ಪಡುಬಿದ್ರಿ: ಬಾಡಿಗೆ ಮನೆಯಲ್ಲಿ ವಾಸವಿದ್ದ ಕೂಲಿ ಕೆಲಸಗಾರರ ಮನೆಗೆ ಕಳ್ಳರು ನುಗ್ಗಿ 1.40 ಲಕ್ಷ ರೂ. ಮೌಲ್ಯದ ನಗ-ನಗದು ದೋಚಿ ಪರಾರಿಯಾದ ಘಟನೆ ಮಾ. 24ರಂದು ಎರ್ಮಾಳುವಿನಲ್ಲಿ ನಡೆದಿದೆ.
ಬಾಗಲಕೋಟೆ ಮೂಲದ ಪ್ರಸ್ತುತ ತೆಂಕ ಎರ್ಮಾಳು ಗ್ರಾಮದ ಬೀಚ್ ರಸ್ತೆಯ ವಿಜಯ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುವ ನಿಂಗವ್ವ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು 1.10 ಲಕ್ಷ ರೂ. ನಗದು, ಎಂಟು ಗ್ರಾಂ ಚಿನ್ನಾಭರಣ ಮತ್ತು 80 ಗ್ರಾಂ ಬೆಳ್ಳಿಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ನಿಂಗವ್ವ ಮತ್ತು ಅವರ ಗಂಡ ಶರಣಪ್ಪ ಮಾ.24ರಂದು ಬೆಳಗ್ಗೆ ಎಂದಿನಂತೆ ವೇಳೆಗೆ ಕೂಲಿ ಕೆಲಸಕ್ಕೆ ತೆರಳಿದ್ದು ಮಧ್ಯಾಹ್ನ 3 ಗಂಟೆಗೆ ವಾಪಾಸ್ಸು ಮನೆಗೆ ಬಂದಾಗ ಕಳ್ಳರು ಅವರ ಮನೆಯ ಬಾಗಿಲು ಮುರಿದು ಕಳ್ಳತನ ನಡೆಸಿರುವುದಾಗಿ ತಿಳಿದು ಬಂದಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.