದುರೈ ವೈಕೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಣೇಶಮೂರ್ತಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಇಸಿಎಂಒ ಚಿಕಿತ್ಸೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಮತ್ತು ಅಬಕಾರಿ ಸಚಿವ ಎಸ್.ಮುತ್ತುಸಾಮಿ, ಮೊಡಕುರಿಚಿಯ ಬಿಜೆಪಿ ಶಾಸಕ ಡಾ.ಸಿ.ಸರಸ್ವತಿ, ಎಐಎಡಿಎಂಕೆಯ ಕೆ.ವಿ.ರಾಮಲಿಂಗಂ ಮುಂತಾದ ರಾಜಕೀಯ ಮುಖಂಡರು ಆಸ್ಪತ್ರೆಗೆ ಧಾವಿಸಿ ಗಣೇಶಮೂರ್ತಿ ಅವರ ಆರೋಗ್ಯ ವಿಚಾರಿಸಿದರು.