Advertisement

ಆರು ಮುದ್ದೆ ಉಂಡು ಗೆದ್ದ ಈರೇ ಗೌಡ

03:18 PM Jul 02, 2018 | |

ಮಂಡ್ಯ: ನಾಟಿ ಕೋಳಿ ಸಾಂಬಾರ್‌ ನೊಂದಿಗೆ ಮುದ್ದೆತಿನ್ನಲು ರೆಡಿಯಾಗಿ ಬಂದಿದ್ದ ಸ್ಪರ್ಧಿಗಳು, ಮುದ್ದೆ ತಿನ್ನುವವರಿಗೆ ಹುರುಪು ತುಂಬಲು ನೆರೆದಿದ್ದ ಸಾವಿರಾರು ಜನರು, ಸ್ಪರ್ಧೆ ಆರಂಭವಾಗುತ್ತಿದ್ದ ಜನ ಸಮೂಹ ದಿಂದ ಶಿಳ್ಳೆ, ಚಪ್ಪಾಳೆ, ಮುದ್ದೆ ನುಂಗುವುದನ್ನು ನೋಡಲು ನೂಕು ನುಗ್ಗಲು, ವೀಕ್ಷಣೆಗಾಗಿ ಮಹಡಿ ಏರಿದ ಮಹಿಳೆಯರು, ಅಲ್ಲಿಂದಲೇ ಕೇಕೆ ಹಾಕಿ ಸ್ಪರ್ಧಿಗಳನ್ನು ಹುರಿದುಂಬಿಸಿದ ನಾರಿಮಣಿಗಳು.

Advertisement

ಇದು ತಾಲೂಕಿನ ಮಂಗಲ ಗ್ರಾಮದಲ್ಲಿ ಜನತಾ ಟಾಕೀಸ್‌, ನಮ್ಮ ಹೈಕ್ಳು ತಂಡ, ನೆಲದನಿ ಬಳಗ, ಶ್ರೀಸ್ವಾಮಿ ವೀರಾಂಜನೇಯ ಸೇವಾ ಸಮಿತಿ ವತಿಯಿಂದ ಶ್ರೀ ಮಾರ ಮ್ಮನ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ನಾಟಿಕೋಳಿ ಸಾಂಬಾರ್‌ ನೊಂದಿಗೆ ರಾಗಿಮುದ್ದೆ ಉಣ್ಣುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಕಂಡು ಬಂದ ಪ್ರಮುಖ ದೃಶ್ಯಗಳು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ 60 ಮಂದಿ ಸ್ಪರ್ಧಿಗಳಲ್ಲಿ ಹಿರಿಯ ವ್ಯಕ್ತಿ ಅರಕೆರೆ ಈರೇಗೌಡ. 60 ವರ್ಷದ ಅರ ಕೆರೆ ಈರೇ ಗೌಡ ಹದಿನೈದು ನಿಮಿಷದಲ್ಲಿ ನಾಟಿ ಕೋಳಿ ಸಾಂಬಾರ್‌ ನೊಂದಿಗೆ ಆರು ಮುದ್ದೆ ಗುಳುಂ ಮಾಡಿ ಪ್ರಥಮ ಬಹುಮಾನ 5000 ರೂ. ಗೆದ್ದು ಕೊಂಡರು. 

ಸುರೇಶ ಐದು ಮುಕ್ಕಾಲು ಮುದ್ದೆ ತಿಂದು 3000 ರೂ. ದ್ವಿತೀಯ ಬಹುಮಾನ, ರಾಮ ಮೂರ್ತಿ ಐದು ಮುದ್ದೆ ಉಂಡು 2000 ರೂ.ನೊಂದಿಗೆ ತೃತೀಯ ಬಹು ಮಾನ ಪಡೆದುಕೊಂಡರು. ಉಳಿದಂತೆ ಅಂಬರ ಹಳ್ಳಿ ನಂದೀಶ್‌, ಕಾರಸವಾಡಿ ಶಂಕರ್‌, ಹೆಚ್‌.ಡಿ.ಕೋಟೆ ಯೋಗೇಶ್‌, ನಾಗೇಶ್‌ ಅವರು ಸಮಾಧಾನ ಕರ ಬಹುಮಾನವಾಗಿ 1000 ರೂ. ಬಹುಮಾನ ಪಡೆದು ಕೊಂಡರು.

ಪುರುಷರಿಗೆ ಸರಿಸಮನಾಗಿ ಪೈಪೋಟಿ ನೀಡಲು ಏಕೈಕ ಮಹಿಳೆ ಜಯಮ್ಮ 2 ಮುದ್ದೆ ತಿಂದು ಪೈಪೋಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಈ ಸ್ಪರ್ಧೆಗೆ ರಾಮನಗರ, ಟಿ.ನರಸೀಪುರ, ಹೆಚ್‌.ಡಿ.ಕೋಟೆ, ಬೆಂಗಳೂರು, ಬೆಂ. ಗ್ರಾಮಾಂತರ, ತರೀಕೆರೆ ಹಾಸನ, ಹುಣಸೂರು, ಬನ್ನೂರು, ಶ್ರೀರಂಗಪಟ್ಟಣ, ಮಂಡ್ಯ, ಚನ್ನಪಟ್ಟಣ ಸೇರಿದಂತೆ ರಾಜ್ಯದ ವಿವಿಧೆಡೆ ಯಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸ್ಪರ್ಧೆ ವೀಕ್ಷಣೆಗೆ ಆಗಮಿಸಿದ್ದ ಅಕ್ಕಪಕ್ಕದ ಗ್ರಾಮಗಳಿಂದ ಬಂದಿದ್ದ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Advertisement

ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು, ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆ ಮತ್ತು ಕಲೆಗಳನ್ನು ಉಳಿಸುವ ಅಗತ್ಯತೆ ಇದೆ ಗ್ರಾಮೀಣ ಕ್ರೀಡಾ ಕೂಟಗಳನ್ನು ಉಳಿಸಿ ಬೆಳೆಸಿಕೊಂಡು ಬರುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳ ಅಗತ್ಯ ವಿದೆ. ಹಿಂದೆಲ್ಲಾ ಕುಂಟೇ ಬಿಲ್ಲೆ ಸ್ಪರ್ಧೆ, ಅಡುಗೆ ಮಾಡುವ ಸ್ಪರ್ಧೆ, ಊಟದ ಸ್ಪರ್ಧೆಗಳು ಹೆಚ್ಚು ಜನ ಪ್ರಿಯತೆ ಪಡೆದು ಕೊಂಡಿದ್ದವು. ಅವುಗಳನ್ನು ಜೀವಂತಿಕೆ ಕಾಪಾಡಲು ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.

ದೈಹಿಕ ಶಿಕ್ಷಕಿ ಉಷಾರಾಣಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಐಪಿಎಸ್‌ ಅಕಾರಿ ಪ್ರಕಾಶ್‌ಗೌಡ, ಚಿತ್ರನಿರ್ದೇಶಕ ಸೂನಗಹಳ್ಳಿ ರಾಜು, ತಾಪಂ ಅಧ್ಯಕ್ಷೆ ಶೈಲಜಾ ಗೋವಿಂದರಾಜು, ಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೊರೆಸ್ವಾಮಿ, ನೆಲದನಿ ಸಂಘಟನೆಯ ಮಂಗಲ ಲಂಕೇಶ್‌, ಯೋಗೇಶ್‌, ಕುಮಾರ್‌, ಉಮಾಪತಿ, ಎಂ.ಪಿ ದಿವಾಕರ್‌, ಗಾಯಕ ಬಂದೇಶ್‌ ಇತರರಿದ್ದರು.

ಉಳಿವು ಅಗತ್ಯ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ಯುವಕರ ಆಸಕ್ತಿಯ ಮೇಲೆ ನಿಂತಿದೆ. ಇಂತಹ ಕ್ರೀಡೆಗಳನ್ನು ಜಾನಪದ ಲೋಕ ಮತ್ತು ಪರಿಷತ್ತಿನ ವತಿಯಿಂದ ಪ್ರತಿ ಗ್ರಾಮಗಳಲ್ಲೂ ಆಚರಿಸಲು ವ್ಯವಸ್ಥೆ ರೂಪಿಸ
ಲಾಗುತ್ತದೆ. ಗ್ರಾಮೀಣ ಕ್ರೀಡೆಗಳ ಉಳಿವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಈಗಾಗಲೇ ನಾಟಿಕೋಳಿ ಸಾಂಬರ್‌ನಲ್ಲಿ ಮುದ್ದೆ ಉಣ್ಣುವ ಸ್ಪರ್ಧೆಗಳು 9 ಕಡೆ ನಡೆದಿವೆ. ಇದು ಹುಡುಗಾಟದ ಸ್ಪರ್ಧೆಯಲ್ಲ, ಎಚ್ಚರಿಕೆಯ ಜೊತೆಗೆ ಜನಾಕರ್ಷಕ ಸ್ಪರ್ಧೆಯಾಗಿದೆ.  
ಕೆ.ಟಿ. ಶ್ರೀಕಂಠೇಗೌಡ, ವಿಧಾನಪರಿಷತ್‌ ಸದಸ್ಯ 

Advertisement

Udayavani is now on Telegram. Click here to join our channel and stay updated with the latest news.

Next